ADVERTISEMENT

ರಾಮ ಮೆಟ್ಟಿದ ಸ್ಥಳಗಳನ್ನು ವಿಶ್ವಕ್ಕೆ ಪರಿಚಯಿಸುವ ಯತ್ನ: ಮಲಯ ದೀಕ್ಷಿತ್‌

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 11:18 IST
Last Updated 29 ಜನವರಿ 2024, 11:18 IST
<div class="paragraphs"><p>ಬೆಳಗಾವಿಯಲ್ಲಿ ಸೋಮವಾರ ರಾಮೋತ್ಸವ ಯಾತ್ರೆಯ ಸಂಚಾಲಕ ಮಲಯ ದೀಕ್ಷಿತ್‌ ಯಾತ್ರೆಯ  ಅನುಭವ ಹಂಚಿಕೊಂಡರು.</p></div>

ಬೆಳಗಾವಿಯಲ್ಲಿ ಸೋಮವಾರ ರಾಮೋತ್ಸವ ಯಾತ್ರೆಯ ಸಂಚಾಲಕ ಮಲಯ ದೀಕ್ಷಿತ್‌ ಯಾತ್ರೆಯ ಅನುಭವ ಹಂಚಿಕೊಂಡರು.

   

ಬೆಳಗಾವಿ: ‘ಶ್ರೀರಾಮ 14 ವರ್ಷಗಳ ವನವಾಸದಲ್ಲಿ ಸಂಚರಿಸಿದ ಎಲ್ಲ ಸ್ಥಳಗಳನ್ನು ಗುರುತಿಸಿ, ಜಾಗೃತಿ ಮೂಡಿಸಲು ರಾಮೋತ್ಸವ ಯಾತ್ರೆ ಆರಂಭಿಸಲಾಗಿದೆ. ಸನಾತನ ಧರ್ಮದಲ್ಲಿ ಶ್ರದ್ಧೆ ಹೊಂದಿರುವ ಸಾಮಾಜಿಕ ಜಾಲತಾಣಗಳ ಪ್ರಭಾವಿಗಳ ತಂಡ ಈ ಯಾತ್ರೆಯಲ್ಲಿದೆ’ ಎಂದು ಯಾತ್ರೆಯ ಸಂಚಾಲಕ ಮಲಯ ದೀಕ್ಷಿತ್‌ ಹೇಳಿದರು.

‘ಜ.14ರಿಂದ ರಾಮೇಶ್ವರಂನಿಂದ ಈ ಯಾತ್ರೆ ಆರಂಭಿಸಲಾಗಿದೆ. ರಾಮ ಪಾದವಿಟ್ಟ ಎಲ್ಲ ಸ್ಥಳಗಳನ್ನೂ ಸಂಪರ್ಕಿಸಿ, ಕೊನೆಗೆ ಫೆಬ್ರುವರಿ 14ರಂದು ಅಯೋಧ್ಯೆಗೆ ತಲುಪಿ ಅಂತ್ಯಗೊಳ್ಳಲಿದೆ’ ಎಂದು ಅವರು ನಗರದಲ್ಲಿ ಸೋಮವಾರ ‍ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ವನವಾಸದಲ್ಲಿ ರಾಮ ಸಂಚರಿಸಿದ ಸ್ಥಳಗಳನ್ನು ಗುರುತಿಸಿ ಇನ್ನಷ್ಟು ಬೆಳಕಿಗೆ ತರುವುದು ಅಗತ್ಯವಾಗಿದೆ. ಯುವ ಜನರಿಗೆ ಶ್ರೀರಾಮನ ಕುರುಹುಗಳ ಬಗ್ಗೆ, ಐತಿಹಾಸಿಕ ನಡೆಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಈಗಾಗಲೇ ಶೇ 50ರಷ್ಟು ಪ್ರದೇಶಗಳು ಜನರಿಗೆ ತಿಳಿದಿವೆ. ಇನ್ನೂ ಅರ್ಧದಷ್ಟು ‍ಪ್ರದೇಶಗಳು ಎಲ್ಲಿವೆ, ಅವುಗಳ ಮಹತ್ವ ಏನು?, ರಾಮ ಅಲ್ಲಿ ಮಾಡಿದ್ದು ಏನು? ಎಂಬುದು ಬೆಳಕಿಗೆ ಬಂದಿಲ್ಲ. ಅಂಥ ಎಲ್ಲ ಸ್ಥಳಗಳನ್ನೂ ಏಕಕಾಲಕ್ಕೆ ಗುರುತಿಸಿ ಜನರ ಮುಂದೆ ಇಡಲಾಗುವುದು’ ಎಂದರು.

‘ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುರೇಬಾನ ಎನ್ನುವ ಊರಿನ ಬಳಿ ಶಬರಿ ಕೊಳ್ಳವಿದೆ. ಶಬರಿ ಮಾತೆಯು ಶ್ರೀರಾಮನಿಗಾಗಿ ಕಾದು ಕುಳಿತ ಸ್ಥಳ ಇದೇ ಎಂಬುದು ಗೊತ್ತಾಗಿದೆ. ಈ ಸ್ಥಳದ ಮಹತ್ವ ಬಹಳಷ್ಟು ಜನರಿಗೆ ತಿಳಿದೇ ಇಲ್ಲ. ಸ್ಥಳದ ಮಾಹಿತಿಯನ್ನು ದೇಶದೆಲ್ಲೆಡೆ ಪಸರಿಸಲಾಗುವುದು’ ಎಂದರು.

‘ಯಾತ್ರೆ ಮುಗಿದ ಬಳಿಕ ಶ್ರೀರಾಮ ಎಲ್ಲೆಲ್ಲಿ ಸಂಚರಿಸಿದ ಎಂಬುದರ ಒಂದು ನಕಾಶೆ ಸಿದ್ಧಪಡಿಸುತ್ತೇವೆ. ಯಾತ್ರಾರ್ಥಿಗಳಿಗೆ, ಪ್ರವಾಸಿಗರಿಗೆ ಇದು ಅನುಕೂಲವಾಗಲಿದೆ. ಇದೆಲ್ಲವೂ ಏಕಕಾಲಕ್ಕೆ ವಿಶ್ವದ ಎಲ್ಲ ಜನರಿಗೆ ತಲುಪಬೇಕು ಎಂಬುದು ನಮ್ಮ ಉದ್ದೇಶ. ಹೀಗಾಗಿ, ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಫಾಲೊವರ್ಸ್‌ ಹೊಂದಿರುವವರ ತಂಡ ರಚಿಸಲಾಗಿದೆ’ ಎಂದರು.

‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ಅವರು ಶ್ರೀರಾಮನ ಭೇಟಿಯ ಕುರಿತು ಲಭ್ಯವಿರುವ ಸ್ಥಳಗಳ ಪಟ್ಟಿಯನ್ನು ನಮಗೆ ನೀಡಿದ್ದಾರೆ. ಹಲವಾರು ಸಂಶೋಧಕರು, ಇತಿಹಾಸಕಾರರು, ಪಂಡಿತರು ಮೂರು ದಶಕಗಳಿಗೂ ಹೆಚ್ಚು ಸಂಶೋಧನೆ ನಡೆಸಿದ ನಂತರ ಈ ಸ್ಥಳಗಳನ್ನು ಪಟ್ಟಿ ಮಾಡಲಾಗಿದೆ. ಎಲ್ಲ ಸ್ಥಳಗಳನ್ನು ಸಂಪರ್ಕಿಸಿ, ಅಲ್ಲಿನ ವಸ್ತುಸ್ಥಿತಿಯನ್ನು ಟ್ರಸ್ಟ್‌ ಮುಂದೆ ಇಡುತ್ತೇವೆ. ಅವುಗಳ ಅಭಿವೃದ್ಧಿಗೆ ಬೇಕಾದ ಕೋರಿಕೆಯನ್ನೂ ಸಲ್ಲಿಸುತ್ತೇವೆ’ ಎಂದರು.

ಯಾತ್ರೆಯ ಸಹ ಸಂಚಾಲಕಿ ಅಪೂರ್ವ ಸಿಂಗ್‌ ಮಾತನಾಡಿ, ‘ಈ ಯಾತ್ರೆಯಲ್ಲಿ ಭೇಟಿ ಮಾಡಿದ ಪ್ರತಿಯೊಂದು ಸ್ಥಳದಿಂದ ಹಿಡಿ ಮಣ್ಣು ಒಯ್ಯುತ್ತೇವೆ. ಅದೆಲ್ಲವನ್ನೂ ಸೇರಿಸಿ ಅಯೋಧ್ಯೆಯಲ್ಲಿ ಒಂದು ಗಿಡ ನೆಟ್ಟು ಅದಕ್ಕೆ ‘ರಾಮಾಯಣ’ ಎಂದು ಹೆಸರಿಡುತ್ತೇವೆ’ ಎಂದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ‘ಶ್ರೀರಾಮನ ದರ್ಶನಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಹಲವು ಸ್ಥಳಗಳಿವೆ. ಅವುಗಳ ಅಭಿವೃದ್ಧಿಗಾಗಿ ಕೇಂದ್ರದ ಬಜೆಟ್ ಅಧಿವೇಶನದಲ್ಲಿ ಚರ್ಚಿಸುವಂತೆ ಮನವಿ ಸಲ್ಲಿಸಲಾಗುವುದು’ ಎಂದರು.

ಸಂಸದೆ ಮಂಗಲಾ ಅಂಗಡಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ ಹಾಗೂ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.