ADVERTISEMENT

ಮನೆಗೆ ಸೀಮಿತವಾದ ರಂಜಾನ್‌: ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚಿದ ಕೋವಿಡ್

​ಪ್ರಜಾವಾಣಿ ವಾರ್ತೆ
Published 11 ಮೇ 2021, 19:30 IST
Last Updated 11 ಮೇ 2021, 19:30 IST
ಬೆಳಗಾವಿಯ ಅಂಜುಮನ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್‌.ಐ. ತಿಮ್ಮಾಪುರ ಅವರು ಪತ್ನಿ ಫಾತಿಮಾ, ಪುತ್ರಿ ಪರ್ವೀನ್ ಹಾಗೂ ಪಯತ್ರ ಮೆಹಬೂಬ್‌ ಅವರೊಂದಿಗೆ ದಿನದ ಉಪವಾಸ ಕೊನೆಗೊಳಿಸುವುದಕ್ಕೆ ಮುಂಚೆ ಇಫ್ತಾರ್‌ ಪ್ರಾರ್ಥನೆ ಸಲ್ಲಿಸಿದರು
ಬೆಳಗಾವಿಯ ಅಂಜುಮನ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್‌.ಐ. ತಿಮ್ಮಾಪುರ ಅವರು ಪತ್ನಿ ಫಾತಿಮಾ, ಪುತ್ರಿ ಪರ್ವೀನ್ ಹಾಗೂ ಪಯತ್ರ ಮೆಹಬೂಬ್‌ ಅವರೊಂದಿಗೆ ದಿನದ ಉಪವಾಸ ಕೊನೆಗೊಳಿಸುವುದಕ್ಕೆ ಮುಂಚೆ ಇಫ್ತಾರ್‌ ಪ್ರಾರ್ಥನೆ ಸಲ್ಲಿಸಿದರು   

ಬೆಳಗಾವಿ: ಮುಸ್ಲಿಮರು ರಂಜಾನ್‌ ಮಾಸದಲ್ಲಿ ಆಚರಿಸುವ ಧಾರ್ಮಿಕ ಕಾರ್ಯಕ್ರಮಗಳು ಕೋವಿಡ್ ಕಾರಣದಿಂದಾಗಿ ಮನೆಗಳಿಗೆ ಸೀಮಿತವಾದವು. ಹೋದ ವರ್ಷವೂ 1ನೇ ಅಲೆಯಿಂದಾಗಿ ಸಂಭ್ರಮ ಇರಲಿಲ್ಲ.

ಮಾನವೀಯತೆಯ ಸಂದೇಶ ಸಾರುವ ಮತ್ತು ದಾನದ ಶ್ರೇಷ್ಠತೆ ಬಿಂಬಿಸುವ ‘ಈದ್ ಉಲ್‌ ಫಿತ್ರ್‌’ ಆಚರಣೆಯ ಸಂಭ್ರಮ ಕಳೆಗುಂದುವಂತೆ ಮಾಡಿರುವ ಕೊರೊನಾ, ಹಬ್ಬದ ಸ್ವರೂ‍ಪವನ್ನೇ ಬದಲಾಯಿಸಿದೆ. ಕೋವಿಡ್ ಕರ್ಫ್ಯೂ ಮತ್ತು ಲಾಕ್‌ಡೌನ್‌ನಿಂದಾಗಿ ಮಸೀದಿಗಳು, ಈದ್ಗಾ ಮೈದಾನಗಳಿಗೆ ಪ್ರವೇಶ ನಿರ್ಬಂಧಿಸಿದ್ದರಿಂದ ಮುಸ್ಲಿಮರು ಪ್ರಾರ್ಥನೆಯನ್ನು ಮನೆಗಳಲ್ಲೇ ನಡೆಸಿ ಒಳಿತಿಗೆ ಪ್ರಾರ್ಥಿಸುತ್ತಿದ್ದಾರೆ.

ಅಲ್ಲಲ್ಲಿ ನಡೆಯುತ್ತಿದ್ದ ಮತ್ತು ಸಾಮರಸ್ಯದ ಸಂದೇಶ ಸಾರುತ್ತಿದ್ದ ಇಫ್ತಾರ್ ಕೂಟಗಳ ಸಂಭ್ರಮವೂ ಕಂಡುಬರಲಿಲ್ಲ. ಮುಂಬರುವ ‘ಈದ್ ಉಲ್‌ ಫಿತ್ರ್‌’ ಹಬ್ಬದಲ್ಲೂ ವಿಶೇಷ ಪ್ರಾರ್ಥನೆಯನ್ನುಮನೆಗಳಲ್ಲೇ ಸಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದಾಗಿ, ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ. ಹೀಗಾಗಿ, ಹಬ್ಬವನ್ನು ಸರಳವಾಗಿ ಆಚರಿಸಲು ಮುಸ್ಲಿಮರಲ್ಲಿ ಬಹುತೇಕರು ನಿರ್ಧರಿಸಿದ್ದಾರೆ.

ADVERTISEMENT

ಕಂಡುಬರಲಿಲ್ಲ:

ಆರೋಗ್ಯ ರಕ್ಷಣೆಗೆ ಪ್ರಾಮುಖ್ಯತೆ ಕೊಟ್ಟಿರುವ ಅಂಜುಮನ್-ಇ-ಇಸ್ಲಾಂ ಸಂಸ್ಥೆ ಹಾಗೂ ಜಿಲ್ಲೆಯ ಈದ್ಗಾ ಸಮಿತಿಗಳು ಈ ಬಾರಿ ಸಾಮೂಹಿಕ ಪ್ರಾರ್ಥನೆ ಕೈಬಿಟ್ಟು ಮನೆಯಲ್ಲಿಯೇ ಭಕ್ತಿ ಸಮರ್ಪಿಸುವಂತೆ ಸಮುದಾಯದವರಿಗೆ ಸೂಚಿಸಿವೆ. ಧರ್ಮಗುರುಗಳು ಹಾಗೂ ಸಮಾಜದ ಮುಖಂಡರು ಕೂಡ ಇದೇ ಸಂದೇಶ ನೀಡಿದ್ದಾರೆ. ಕೋವಿಡ್ ಇಲ್ಲದಿದ್ದಿದ್ದರೆ ಮಸೀದಿ, ದರ್ಗಾ ಹಾಗೂ ಈದ್ಗಾ ಮೈದಾನಗಳು ಸಡಗರಕ್ಕೆ ಸಾಕ್ಷಿಯಾಗುತ್ತಿದ್ದವು.

ರಂಜಾನ್‌ ಮಾಸದಲ್ಲಿ ಮಾರುಕಟ್ಟೆಯು ಜನಜಂಗುಳಿ ಮತ್ತು ಖರೀದಿ ಭರಾಟೆಯಲ್ಲಿ ಮುಳುಗಿರುತ್ತಿತ್ತು. ಖಡೇಬಜಾರ್‌ನಲ್ಲಿ ರಂಜಾನ್ ಮಾರುಕಟ್ಟೆ ರಂಗು ತಡರಾತ್ರಿವರೆಗೂ ಮೇಳೈಸುತ್ತಿತ್ತು. ಸಾವಿರಾರು ಜನ ಟ್ಟೆಗಳು, ಅಗತ್ಯ ವಸ್ತುಗಳ ಖರೀದಿಯಲ್ಲಿ ಹಾಗೂ ತಿಂಡಿತಿನಿಸುಗಳ ಸವಿ ಸವಿಯುವುದರಲ್ಲಿ ನಿರತರಾಗುತ್ತಿದ್ದುದು ಕಾಣಸಿಗುತ್ತಿತ್ತು. ಇತರ ಧರ್ಮೀಯರೂ ಖರೀದಿಗೆ ಹಾಗೂ ವಿಶೇಷ ತಿನಿಸುಗಳ ಸವಿ ಸವಿಯಲು ಬರುತ್ತಿದ್ದರು. ಆದರೆ, ಈ ಬಾರಿ ಆ ಸಂಭ್ರಮ ಕಂಡುಬರಲಿಲ್ಲ.

ಖರೀದಿಗೆ ಅವಕಾಶವಾಗಿಲ್ಲ:

ಮಾರುಕಟ್ಟೆ ಸ್ತಬ್ಧವಾಗಿರುವುದರಿಂದ, ಸಂಪ್ರದಾಯದಂತೆ ಹೊಸ ಬಟ್ಟೆಗಳ ಖರೀದಿಗೂ ಅವಕಾಶ ಸಿಗದಿರುವುದಕ್ಕೆ ಬೇಸರವಾಗಿದೆ ಎನ್ನುತ್ತಾರೆ ಮುಸ್ಲೀಮರು.

‘ಖಡೇಬಜಾರ್‌ನಲ್ಲಿ ಕೋವಿಡ್ ಕರ್ಫ್ಯೂ ಸಂದರ್ಭದಲ್ಲಿ ಗ್ರಾಹಕರಿಂದ ದೊಡ್ಡ ಮಟ್ಟದ ಪ್ರತಿಕ್ರಿಯೆ ಕಂಡುಬರಲಿಲ್ಲ. ಖರ್ಜೂರ, ಪಿಸ್ತಾ, ಬಾದಾಮಿ ಮೊದಲಾದ ಡ್ರೈಫ್ರೂಟ್ಸ್‌ಗಳ ಮಾರಾಟದಲ್ಲಿ ತೀವ್ರ ಕುಸಿತ ಕಂಡುಬಂದಿತು. ನೆರೆಯ ಗೋವಾ, ಮಹಾರಾಷ್ಟ್ರದಿಂದ ಗ್ರಾಹಕರು ಇರಲಿಲ್ಲ’ ಎಂದು ವ್ಯಾಪಾರಿಗಳು ತಿಳಿಸಿದರು.

‘ಕೋವಿಡ್ 2ನೇ ಅಲೆಯಿಂದಾಗಿ ಕೆಲಸವಿಲ್ಲದೆ, ಗಳಿಕೆ ಇಲ್ಲದೆ ಕಂಗಾಲಾಗಿದ್ದೇವೆ. ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಹಬ್ಬದ ದಿನವೂ ಹಾಗೆಯೇ ಮಾಡಲಿದ್ದೇವೆ. ಹಲವರು ಹೊಸ ಬಟ್ಟೆ ಖರೀದಿಸುವುದಕ್ಕೂ ಸಾಧ್ಯವಾಗಿಲ್ಲ. ಅಂದಿನ ಜೀವನ ನಿರ್ವಹಣೆಗೆ ಅಂದಿನ ದುಡಿಮೆಯನ್ನೇ ನಂಬಿರುವ ಬಡವರು ಕೆಲಸವಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪರಿಣಾಮ, ಹಬ್ಬದ ಸಂಭ್ರಮ ಕಳೆಗುಂದಿದೆ’ ಎಂದು ಗಾಂಧಿ ನಗರದ ನಿವಾಸಿ ಮೆಹಬೂಬ ಮಕಾನದಾರ ‘‍ಪ್ರಜಾವಾಣಿ’ಗೆ ತಿಳಿಸಿದರು.

ಸೇಠ್ ಸಹೋದರರಿಂದ ಆಹಾರ ಕಿಟ್

ಇಲ್ಲಿನ ಕಾಂಗ್ರೆಸ್‌ ಮುಖಂಡರಾದ ಫಿರೋಜ್‌ ಸೇಠ್ ಹಾಗೂ ರಾಜು ಸೇಠ್‌ ಸಹೋದರರು, ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದವರಿಗೆ ಸ್ವಂತ ಖರ್ಚಿನಲ್ಲಿ ಆಹಾರ ಧಾನ್ಯ ಕಿಟ್ ವಿತರಣೆಗೆ ಚಾಲನೆ ನೀಡಿದ್ದಾರೆ.

‘ಈ ಬಾರಿ 5ಸಾವಿರಕ್ಕೂ ಹೆಚ್ಚು ಮಂದಿಗೆ ಕಿಟ್ ಕೊಡುತ್ತಿದ್ದೇವೆ. ಕುಟುಂಬವೊಂದಕ್ಕೆ ತಿಂಗಳಿಗೆ ಆಗುವಷ್ಟು ಅಕ್ಕಿ, ಬೇಳೆ, ಗೋಧಿ ಹಿಟ್ಟು, ಅಡುಗೆ ಎಣ್ಣೆ ಮೊದಲಾದವುಗಳನ್ನು ಮತ್ತು ಹಬ್ಬದಲ್ಲಿ ಪಾಯಸ ತಯಾರಿಗೆ ಬೇಕಾಗುವ ಸಾಮಗ್ರಿಗಳು ಕಿಟ್‌ನಲ್ಲಿರುತ್ತವೆ. ಬಡವರಿಗೆ ನೆರವಾಗಬೇಕು ಎನ್ನುವುದು ನಮ್ಮ ಉದ್ದೇಶ. ನಮ್ಮ ತಂಡದವರು ನೇರವಾಗಿ ಮನೆಗಳಿಗೆ ತಲುಪಿಸುತ್ತಿದ್ದಾರೆ’ ಎಂದು ರಾಜು ಸೇಠ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.