ADVERTISEMENT

ರಾಮಾಯಣದ ಮೌಲ್ಯಗಳು ದಾರಿದೀಪ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 10:43 IST
Last Updated 20 ಅಕ್ಟೋಬರ್ 2021, 10:43 IST
ಬೆಳಗಾವಿಯ ಕೋಟೆ ಕೆರೆ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಅಂಗವಾಗಿ ನಡೆದ ಫೋಟೊ ಪೂಜೆ ಕಾರ್ಯಕ್ರಮದಲ್ಲಿ ಮುಖಂಡ ರಾಜಶೇಖರ ತಳವಾರ ಮಾತನಾಡಿದರು. ಡಿಸಿಪಿ ವಿಕ್ರಂ ಅಮಟೆ, ಎಸ್ಪಿ ಲಕ್ಷ್ಮಣ ನಿಂಬರಗಿ, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಸಂಸದೆ ಮಂಗಲಾ ಸುರೇಶ ಅಂಗಡಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ ಇದ್ದಾರೆ
ಬೆಳಗಾವಿಯ ಕೋಟೆ ಕೆರೆ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಅಂಗವಾಗಿ ನಡೆದ ಫೋಟೊ ಪೂಜೆ ಕಾರ್ಯಕ್ರಮದಲ್ಲಿ ಮುಖಂಡ ರಾಜಶೇಖರ ತಳವಾರ ಮಾತನಾಡಿದರು. ಡಿಸಿಪಿ ವಿಕ್ರಂ ಅಮಟೆ, ಎಸ್ಪಿ ಲಕ್ಷ್ಮಣ ನಿಂಬರಗಿ, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಸಂಸದೆ ಮಂಗಲಾ ಸುರೇಶ ಅಂಗಡಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ ಇದ್ದಾರೆ   

ಬೆಳಗಾವಿ: ‘ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣದಲ್ಲಿ ಉಲ್ಲೇಖಿಸಿರುವ ಅಂಶಗಳು ಇಂದಿಗೂ ಪ್ರಸ್ತುತವಾಗಿವೆ ಮತ್ತು ಅದರಲ್ಲಿನ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪವಾಗಿವೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಸರ್ಕಾವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಲಾಗಿದೆ. ಜನರು ಸೌಲಭ್ಯಗಳ ಪ್ರಯೋಜನ ಪಡೆದುಕೊಂಡು ಮುಂದೆ ಬರಬೇಕು ಮತ್ತು ಮಕ್ಕಳು ವಿದ್ಯಾವಂತರಾಗಬೇಕು’ ಎಂದು ಹೇಳಿದರು.

ADVERTISEMENT

ಭೂ ಹಿಡುವಳಿ ಯೋಜನೆ ಜಾರಿ:

‘ಪರಿಶಿಷ್ಟ ಪಂಗಡದ 6ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತಿದೆ. ಅಂತರ್ಜಾತಿ ವಿವಾಹ ಮಾಡಿಕೊಂಡಲ್ಲಿ ಧನ ಸಹಾಯ ಒದಗಿಸಲಾಗುತ್ತಿದೆ. ವಿಶೇಷವಾಗಿ ಭೂಹಿಡುವಳಿ ಯೋಜನೆ ಜಾರಿಗೆ ತಂದಿದ್ದು, ಭೂರಹಿತ ಪರಿಶಿಷ್ಟ ಪಂಗಡದವರಿಗೆ ಭೂಮಿ ಹಂಚುವ ಕಾರ್ಯ ಮಾಡಲಾಗುತ್ತಿದೆ. ಇದಲ್ಲದೇ ಪರಿಶಿಷ್ಟ ವರ್ಗಗಳ ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಉಪನ್ಯಾಸ ನೀಡಿದ ಬಾದಾಮಿಯ ಡಿ.ಬಿ. ಹಡಗಲಿ, ‘ನಿಸರ್ಗದ ಜೊತೆ ಸಂಪರ್ಕ ಹೊಂದಿದ್ದ ವಾಲ್ಮೀಕಿ ಅವರಲ್ಲಿ ಕವಿತ್ವದ ಗುಣವಿತ್ತು. ರಾಮಾಯಣ ಎಂಬ ಮಹಾಕಾವ್ಯವು ಅದರ ಕೊಡುಗೆಯಾಗಿದೆ. ರಾಜನೀತಿ, ಮನೋಧರ್ಮ ಮತ್ತು ಪ್ರಜಾಪ್ರಭುತ್ವವನ್ನು ರಾಮಾಯಣ ಮಹಾಕಾವ್ಯವು ಪರಿಚಯಿಸಿದೆ’ ಎಂದರು.

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 625 ಅಂಕಕ್ಕೆ 623 ಅಂಕ ಗಳಿಸಿದ ರಾಯಬಾಗ ತಾಲ್ಲೂಕಿನ ಚಂದ್ರಪ್ರಭಾ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮಿ ನಾಯಕ ಅವರನ್ನು ಸನ್ಮಾನಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಸಿಪಿ ವಿಕ್ರಂ ಅಮಟೆ, ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಪ್ರಕಾಶ ವಡ್ಡರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ, ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಹಾಗೂ ವಾಲ್ಮೀಕಿ ಸಮಾಜದ ಮುಖಂಡ ರಾಜಶೇಖರ ತಳವಾರ ಪಾಲ್ಗೊಂಡಿದ್ದರು.

ವೇದಿಕೆಗೆ ‘ದಿ. ಭೀಮವ್ವ ಲಕ್ಷ್ಮಣರಾವ ಜಾರಕಿಹೊಳಿ ವೇದಿಕೆ’ ಹೆಸರಿಡಲಾಗಿತ್ತು.

ಪರಿಶಿಷ್ಟ ಪಂಗಡಗಳ ಕಲ್ಯಾಣ ಜಿಲ್ಲಾ ಅಧಿಕಾರಿ ಸದಾಶಿವ ಬಡಿಗೇರ ಸ್ವಾಗತಿಸಿದರು. ತಾಲ್ಲೂಕು ಅಧಿಕಾರಿ ಪ್ರವೀಣ ಪಾಟೀಲ ವಂದಿಸಿದರು.

ಇದಕ್ಕೂ ಮುನ್ನ ಕೋಟೆ ಕೆರೆ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಫೋಟೊಗೆ ಪೂಜೆ ಸಲ್ಲಿಸಲಾಯಿತು. ಕೋವಿಡ್ ಕಾರಣದಿಂದ ಮೆರವಣಿಗೆ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.