ಬೆಳಗಾವಿ: ‘ರಾಜಹಂಸಗಡ ಕೊಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಮೂರ್ತಿ ಪ್ರತಿಷ್ಠಾಪನೆಯ ನಂತರ ದೊಡ್ಡ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಮುಂದಿನ ಐದು ವರ್ಷದಲ್ಲಿ ಇದೊಂದು ಪ್ರವಾಸಿ ಕೇಂದ್ರವಾಗಿ ಬೆಳೆಯುವ ಜೊತೆಗೆ, ಗ್ರಾಮವೂ ಸಾಕಷ್ಟು ಅಭಿವೃದ್ಧಿ ಆಗಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ತಾಲ್ಲೂಕಿನ ರಾಜಹಂಸಗಡ ಗ್ರಾಮದಲ್ಲಿ ಸೋಮವಾರ ಮರಗಾಯಿ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಮಹಾಪ್ರಸಾದ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜಹಂಸಗಡ ಕೋಟೆ ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿಯ ಭೂಮಿಗೂ ಉತ್ತಮ ಬೆಲೆ ಬರಲಿದೆ. ಜನರಿಗೆ ಉದ್ಯೋಗಾವಕಾಶ ಹೆಚ್ಚಲಿದೆ. ವ್ಯಾಪಾರ ವಹಿವಾಟು ಸುಧಾರಣೆಯಾಗಲಿದೆ. ಒಟ್ಟಾರೆ ಗ್ರಾಮ ಉತ್ತಮ ರೀತಿಯಲ್ಲಿ ಬೆಳವಣಿಗೆ ಕಾಣಲಿದೆ’ ಎಂದರು.
‘ಕ್ಷೇತ್ರದ ಯಾವುದೇ ಭಾಗದ ಜನ ಬಂದು ಕೇಳಿದರೂ ಕೆಲಸ ಮಾಡಿಕೊಡುತ್ತಿದ್ದೇನೆ. ಮೊದಲು ಬೆಳಗಾವಿ ಗ್ರಾಮೀಣ ಕ್ಷೇತ್ರ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಈಗ ರಾಜ್ಯದ ಯಾವ ಮೂಲೆಗೆ ಹೋದರೂ ಬೆಳಗಾವಿ ಗ್ರಾಮೀಣ ಕ್ಷೇತ್ರ ಚಿರಪರಿಚಿತವಾಗಿದೆ. ಬಾರಾಮತಿಯ ಮಾದರಿಯಲ್ಲಿ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕೆನ್ನುವ ಕನಸು ಹೊತ್ತು ಕೆಲಸ ಮಾಡುತ್ತಿದ್ದೇನೆ. ಚುನಾವಣೆ ಮುಗಿದ ನಂತರ ಯಾವುದೇ ರಾಜಕಾರಣವಿಲ್ಲದೆ ಎಲ್ಲರನ್ನೂ ಒಟ್ಟಾಗಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ 140ಕ್ಕೂ ಹೆಚ್ಚು ಮಂದಿರಗಳನ್ನು ನಿರ್ಮಾಣ ಮಾಡಲಾಗಿದೆ’ ಎಂದು ಸಚಿವೆ ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಯುವರಾಜ ಕದಂ ಮಾತನಾಡಿ, ‘ ಲಕ್ಷ್ಮಿ ಹೆಬ್ಬಾಳಕರ ಸಚಿವರಾದ ನಂತರ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಂಡಿದೆ. ಪಕ್ಷ ಭೇದ ಮರೆತು ಎಲ್ಲರ ಕೆಲಸ ಮಾಡಿಕೊಡುತ್ತಿದ್ದಾರೆ. ಸಾಕಷ್ಟು ಜನರಿಗೆ ಉದ್ಯೋಗಕ್ಕೆ, ಶಿಕ್ಷಣಕ್ಕೆ ನೆರವಾಗಿದ್ದಾರೆ’ ಎಂದು ತಿಳಿಸಿದರು.
ಸ್ಥಳೀಯ ಮಹಿಳೆಯರಿಗೆ ವಿವಿಧ ಮಾಸಾಶನಗಳ ಆದೇಶ ಪತ್ರಗಳನ್ನು ಸಚಿವೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸಿದ್ದಪ್ಪ ಛತ್ರೆ, ದತ್ತಾ ಪವಾರ, ಬಾಹು ಪವಾರ, ಲಕ್ಷ್ಮಣ ಚೌಹಾನ್, ಪರಶುರಾಮ ನಿಲಜಕರ, ಸಿದ್ದಪ್ಪ ಪಂಜಾಕರ, ರಾಮಾ ಥೋರಾವತ್, ರಾಜು ಯಳೇಬೈಲಕರ, ರಾಮಚಂದ್ರ ಗಡ್ಕರಿ, ಯಲ್ಲಪ್ಪ ಥೋರಾವತ್, ಗುಂಡು ನಿಲಗಟ್ಕರ, ಸಿಪಿಐ ನಾಗನಗೌಡ, ಕೃಷ್ಣ ತಾವಸೆ ಮೊದಲಾದವರು ಇದ್ದರು.
ದರ್ಗಾ ಸಮುದಾಯ ಭವನ ಉದ್ಘಾಟನೆ
ಬೆಳಗಾವಿ: ತಾಲ್ಲೂಕಿನ ಮುತ್ನಾಳ ಗ್ರಾಮದಲ್ಲಿ ₹20 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನಬೀ ಸಾಹೇಬ ದರ್ಗಾ ಸಮುದಾಯ ಭವನವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಉದ್ಘಾಟಿಸಿದರು. ಈ ವೇಳೆ ಕೇದಾರ ಶಾಖಾ ಪೀಠದ ಶಿವಾನಂದ ಶಿವಾಚಾರ್ಯರು ಅಶ್ರಫ್ ಪೀರ್ ಖಾದ್ರಿ ಅಜ್ಜನವರು ಪಿ.ಜೆ.ಪಾರಿಶ್ವಾಡ ಅಡಿವೆಪ್ಪ ಪಾಟೀಲ ದೇವೇಂದ್ರ ತಿಗಡಿ ಸುನೀಲ ಅಂಕಲಗಿ ರುದ್ರಪ್ಪ ಮಂಗಳಗಟ್ಟಿ ಬಸನಗೌಡ ಹುಬ್ಬಳ್ಳಿ ಸಲೀಂ ನದಾಫ ಇದ್ದರು. ನಂತರ ಕ್ಷೇತ್ರದ ವಿವಿಧೆಡೆ ಸಂಚಿರಿಸಿದ ಸಚಿವೆ ಗಣಪತಿ ಪೆಂಡಾಲುಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.