ADVERTISEMENT

ರಾಮದುರ್ಗ: ರಾಮೇಶ್ವರದಿಂದ ಅಯೋಧ್ಯೆಗೆ ರಾಮೋತ್ಸವ ಯಾತ್ರೆ

ಶ್ರೀರಾಮ ಭೇಟಿಯ ಸ್ಥಳಗಳ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 15:45 IST
Last Updated 28 ಜನವರಿ 2024, 15:45 IST
ರಾಮದುರ್ಗ ತಾಲ್ಲೂಕಿನ ಶಬರಿ ಕೊಳ್ಳದ ಶ್ರೀರಾಮಭಕ್ತೆ ಶಬರಿ ವನಕ್ಕೆ ಆಗಮಿಸಿದ ಯುವಕರ ತಂಡ ಶ್ರೀರಾಮ ದೇವಸ್ಥಾನದ ದರ್ಶನ ಪಡೆದುಕೊಂಡರು
ರಾಮದುರ್ಗ ತಾಲ್ಲೂಕಿನ ಶಬರಿ ಕೊಳ್ಳದ ಶ್ರೀರಾಮಭಕ್ತೆ ಶಬರಿ ವನಕ್ಕೆ ಆಗಮಿಸಿದ ಯುವಕರ ತಂಡ ಶ್ರೀರಾಮ ದೇವಸ್ಥಾನದ ದರ್ಶನ ಪಡೆದುಕೊಂಡರು   

ರಾಮದುರ್ಗ: ರಾಮಾಯಣದಲ್ಲಿ ಸೀತೆಯ ಅಪಹರಣದ ನಂತರ ಅನ್ವೇಷಣೆ ನಡೆಸಿದ ಶ್ರೀರಾಮ ದೇಶದ ಯಾವ ಮಾರ್ಗದಲ್ಲಿ ಸಂಚರಿಸಿದ ಎನ್ನುವುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಯುವಕರಿಗೆ ತಿಳಿವಳಿಕೆ ನೀಡುವ ವಾನರ ಸೇನೆಯು ಭಾನುವಾರ ತಾಲ್ಲೂಕಿನ ಶಬರಿ ದೇವಸ್ಥಾನಕ್ಕೆ ಭೇಟಿ ನೀಡಿತು.

ಸೀತೆಯ ಅನ್ವೇಷಣೆಯಲ್ಲಿ ಶ್ರೀರಾಮ ರಾಮದುರ್ಗ ತಾಲ್ಲೂಕಿನ ಸುರೇಬಾನ ಸಮೀಪದ ಶಬರಿ ಕೊಳ್ಳದಲ್ಲಿ ಶಬರಿಯಿಂದ ಬೋರೆ ಹಣ್ಣುಗಳನ್ನು ಸ್ವೀಕರಿಸಿದ ಎನ್ನುವ ಐತಿಹಾಸಿಕ ವರದಿಯಂತೆ ರಾಮೇಶ್ವರದಿಂದ ಅಯೋಧ್ಯೆಯ ತನಕ ಯಾತ್ರೆಯ ಮೂಲಕ ಭೇಟಿ ನೀಡಲು ಸುಮಾರು ನೂರು ಯುವಕರನ್ನೊಳಗೊಂಡ ಈ ತಂಡ ರಾಮದುರ್ಗಕ್ಕೂ ಭೇಟಿ ನೀಡಿ ಶಬರಿ ದೇವಿಯ ದರ್ಶನ ಪಡೆಯಿತು.

ಮಧ್ಯಾಹ್ನ ಸುರೇಬಾನಕ್ಕೆ ಬಂದ ತಂಡದ ಸದಸ್ಯರನ್ನು ಮುಖ್ಯರಸ್ತೆಯಿಂದ ಇಲ್ಲಿನ ಸಂತರು, ಭಜನಾ ಮಂಡಳಿಯ ಸದಸ್ಯರು ಮತ್ತು ಸಾರ್ವಜನಿಕರು ಮೆರವಣಿಗೆಯಲ್ಲಿ ಕರೆ ತಂದರು. ಶಬರಿ ವನ ಪ್ರವೇಶಿಸಿದ ತಂಡದ ಸದಸ್ಯರು, ಶ್ರೀರಾಮ ಮತ್ತು ಶಬರಿ ದೇವಸ್ಥಾನಗಳಿಗೆ ಭೇಟಿ ನೀಡಿದರು. ಯುವಕರು ಶಬರಿ ದೇವಸ್ಥಾನದ ಪಕ್ಕದಲ್ಲಿಯೇ ಇದ್ದ ಪುಷ್ಕರಣಿಯಲ್ಲಿ ಪುಣ್ಯಸ್ನಾನ ಮಾಡಿದರು.

ADVERTISEMENT

ತಂಡದ ನಾಯಕಿ ಸಪ್ನಾ ಸಿಂಗ್‌ ಮಾತನಾಡಿ, ‘ಜ.14ರಿಂದ ಆರಂಭಗೊಂಡ ರಾಮೋತ್ಸವ ಯಾತ್ರೆಯು ಫೆ.14ರಂದು ಅಯೋಧ್ಯೆ ತಲುಪಲಿದೆ. ಅಲ್ಲಿ ಶ್ರೀರಾಮನ ದರ್ಶನ ಪಡೆದು ಯಾತ್ರೆ ಮುಕ್ತಾಯಗೊಳ್ಳಲಿದೆ’ ಎಂದು ಹೇಳಿದರು.

‘ಸೀತೆಯ ಅನ್ವೇಷಣೆಯಲ್ಲಿ ಶ್ರೀರಾಮ ಎಲ್ಲೆಲ್ಲಿ ಅಲೆದಾಡಿದರು, ಅವರು ಭೇಟಿ ಕೊಟ್ಟಿರುವ ಪುಣ್ಯ ಸ್ಥಳಗಳು ಯಾವುವು ಎನ್ನುವುದನ್ನು ದೇಶದ ಯುವಕರಿಗೆ ಪರಿಚಯಿಸುವ ಉದ್ದೇಶ ಈ ಯಾತ್ರೆಯದ್ದಾಗಿದೆ. ಸುಮಾರು 250 ಸಾಮಾಜಿಕ ಜಾಲತಾಣಗಳ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದು ಶ್ರೀರಾಮ ಭೇಟಿ ನೀಡಿದ ಸ್ಥಳಗಳ ಅಭಿವೃದ್ಧಿಗೆ ಬೇಡಿಕೆ ಇಡಲಾಗುವುದು. ಅಯೋಧ್ಯೆ ಅಭಿವೃದ್ಧಿ ಹೊಂದಿದಂತೆ ಶ್ರೀರಾಮ ಭೇಟಿ ನೀಡಿದ ಸ್ಥಳಗಳ ಅಭಿವೃದ್ಧಿ ಪಡಿಸಲು ಒತ್ತಾಯಿಸಲಾಗುವುದು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಸ ಪಾಟೀಲ, ಮುಖಂಡರಾದ ಕೆ.ವಿ. ಪಾಟೀಲ, ಪಿ.ಎಫ್‌. ಪಾಟೀಲ, ವಿಜಯ ಗುಡದಾರೆ, ಬಸವರಾಜ ಸೋಮಗೊಂಡ, ರವಿಸೂರ್ಯ, ರೇಖಾ ಚಿನ್ನಾಕಟ್ಟಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.