ADVERTISEMENT

ಹಿರಾ ಶುಗರ್ಸ್ ಮತ್ತೆ ಜೊಲ್ಲೆ ಕಡೆಗೆ ಹೋಗಿದ್ದು ಬೇಜಾರಾಗಿಲ್ಲ: ರಮೇಶ್ ಕತ್ತಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:46 IST
Last Updated 15 ಆಗಸ್ಟ್ 2025, 5:46 IST
ರಮೇಶ್ ಕತ್ತಿ
ರಮೇಶ್ ಕತ್ತಿ   

ಹುಕ್ಕೇರಿ: ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಜೊತೆಗೆ ಹೋಗಿದ್ದರು. ನಂತರ ಕೊಡಮಾಡಿದ ಸಾಲಕ್ಕೆ ಬಡ್ಡಿ ಹೆಚ್ಚು ಹಾಕುತ್ತಿದ್ದಾರೆ ಎಂದು ಮರಳಿ ನಮ್ಮ ಕಡೆ ಬಂದಿದ್ದರು. ಈಗ ಮತ್ತೆ ಜೊಲ್ಲೆ ಅವರ ಕಡೆಗೆ ಹೋಗಿದ್ದಾರೆ. ಇದರಿಂದ ನಮಗೇನು ಬೇಜಾರಿಲ್ಲ ಎಂದು ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್ ಕತ್ತಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಮಾಧ್ಯಮದವರ ಜತೆ ಮಾತನಾಡಿ, ಆಡಳಿತ ಮಂಡಳಿ ತಮಗೆ ಸಹಕಾರ ನೀಡಲಿಲ್ಲ ಎಂದು ಆರೋಪ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಕತ್ತಿ ಅವರು, ಮಾಜಿ ಸಚಿವ ಎ.ಬಿ.ಪಾಟೀಲ್ ಮತ್ತು ನಾನು 150 ಕೋಟಿ ಹೊಂದಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಸ್ವಲ್ಪ ತಡೆಯಿರಿ ಹಣ ಹೊಂದಿಸಿ ಕೊಡುತ್ತೇವೆ ಎಂದೆವು ಎಂದರು.

ಹೊಂದಿಸಲಿಕ್ಕೆ ಸಮಯ ಬೇಕು?: ಯಾರೇ ಆಗಲಿ ದೊಡ್ಡ ಮೊತ್ತದ ಹಣವನ್ನು ಮನೆಯಲ್ಲಿ ಇರಿಸಿರುವುದಿಲ್ಲ. ಹೂಡಿಕೆ ಮಾಡಿರುತ್ತಾರೆ. ನಮ್ಮ ಬಳಿ ಅಷ್ಟು ಮೊತ್ತದ ಸಾಲ ಕೊಡುವ ದೊಡ್ಡ ಬ್ಯಾಂಕು ಇಲ್ಲ. ಬೇರೆಡೆ ಹೂಡಿದ ಹಣವನ್ನು ಮರಳಿ ಪಡೆಯಲಿಕ್ಕೆ ಸಮಯ ಬೇಕಾಗುತ್ತದೆ.ಅದಕ್ಕಾಗಿ ಕಾಯಿರಿ ಎಂದರೆ, ಅವರು ಕಾಯದೆ ಮತ್ತೆ ಜೊಲ್ಲೆ ಕಡೆಗೆ ಹೋಗಿದ್ದಾರೆ. ಅವರವರ ನಡುವೆ ಏನು ಮಾತು ಕತೆಯಾಗಿದೆ ನಮಗೆ ಗೊತ್ತಿಲ್ಲ ಎಂದರು.

ADVERTISEMENT

ಇಷ್ಟರಲ್ಲಿ ಎ.ಬಿ.ಪಾಟೀಲರು ಸುಮಾರು ರೂ. 25 ಕೋಟಿ ಮತ್ತು ನಾನು ಸುಮಾರು ₹ 35 ಕೋಟಿ ಹಣ ಹೊಂದಿಸಿದ್ದೇವು. ಅವರೇ ಅಲ್ಲಿಗೆ ಹೋದಮೇಲೆ ನಾವೇನು ಮಾಡಲಿಕ್ಕೆ ಆಗತ್ತೆ ಎಂದರು.

ಪ್ರಾರಂಭವಾದರೆ ಸಾಕು: ಸಹಕಾರಿ ವಲಯದಲ್ಲಿ ಯಾರೇ ಕಾರ್ಖಾನೆ ಪ್ರಾರಂಭಿಸಿದರೂ ಅದನ್ನು ನಾವು ಸ್ವಾಗತಿಸುತ್ತೇವೆ."ಗನ್ ಪೊಯಿಂಟ್ " ಇಟ್ಟು ವ್ಯವಹರಿಸಿದರೆ ಯಾವ ಕೆಲಸವೂ ಆಗುವುದಿಲ್ಲ ಎಂದು ಪರೋಕ್ಷವಾಗಿ ಹಿರಾ ಶುಗರ್ಸ್ ಆಡಳಿತ ಮಂಡಳಿಗೆ ತಿವಿದರು.

ಕಾರ್ಖಾನೆ ಪ್ರಾರಂಭವಾಗಿ ನಮ್ಮ ರೈತರ ಕಬ್ಬು ಅರೆದು ಬಿಲ್ ಕೊಟ್ಟರೆ ಸಾಕು. ಅವರು ನಮ್ಮನ್ನು ಬಿಟ್ಟು ಹೋದದ್ದು ನಮಗೇನೂ ಬೇಜಾರಿಲ್ಲ ಎಂದು ಪುನರುಚ್ಛರಿಸಿದರು.

ಪುರಸಭೆ ಸದಸ್ಯರಾದ ಮಹಾವೀರ ನಿಲಜಗಿ, ಅಣ್ಣಾಗೌಡ ಪಾಟೀಲ್, ರಾಜು ಮುನ್ನೋಳಿ, ಮುಖಂಡರಾದ ಗುರು ಕುಲಕರ್ಣಿ, ಚನ್ನಪ್ಪ ಗಜಬರ್, ಸುಹಾಸ ನೂಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.