ರಾಮದುರ್ಗ: ಭಾರತ ದೇಶದಲ್ಲಿ ಸಂಸ್ಕಾರ, ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸಂಸ್ಕೃತಿ ಹಾಳಾದರೆ ಮಾನವ ಇದ್ದು ಇಲ್ಲದಂತಾಗುತ್ತದೆ. ಮಕ್ಕಳಿಗೆ ಮುಖ್ಯವಾಗಿ ಶೈಕ್ಷಣಿಕವಾಗಿ ಸುಧಾರಣೆ ಹೊಂದುವುದಲ್ಲದೆ ಸಂಸ್ಕೃತಿ ಬೆಳೆಸಬೇಕು ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಗುರುವಾರ ತಾಲ್ಲೂಕಿನ ಮುಳ್ಳೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬೀರಲಿಂಗೇಶ್ವರ ಹಾಗೂ ವಿಠ್ಠಪ್ಪ ದೇವರ ದೇವಸ್ಥಾನ ಉದ್ಘಾಟನೆ, ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ನಡೆಯುವ ಜಾತ್ರೆಗಳು ಸೌಹಾರ್ದತೆಯ ಪ್ರತೀಕವಾಗಿವೆ. ಜಾತ್ರೆಗಳಲ್ಲಿ ಜಾತಿ, ಮತ, ಪಂತ, ರಾಜಕೀಯ, ಬಡವ ಮತ್ತು ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರೂ ಸೇರಿ ಆಚರಿಸುತ್ತಾರೆ.ಇಂದಿನ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಆದ್ಯತೆ ನೀಡುವಷ್ಟು ಮಹತ್ವವನ್ನು ಮತ್ಯಾವದೆ ಕಾರ್ಯಕ್ಕೆ ನೀಡುವದಿಲ್ಲ. ಐದು ನೂರು ವರ್ಷಗಳ ನಂತರ ನಡೆದ ರಾಮಮಂದಿರ ಉದ್ಘಾಟನೆ ಹಾಗೂ ಇತ್ತಿಚೆಗೆ ನಡೆದ ಪ್ರಯಾಗರಾಜ್‍ದ ಕುಂಭಮೇಳಗಳು ಸಾಕ್ಷಿಯಾಗಿವೆ ಎಂದು ಹೇಳಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಎ ಮಾತನಾಡಿ, ಗ್ರಾಮಗಳಲ್ಲಿ ಎಲ್ಲ ಜನಾಂಗದ ಸಹಕಾರದಿಂದ ನಿರ್ಮಾಣವಾದ ದೇವಸ್ಥಾನ ಮತ್ತು ಸಮುದಾಯ ಭವನಗಳು ಪಾವಿತ್ರ್ಯತೆ ಕಾಯ್ದುಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರೇಣಪ್ಪ ಸೋಮಗೊಂಡ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ಸಾನಿಧ್ಯ ವಹಿಸಿದ್ದ ಮುಳ್ಳೂರಿನ ಚಂದ್ರಶೇಖರ ಶಿವಾಚಾರ್ಯರು, ತೊರಗಲ್‍ದ ಚನ್ನಮಲ್ಲಶಿವಾಚಾರ್ಯರು, ಹುಲಜಂತಿಯ ಮಾಳಿಂಗರಾಯ ಮಹಾರಾಜರು ಆಶಿರ್ವಚನ ನೀಡಿದರು.
ವೇದಿಕೆಯಲ್ಲಿ ಕಟಕೋಳದ ಅಭಿನವ ಸಿದ್ಧರಾಜರು, ವೇದಮೂರ್ತಿ ಮಲ್ಲಯ್ಯಸ್ವಾಮಿಗಳು, ಬಿಜೆಪಿ ಮುಖಂಡ ಪಿ.ಎಫ್. ಪಾಟೀಲ, ರಾಜ್ಯ ಕುರುಬರ ಸಂಘದ ನಿರ್ದೇಶಕ ಅಶೋಕ ಮೆಟಗುಡ್ಡ, ಬಸವರಾಜ ಸೋಮಗೊಂಡ, ಎಚ್. ಬಿ. ಕಿತ್ತೂರ, ಮಲ್ಲಪ್ಪ ಸೋಮಗೊಂಡ, ಸಿದ್ದು ಮೋಟೆ ಸೇರಿದಂತೆ ಅನೇಕರು ಇದ್ದರು.
ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಪಡಿಯಪ್ಪ ಕ್ವಾರಿ ಪ್ರಾಸ್ತಾವಿಕ ಮಾತನಾಡಿದರು. ಎಸ್.ವಿ.ಕಲ್ಯಾಣಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.