ADVERTISEMENT

20 ಸೇತುವೆ ಜಲಾವೃತ: ಅಣೆಕಟ್ಟೆಗಳಿಂದ ನೀರು ಬಿಡುಗಡೆ

ಏರಿದ ನದಿಗಳ ಮಟ್ಟ; ಅಣೆಕಟ್ಟೆಗಳಿಂದ ನೀರು ಬಿಡುಗಡೆ, ಜನರಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 5:44 IST
Last Updated 13 ಸೆಪ್ಟೆಂಬರ್ 2022, 5:44 IST
ಬೈಲಹೊಂಗಲ ಸಮೀಪದ ನಯಾನಗರ ಬಳಿ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ
ಬೈಲಹೊಂಗಲ ಸಮೀಪದ ನಯಾನಗರ ಬಳಿ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಸೋಮವಾರ ಕೂಡ ಧಾರಾಕಾರ ಮಳೆ ಮುಂದುವರಿದಿದೆ. ಗೋಕಾಕ, ಚಿಕ್ಕೋಡಿ, ನಿಪ್ಪಾಣಿ, ರಾಮದುರ್ಗ, ಖಾನಾಪುರ, ಬೈಲಹೊಂಗಲ ತಾಲ್ಲೂಕಿನಲ್ಲಿ ಉತ್ತಮ ಮಳೆ ಸುರಿದಿದೆ. ಇದರಿಂದ ಜಿಲ್ಲೆಯ 20 ಸೇತುವೆಗಳು ಮುಳುಗಡೆಯಾಗಿವೆ.

ಇಲ್ಲಿನ ಶಹಾಪುರದ ಭರತ್ ನಗರದ ಬಜಾರ್ ರಸ್ತೆಯಲ್ಲಿ ಹಳೆಯ ಮನೆಯ ಗೋಡೆ ಕುಸಿದಿದೆ. ಅಕ್ಕ ಪಕ್ಕದ ಮನೆಗಳಿಗೂ ಹಾನಿಯಾಗಿದೆ.

65 ಸಾವಿರ ಕ್ಯುಸಕ್ ನೀರು

ADVERTISEMENT

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ತಗ್ಗಿದೆ. ಆದರೂ ಕೃಷ್ಣಾ ಮತ್ತು ಉಪನದಿಗಳ ಒಳಹರಿವಿನಲ್ಲಿ ಹೆಚ್ಚಳ ಕಂಡು ಬಂದಿದೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 44,333 ಕ್ಯುಸೆಕ್ ಮತ್ತು ದೂಧಗಂಗಾ ನದಿಯಿಂದ 21,120 ಕ್ಯುಸೆಕ್ ಸೇರಿದಂತೆ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಒಟ್ಟು 65,453 ಕ್ಯುಸೆಕ್ ನೀರು ಸೇರಿಕೊಳ್ಳುತ್ತಿದೆ.

ತಾಲ್ಲೂಕಿನ ಮಲಿಕವಾಡ ಮತ್ತು ಮಹಾರಾಷ್ಟ್ರದ ದತ್ತವಾಡ ಗ್ರಾಮಗಳ ಮಧ್ಯದ ದೂಧಗಂಗಾ ನದಿಯ ಕಿರು ಸೇತುವೆ ಮುಳುಗಡೆಯಾಗಿದೆ. ತಾಲ್ಲೂಕಿನಲ್ಲಿ ಸಂಭವನೀಯ ನೆರೆ ಹಾವಳಿ ನಿಯಂತ್ರಣಕ್ಕಾಗಿ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ನದಿ ನೀರಿಗೆ ಇಳಿಯಬಾರದು ಎಂದು ಸೂಚನೆ ನೀಡಲಾಗಿದೆ. ಸದ್ಯಕ್ಕೆ ಯಾವುದೇ ರೀತಿಯ ಆತಂಕ ಇಲ್ಲ ಎಂದು ತಾಲ್ಲೂಕು ಆಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

ಸೇತುವೆ ಜಲಾವೃತ

ಮುನವಳ್ಳಿ: ಮಲಪ್ರಭಾ ಅಣೆಕಟ್ಟೆಯಿಂದ ನೀರು ಹರಿಸುತ್ತಿರುವ ಕಾರಣ ಸೋಮವಾರ ಸಂಜೆಗೆ ಮುನವಳ್ಳಿಯ ಹಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.

ಮಲಪ್ರಭಾ ನದಿಯ ಕೆಳಬಾಗದ ರೈತರು ತಮ್ಮ ಜಾನುವಾರು ಹಾಗೂ ಪಂಪ್‌ಸೆಟ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕು ಹಾಗೂ ಸೇತುವೆ ಬಳಿ ಯಾರೂ ಹೋಗಬಾರದು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಗೋಕಾಕದಲ್ಲಿ ಆತಂಕ

ಗೋಕಾಕ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಘಟಪ್ರಭಾ, ಮಾರ್ಕಂಡೇಯ ಮತ್ತು ಉಪ-ನದಿ ಹಿರಣ್ಯಕೇಶಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಸೋಮವಾರ ಸಂಜೆಗೆ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇದರಿಂದ 200ಕ್ಕೂ ಹೆಚ್ಚು ಕುಟುಂಬಗಳು ರಾತ್ರಿ ಜಾಗರಣೆ ಮಾಡುವಂತಾಗಿದೆ.

ಘಟಪ್ರಭಾ ನದಿಯ ಜತ್ತ– ಜಾಂಬೋಟಿ ಅಂತರರಾಜ್ಯ ಹೆದ್ದಾರಿಗಿರುವ ಲೋಳಸೂರ ಸೇತುವೆಯ ಕುತ್ತಿಗೆ ವರೆಗೂ ನೀರು ಹರಿಯುತ್ತಿದೆ. ರಾತ್ರಿ ಇನ್ನಷ್ಟು ನೀರು ಹೆಚ್ಚು ಹರಿದರೆ ಸೇತುವೆ ಸಂಚಾರ ಬಂದ್‌ ಆಗಲಿದೆ.

ಗೋಕಾಕ ಜಲಪಾತ ರಸ್ತೆಯ ಚಿಕ್ಕೋಳಿ ಸೇತುವೆ ಕೂಡ ಇದೇ ಸ್ಥಿತಿಯಲ್ಲಿದೆ. ನದಿ ಆಚೆಯ ಗ್ರಾಮಗಳ ಜನರು ತಮ್ಮ-ತಮ್ಮ ಕೆಲಸಗಳನ್ನು ಬೇಗ ಮುಗಿಸಿಕೊಂಡು ಸೇತುವೆಗಳನ್ನು ದಾಟುವ ತವಕದಲ್ಲಿದ್ದುದು ಕಂಡುಬಂತು.

ಜನಜೀವನ ಅಸ್ತವ್ಯಸ್ಥ

ಬೈಲಹೊಂಗಲ: ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯವಸ್ಥಗೊಂಡಿದೆ.

ಸಮೀಪದ ನಯಾನಗರ ಗ್ರಾಮದ ಮಲಪ್ರಭಾ ನದಿ ನೀರಿನ ಒಳ ಹರಿವು ಮಳೆಯಿಂದ ಹೆಚ್ಚಾಗುತ್ತಿದೆ. ನದಿ ಸುತ್ತಮುತ್ತಲಿನ ಜಮೀನುಗಳಲ್ಲಿ ನದಿ ನೀರು ನುಗ್ಗಿ ಬೆಳೆಗಳು ಜಲಾವೃತಗೊಂಡಿವೆ. ಜಮೀನುಗಳಲ್ಲಿ ಮಳೆ ನೀರು ನಿಂತು ಬೆಳೆಗಳು ಕೊಳೆಯುವ ಆತಂಕವಿದೆ.ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಅಲ್ಲಲ್ಲಿ ಮನೆ ಗೋಡೆ ಕುಸಿದು ಬಿದ್ದಿವೆ.

ಧಾರಾಕಾರ ಮಳೆಗೆ ಸೊಗಲ ಸೋಮೇಶ್ವರ ದೇವಸ್ಥಾನ, ಚಿಕ್ಕ ಸೊಗಲದ ಜಲಪಾತಗಳು ಧುಮ್ಮಿಕ್ಕುತ್ತಿವೆ. ಎರಡು ದೇವಸ್ಥಾನದ ದಭೆದಭೆಯಿಂದ ಹರಿದು ಬರುತ್ತಿರುವ ಮಳೆ ನೀರಲ್ಲಿ ಪ್ರವಾಸಿಗರು ಸ್ನಾನ ಮಾಡಿ ಸಂಭ್ರಮಿಸುವುದು ಸಾಮಾನ್ಯವಾಗಿದೆ.

ಶಿರೂರ ಡ್ಯಾಮ್‌ನಿಂದ ನೀರು ಹೊರಕ್ಕೆ

ಯಮಕನಮರಡಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಕಳೆದ ಎರಡು ದಿನದಿಂದ ಧಾರಾಕಾರ ಮಳೆಯಾಗುತ್ತಿರುವ ಕಾರಣ ಮಾರ್ಕಂಡೆಯ ಜಲಾಶಯಕ್ಕೆ 2,850 ಕ್ಯುಸಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ಹುಕ್ಕೇರಿ ತಾಲ್ಲೂಕಿನ ಶಿರೂರ ಕಿರು ಅಣೆಕಟ್ಟಯ ಮೂರು ಗೇಟ್‌ಗಳ ಮೂಲಕ ಹರಿಸಲಾಗುತ್ತಿದೆ ಎಂದು ಹಿಡಕಲ್‌ ಜಲಾಶಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶಾಂತಾರಾಮ ಎತ್ತೆಣ್ಣವರ ತಿಳಿಸಿದ್ದಾರೆ.

ಪಾಶ್ಚಾಪೂರ, ಬಸಾಪೂರ, ಬಗರನಾಳ ಇನ್ನಿತರ ಗ್ರಾಮದ ಜನರು ತಮ್ಮ ಜಾನುವಾರುಗಳನ್ನು ನದಿ ತೀರದ ಹೊಲಗಳಿಂದ ಮನೆಗಳಿಗೆ ಕರೆತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.