ADVERTISEMENT

ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ: ಮುಗಿದ ಅಧ್ಯಾಯ ಎಂದ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 12:18 IST
Last Updated 10 ಜುಲೈ 2021, 12:18 IST
ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ
ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ   

ಬೆಳಗಾವಿ: ‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ವಿಚಾರ ಮಾಡಿದ್ದು ನಿಜ. ಆದರೆ, ಈಗ ಅದು ಮುಗಿದ ಅಧ್ಯಾಯ’ ಎಂದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.

ಗೋಕಾಕ ತಾಲ್ಲೂಕಿನ ಅಂಕಲಗಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶನಿವಾರ ಮಾತನಾಡಿದ ಅವರು, ‘ಹಿತೈಷಿಗಳು ಹಾಗೂ ಸ್ವಾಮೀಜಿಗಳು ರಾಜೀನಾಮೆ ನೀಡದಂತೆ ಸಲಹೆ ಕೊಟ್ಟಿದ್ದಾರೆ. ಆ ಹಿರಿಯರ ಸಲಹೆ ಆಧರಿಸಿ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

‘ಜಂಟಿ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಸ್ಪಷ್ಟಪಡಿಸುತ್ತೇವೆ’ ಎಂದು ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರಲ್ಲಾ ಎಂಬ ಪ್ರಶ್ನೆಗೆ, ‘ಬಾಲಚಂದ್ರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ‌. ಆ ಬಗ್ಗೆ ಅವರೊಂದಿಗೆ ಮಾತನಾಡುತ್ತೇನೆ. ನಾನು ಬೆಂಗಳೂರು ಮತ್ತು ಮುಂಬೈಗೆ ಹೋಗಿದ್ದೆ. ಸುದ್ದಿಗೋಷ್ಠಿ ಮಾಡುವ ಸಂದರ್ಭ ಈಗ ಬಂದಿಲ್ಲ. ನಾನು ಒಂಟಿಯಾಗುವ ಪ್ರಶ್ನೆಯೇ ಇಲ್ಲ. ಮಿತ್ರ ಮಂಡಳಿ ಸದಸ್ಯರನ್ನು ಭೇಟಿಯಾಗಲು ಸಾಧ್ಯವಾಗಿಲ್ಲವಷ್ಟೆ’ ಎಂದು ಹೇಳಿದರು.

ADVERTISEMENT

ಕೆಆರ್‌ಎಸ್ ಜಲಾಶಯದ ವಿಷಯದಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸಮಲತಾ ನಡುವೆ ಮಾತಿನ ಸಮರ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾರು ಏನು ಮಾತನಾಡಿದ್ದಾರೋ ಜಾಸ್ತಿ ಮಾಹಿತಿ ಇಲ್ಲ. ಜಲಾಶಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೇ ಸ್ಪಷ್ಟನೆ ನೀಡಿದ್ದಾರೆ. ಅವರು ಹೇಳುವುದೇ ಅಂತಿಮ. ಜಲಾಶಯ ಬಿರುಕು ಬಿಟ್ಟಿದೆ ಎಂದು ಸುಮಲತಾ ಯಾಕೆ ಹೇಳಿದರೋ ಗೊತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.