ರಾಮದುರ್ಗ: ಇಲ್ಲಿನ ಬಾಣಕಾರ ಪೇಟೆಯ ಬನಶಂಕರಿ ದೇವಿ ಜಾತ್ರೆ ಈ ವರ್ಷ ಶತಮಾನದ ಸಂಭ್ರಮದಲ್ಲಿದ್ದು, ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಫೆ.8ರಿಂದ 16ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ. ಫೆ.12ರಂದು ಸಂಜೆ ವೈಭವದ 100ನೇ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.
ಪ್ರತಿವರ್ಷ ಭರತ ಹುಣ್ಣಿಮೆ ದಿನ ಸಂಜೆ ಇಲ್ಲಿ ಸಂಭ್ರಮದಿಂದ ಬನಶಂಕರಿ ರಥೋತ್ಸವ ನಡೆಯುತ್ತದೆ. ಪಟ್ಟಣದ ಏಳು ಪೇಟೆಗಳ ನೇಕಾರರ ಜತೆಗೆ, ಉಳಿದ ಸಮುದಾಯದವರು ತೇರು ಎಳೆದು ಸಂಭ್ರಮಿಸುತ್ತಾರೆ.
ಶತಮಾನೋತ್ಸವ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿ, ಗ್ರಾಮದೇವಿ ಜಾತ್ರೆ ಮಾದರಿಯಲ್ಲೇ ಅದ್ದೂರಿಯಾಗಿ ಈ ಜಾತ್ರೆಯನ್ನೂ ಮಾಡಲಾಗುತ್ತಿದೆ. ಇದಕ್ಕಾಗಿ ಶತಮಾನೋತ್ಸವ ಆಚರಣೆ ಸಮಿತಿಯವರು ವಿವಿಧ ಸಮಿತಿ ರಚಿಸಿದ್ದು, ಜಾತ್ರೆಗೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸುವಲ್ಲಿ ನಿರತವಾಗಿದ್ದಾರೆ.
ಫೆ.8ರಿಂದ ನಾಲ್ಕು ದಿನ ನಡೆಯುವ ವಾಹನೋತ್ಸವ, 12ರಂದು ಜರುಗುವ ರಥೋತ್ಸವ ಮತ್ತು ಭಕ್ತರ ಪ್ರಸಾದಕ್ಕಾಗಿ ವಿವಿಧ ಖಾದ್ಯಗಳ ತಯಾರಿಕೆಗೆ ನೇಕಾರ ಸಮುದಾಯದವರು ಮುಂದಾಗಿದ್ದಾರೆ. ವಿವಿಧ ಆಟಿಕೆಗಳು, ಸಾಹಸ ಪ್ರದರ್ಶನಗಳು ಜಾತ್ರೆಗೆ ಮೆರುಗು ತಂದುಕೊಡಲಿವೆ.
ಫೆ.12ರಿಂದ 16ರ ವರೆಗೆ ಪ್ರತಿದಿನ ರಾತ್ರಿ ನಾಡಿನ ಹೆಸರಾಂತ ಕಲಾವಿದರಿಂದ ಮನರಂಜನೆ, ರಸಮಂಜರಿ, ಹಾಸ್ಯ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ವಿವಿಧ ಜಾನಪದ ಕಲಾ ತಂಡದವರು ಜನರಿಗೆ ಸಂಗೀತದ ರಸದೌತಣ ಉಣಬಡಿಸಲಿದ್ದಾರೆ.
ಜಾತ್ರೆ ಪ್ರಯುಕ್ತ ನೇಕಾರರು ತಮ್ಮ ಮನೆಗಳನ್ನು ಸುಣ್ಣ–ಬಣ್ಣದಿಂದ ಅಲಂಕರಿಸುತ್ತಿದ್ದಾರೆ. ಮನೆಗೆ ಬರುವ ಬೀಗರಿಗಾಗಿ ವಿಶೇಷ ಖಾದ್ಯ ಸಿದ್ಧಪಡಿಸುತ್ತಿದ್ದಾರೆ. ದೇವಸ್ಥಾನ ಮತ್ತು ರಥದ ಅಲಂಕಾರ ಪ್ರಕ್ರಿಯೆ ಭರದಿಂದ ಸಾಗಿದೆ.
ಜಾತ್ರೆಯ ಶತಮಾನೋತ್ಸವದ ಸವಿನೆನಪಿಗಾಗಿ ಸಮಿತಿಯವರು ನೇಕಾರ ಸಮುದಾಯ ಬಡವರನ್ನು ಗುರುತಿಸಿ, ಫೆ.16ರಂದು 21 ಜೋಡಿಗಳ ಸಾಮೂಹಿಕ ವಿವಾಹಕ್ಕೆ ನಿರ್ಧರಿಸಿರುವುದು ವಿಶೇಷ.
ಜಾತ್ರೆಗೆ ಬರುವ ಭಕ್ತರಿಗಾಗಿ ಸಿಹಿಯೂಟದ ವ್ಯವಸ್ಥೆ ಮಾಡಲಾಗಿದೆ. ಫೆ.13ರಂದು ಹುಗ್ಗಿ, 14ರಂದು ಸಜ್ಜಕ, 15ರಂದು ಬುಂದಿ, 16ರಂದು ಕರಿಗಡಬು ಉಣಬಡಿಸಲು ತೀರ್ಮಾನಿಸಲಾಗಿದೆ.
ಶತಮಾನದಿಂದ ನಡೆಯುತ್ತಿರುವ ಜಾತ್ರೆಯಲ್ಲಿ ನೇಕಾರರ ಜತೆಗೆ ಉಳಿದ ಸಮಾಜದವರು ಪಾಲ್ಗೊಂಡು ಯಶಸ್ವಿಗೊಳಿಸಬೇಕುನಾರಾಯಣಪ್ಪ ಬೆನ್ನೂರ, ಅಧ್ಯಕ್ಷ ಬನಶಂಕರಿ ದೇವಾಂಗ ಸಮಾಜ ರಾಮದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.