ADVERTISEMENT

ಕಳೆಗಟ್ಟಿದ ಬಜಾರು: ಖರೀದಿ ಜೋರು

‘ಈದ್‌–ಉಲ್‌–ಪಿತ್ರ್’ ಹಬ್ಬಕ್ಕೆ ಕ್ಷಣಗಣನೆ

ಎಂ.ಮಹೇಶ
Published 3 ಜೂನ್ 2019, 19:30 IST
Last Updated 3 ಜೂನ್ 2019, 19:30 IST
ಬೆಳಗಾವಿಯ ದರ್ಬಾರ್‌ ಗಲ್ಲಿಯಲ್ಲಿ ಮುಸ್ಲಿಮರು ಖರ್ಜೂರ ಖರೀದಿಸಿದರು
ಬೆಳಗಾವಿಯ ದರ್ಬಾರ್‌ ಗಲ್ಲಿಯಲ್ಲಿ ಮುಸ್ಲಿಮರು ಖರ್ಜೂರ ಖರೀದಿಸಿದರು   

ಬೆಳಗಾವಿ: ಮುಸ್ಲಿಮರ ಪವಿತ್ರ ಹಬ್ಬ ‘ಈದ್‌–ಉಲ್–ಪಿತ್ರ್’ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿ ನಡೆಯುತ್ತಿದೆ.

ಇಸ್ಲಾಂ ಧರ್ಮೀಯರ ಪವಿತ್ರ ಮಾಸ ರಂಜಾನ್‌ನಲ್ಲಿ ಆಚರಿಸುವ ರೋಜಾ (ಉಪವಾಸ ವ್ರತ) ವ್ರತಾಚರಣೆಗೆ ಮಂಗಳವಾರ ಸಂಜೆ ತೆರೆ ಬೀಳುವ ನಿರೀಕ್ಷೆ ಇದೆ. ಜೂನ್ 5 (ಬುಧವಾರ) ಈದ್‌ ಉಲ್‌ ಫಿತ್ರ್‌ ಆಚರಣೆ ನಡೆಯಲಿದ್ದು, ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮಂಗಳವಾರ ಮುಸ್ಸಂಜೆ ಬಾನಂಗಳದಲ್ಲಿ ಬಾಲ ಚಂದ್ರ ಗೋಚರಿಸುವ ನಿರೀಕ್ಷೆ ಆ ಸಮುದಾಯದಲ್ಲಿದೆ. ಚಂದ್ರ ದರ್ಶನವಾದ ಮರು ದಿನ ಈದ್‌–ಉಲ್–ಪಿತ್ರ್‌ ಆಚರಿಸಲಾಗುತ್ತದೆ. ಅಂದು ಮುಂಜಾನೆ ನಡೆಯುವ ಸಾಮೂಹಿಕ ಪ್ರಾರ್ಥನೆಗೆ ಈದ್ಗಾ ಮೈದಾನಗಳಲ್ಲಿ ಸ್ವಚ್ಛತೆ ಕೈಗೊಂಡು, ಸುಣ್ಣ–ಬಣ್ಣ ಹಚ್ಚಿ ತಯಾರಿ ಮಾಡಿಕೊಳ್ಳಲಾಗಿದೆ.

ನಗರದಲ್ಲಿರುವವು ಸೇರಿದಂತೆ ಜಿಲ್ಲೆಯ ವಿವಿಧೆಡೆ ಇರುವ ಮಸೀದಿಗಳಿಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದ್ದು, ರಾತ್ರಿ ವೇಳೆ ಆಕರ್ಷಕವಾಗಿ ಕಂಗೊಳಿಸುತ್ತಿವೆ. ಕೋಟೆ ಆವರಣ, ಕ್ಯಾಂಪ್ ಪ್ರದೇಶ, ರೈಲು ನಿಲ್ದಾಣ ಎದುರು, ಕಾಕತಿವೇಸ್ ರಸ್ತೆ, ಯಮನಾಪುರ, ಕಾಲೇಜು ರಸ್ತೆ, ಹಳೆ ಪುಣೆ–ಬೆಂಗಳೂರು ರಸ್ತೆ ಸೇರಿದಂತೆ ವಿವಿಧೆಡೆ ಪ್ರಮುಖ ದರ್ಗಾಗಳಿದ್ದು, ಅವುಗಳನ್ನೂ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. 14 ಗಂಟೆಗಳ ಕಾಲ ರೋಜಾ ಕೈಗೊಳ್ಳುವ ಮುಸ್ಲಿಮರು ಇಫ್ತಾರ್ ನಂತರ ದರ್ಗಾಗಳಿಗೆ ಬಂದು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.

ADVERTISEMENT

ಖಾದ್ಯದ ಘಮ:ಖಡೇಬಜಾರ್, ಬೆಂಡಿ ಬಜಾರ್, ದರ್ನಾರ್‌ ಗಲ್ಲಿ, ಖಂಜರ್‌ ಗಲ್ಲಿ, ಶನಿವಾರ ಕೂಟ, ಗಣಪತಿ ಗಲ್ಲಿ, ಮಾರುತಿ ಗಲ್ಲಿ ಮೊದಲಾದ ಕಡೆಗಳಲ್ಲಿ ಬಜಾರ್‌ ಕಳೆಗಟ್ಟಿದೆ. ಸಂಜೆಯಾಗುತ್ತಿದ್ದಂತೆಯೇ, ಹೆಚ್ಚಿನ ಜನಸಂದಣಿ ಕಂಡು ಬರುವ ಇಲ್ಲಿ ಅತ್ತರ್‌ ಹಾಗೂ ಮಾಂಸಾಹಾರ ಮೊದಲಾದ ಖಾದ್ಯಗಳ ಘಮಲು ಮೂಗಿಗೆ ಬಡಿಯುತ್ತಿದೆ.

ಕತ್ತಲಾಗುತ್ತಿದ್ದಂತೆಯೇ ಹೊತ್ತಿಕೊಳ್ಳುವ ಬಣ್ಣಬಣ್ಣದ ದೀಪಗಳು ಈ ರಸ್ತೆಗಳ ಮೆರುಗು ಹೆಚ್ಚಿಸುತ್ತವೆ. ಸಂಜೆ ‘ಕಳೆ’ಗಟ್ಟುವ ಮಾರುಕಟ್ಟೆ ಬೆಳಗಿನ ಜಾವ ಐದರವರೆಗೂ ಕ್ರಿಯಾಶೀಲವಾಗಿರುವುದು ವಿಶೇಷ! ಅಂದರೆ ಇಡೀ ರಾತ್ರಿ ಇಲ್ಲಿ ವ್ಯಾಪಾರ–ವಹಿವಾಟು–ಓಡಾಟಗಳು ನಡೆಯುತ್ತವೆ; ಹೊಸದೊಂದು ಲೋಕವೇ ಅನಾವರಣಗೊಳ್ಳುತ್ತದೆ. ಅದರಲ್ಲೂ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.

ಖರ್ಜೂರಕ್ಕೆ ಬೇಡಿಕೆ:ಮಾರುಕಟ್ಟೆಯಲ್ಲಿ 16 ಬಗೆಯ ಖರ್ಜೂರಗಳು ಲಭ್ಯವಿದ್ದು, ಗುಣಮಟ್ಟ ಆಧರಿಸಿ ₹ 80ರಿಂದ ₹ 2ಸಾವಿರದವರೆಗೆ ಮಾರಾಟವಾಗುತ್ತಿವೆ. ರಂಜಾನ್ ಮಾಸದಲ್ಲಿ ಸಂಜೆ ಪ್ರಾರ್ಥನೆ ಬಳಿಕ ಉಪವಾಸ ಅಂತ್ಯಗೊಳಿಸುವ ಮುಸ್ಲಿಮರು, ಕನಿಷ್ಠ ಐದು ಖರ್ಜೂರಗಳನ್ನು ಸೇವಿಸುವುದು ವಾಡಿಕೆ. ಹೀಗಾಗಿ, ಖರ್ಜೂರಕ್ಕೆ ಭಾರಿ ಬೇಡಿಕೆ ಕಂಡುಬಂದಿದೆ. ತಿಂಗಳಿಂದ ನಗರವೊಂದರಲ್ಲಿಯೇ ₹ 10ಲಕ್ಷಕ್ಕೂ ಅಧಿಕ ಮೌಲ್ಯದ ಖರ್ಜೂರ ಮಾರಾಟವಾಗಿರುವ ಅಂದಾಜಿದೆ.

‘ರೋಜಾ’ ಅವಧಿ ಮುಗಿದ ನಂತರ ಹಾಲಿನ ಉತ್ಪನ್ನಗಳಿಂದ ತಯಾರಿಸಿದ ಫಿರ್ನಿ, ಲಸ್ಸಿ ಮತ್ತು ಕೀರು (ಪಾಯಸ) ಸೇವಿಸುವುದು ಸಾಮಾನ್ಯ. ಹೀಗಾಗಿ, ಅಂಗಡಿಗಳು ಹಾಗೂ ರಸ್ತೆಬದಿಗಳಲ್ಲಿ ಇವುಗಳನ್ನು ಮಾರಲಾಗುತ್ತಿದೆ. ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಇವುಗಳನ್ನು ಹೆಚ್ಚಾಗಿ ಸೇವನೆ ಮಾಡುವುದು ಕಂಡುಬರುತ್ತಿದೆ. ಹಣ್ಣುಗಳಿಗೂ ಬೇಡಿಕೆ ಇದೆ.

ಇಸ್ಲಾಂ ಧರ್ಮದ ಬಗ್ಗೆ ಮಾಹಿತಿ ಕುರಾನ್ ಸೇರಿದಂತೆ ವಿವಿಧ ಬಗೆಯ ಪುಸ್ತಕಗಳು ಕೂಡ ಮಾರಾಟವಾಗುತ್ತಿವೆ. ಇಲ್ಲಿನ ಮಾರುಕಟ್ಟೆಗೆ ಗೋವಾ ಹಾಗೂ ಬೆಳಗಾವಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದವರೂ ಗ್ರಾಹಕರು ಬರುತ್ತಾರೆ.

ರುಚಿ ಸವಿಯಲು...
ಚಿಕನ್, ಮಟನ್ ‌ಬಿರಿಯಾನಿ, ಕಬಾಬ್, ತಂದೂರಿ ಕಬಾಬ್, ಕೀಮ, ಸಮೋಸ ಮೊದಲಾದ ಖಾದ್ಯಗಳ ಮಾರಾಟವೂ ಜಾಸ್ತಿಯಾಗಿದೆ. ಹೈದರಾಬಾದ್‌ ಮೂಲದ ಬಾಣಸಿಗರು ಬಂದು ಇರಾನಿ ಮಾದರಿಯ ತಿನಿಸುಗಳನ್ನು ತಯಾರಿಸುತ್ತಾರೆ. ಇದರ ರುಚಿ ಸವಿಯಲು ಸಾವಿರಾರು ಮಂದಿ ಬರುತ್ತಾರೆ. ಮುಸ್ಲಿಮರು ಮಾತ್ರವಲ್ಲದೇ ಇತರ ಧರ್ಮೀಯರೂ ಖಾದ್ಯಗಳ ರುಚಿ ಸವಿಯಲು ಹಾಗೂ ಬಟ್ಟೆಗಳ ಖರೀದಿಗೆ ಬರುತ್ತಾರೆ.

ಈ ಹಬ್ಬದಲ್ಲಿ ಮುಸ್ಲಿಮರು ಹೊಸ ಬಟ್ಟೆ ಧರಿಸುವುದು ವಾಡಿಕೆ. ಹೀಗಾಗಿ, ಸಾಂಪ್ರದಾಯಿಕ ಬಟ್ಟೆಗಳು, ಬುರ್ಖಾಗಳು, ಮೆಹೆಂದಿ, ಟೋಪಿಗಳು ಮೊದಲಾದವುಗಳ ಮಾರಾಟ ಜೋರಾಗಿದೆ.

ಆಲ್ಕೊಹಾಲ್‌ರಹಿತ ಅತ್ತರ್
ಸಾಮೂಹಿಕ ಪ್ರಾರ್ಥನೆಗೆ ತೆರಳುವ ವೇಳೆ ‘ಅತ್ತರ್‌’ ಹಾಕಿಕೊಂಡು ಹೋದರೆ ದೇವರಿಂದ ಹೆಚ್ಚಿನ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ, ಮುಸ್ಲಿಮರು ಅತ್ತರ್‌ಗಳನ್ನು ಹೆಚ್ಚಿನ ಪ‍್ರಮಾಣದಲ್ಲಿ ಖರೀದಿಸುತ್ತಾರೆ. ಉತ್ತರಪ್ರದೇಶ, ಮುಂಬೈ, ಮಹಾರಾಷ್ಟ್ರದಿಂದ ಮಾತ್ರವಲ್ಲದೇ ಅರಬ್‌ ರಾಷ್ಟ್ರಗಳಿಂದಲೂ ನಾನಾ ಬಗೆಯ ಅತ್ತರ್‌ಗಳು ಬಂದಿವೆ. ₹ 50ರಿಂದ ₹5ಸಾವಿರದವರೆಗೆ ಇವುಗಳ ಬೆಲೆ ಇದೆ. ‘ಆಲ್ಕೊಹಾಲ್‌ರಹಿತ ಅತ್ತರ್’ ಮಾರುಕಟ್ಟೆಗೆ ದಾಂಗುಡಿ ಇಟ್ಟಿರುವುದು ಈ ಬಾರಿಯ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.