ADVERTISEMENT

ರಾಣಿ ಶುಗರ್’ ಪುನಶ್ಚೇತನಕ್ಕೆ ಪಣ: ಚನ್ನರಾಜ ಹಟ್ಟಿಹೊಳಿ

ರಾಣಿ ಶುಗರ್ ಪುನಶ್ಚೇತನ ಪೆನಲ್ ಮುಂಚೂಣಿ ನಾಯಕ ಚನ್ನರಾಜ ಹಟ್ಟಿಹೊಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 3:01 IST
Last Updated 21 ಸೆಪ್ಟೆಂಬರ್ 2025, 3:01 IST
ಚನ್ನರಾಜ ಹಟ್ಟಿಹೊಳಿ
ಚನ್ನರಾಜ ಹಟ್ಟಿಹೊಳಿ   

ಚನ್ನಮ್ಮನ ಕಿತ್ತೂರು: ‘ಈ ಭಾಗದ ರೈತರ ಜೀವನಾಡಿ ಆಗಿರುವ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ (ರಾಣಿ ಶುಗರ್) ಸ್ಥಿತಿ ಅವಸಾನದ ಅಂಚಿಗೆ ತಲುಪಿದೆ. ಸಮಾನ ಮನಸ್ಕರ ತಂಡ ರಚಿಸಲಾಗಿದ್ದು, ಅದರ ಪುನಶ್ಚೇತನಕ್ಕಾಗಿ ಪ್ರಯತ್ನಿಸಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರಾಣಿ ಶುಗರ್ ಪುನಶ್ಚೇತನ ಪೆನಲ್ ಮುಂಚೂಣಿ ನಾಯಕ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಇಲ್ಲಿಯ ತಾಲ್ಲೂಕು ಆಡಳಿತ ಸೌಧದಲ್ಲಿ ಚುನಾವಣಾಧಿಕಾರಿಯೂ ಆಗಿರುವ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಪ್ರಭಾವತಿ ಫಕ್ಕೀರಪುರ ಅವರಲ್ಲಿ ತಮ್ಮ ಪೆನಲ್ ಸದಸ್ಯರು ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

‘ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಇಲ್ಲಿಯ ಶಾಸಕ ಬಾಬಾಸಾಹೇಬ ಪಾಟೀಲ, ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಸೇರಿ ಜಿಲ್ಲೆಯ ಅನೇಕ ಶಾಸಕರು ಪುನಶ್ಚೇತನ ಪೆನಲ್‌ಗೆ ಬೆಂಬಲ ಸೂಚಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘₹220 ಕೋಟಿ ಸಾಲದ ಸುಳಿಯಲ್ಲಿ ಸಿಕ್ಕು ಕಾರ್ಖಾನೆ ನಲುಗುತ್ತಿದೆ. ಸಾಲದ ಸುಳಿಯಿಂದ ಮೊದಲು ಕಾರ್ಖಾನೆಯಿಂದ ಹೊರತರಲಾಗುವುದು. ಕಬ್ಬು ಪೂರೈಸಿದ ಬೆಳೆಗಾರರಿಗೆ 15 ದಿನದೊಳಗಾಗಿ ಬಿಲ್ ಪಾವತಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ‘ಕಾರ್ಖಾನೆಯಲ್ಲಿ ಹಳೇ ತಾಂತ್ರಿಕ ವ್ಯವಸ್ಥೆ ಇದೆ. ಅದನ್ನು ಬದಲಾಯಿಸಬೇಕಿದೆ. ಇದರ ಉಳಿವಿಗಾಗಿ ಪಕ್ಷಾತೀತವಾದ ಪೆನಲ್ ರಚನೆ ಮಾಡಲಾಗಿದೆ. ಸುಮಾರು 17000 ಕಾರ್ಖಾನೆಯ ಸದಸ್ಯರು ಕಾರ್ಖಾನೆ ಉಳಿಸುವ ನಮ್ಮ ಪ್ರಯತ್ನವನ್ನು ಬೆಂಬಲಿಸಲಿದ್ದಾರೆ’ ಎಂದರು.

ಪುನಶ್ಚೇತನ ಪೆನಲ್ ನಾಮಪತ್ರ ಸಲ್ಲಿಕೆ

ಸಚಿವೆ ಮೂವರು ಶಾಸಕರು ಹಲವು ನಾಯಕರನ್ನೊಳಗೊಂಡ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಪೆನಲ್ ಪರವಾಗಿ ಶನಿವಾರ 15 ಜನರು ತಮ್ಮ ಉಮೇದುವಾರಿಕೆಯನ್ನು ಚುನಾವಣಾಧಿಕಾರಿಗೆ ಸಲ್ಲಿಸಿದರು. ರೈತ ಅಭಿವೃದ್ಧಿ ಪೆನಲ್‌ನಿಂದ ಬಸವರಾಜ ಮೊಕಾಶಿ ಬಸನಗೌಡ ಪಾಟೀಲ ಪ್ರತ್ಯೇಕವಾಗಿ ಹಬೀಬಸಾಬ್ ಶಿಲೇದಾರ ಮಹಾದೇವಪ್ಪ ಹಿತ್ತಲಮನಿ ದುಂಡಪ್ಪ ಕ್ಯಾಸಗೇರಿ ಕಾರ್ಖಾನೆ ಮಾಜಿ ಅಧ್ಯಕ್ಷ ನಾಸೀರ್ ಬಾಗವಾನ್ ಮಾಜಿ ನಿರ್ದೇಶಕರಾದ ಸಾವಂತ ಕಿರಬನವರ ಮೀನಾಕ್ಷಿ ನೆಲಗಳಿ ಸೇರಿ ಅನೇಕರು ಈಗಾಗಲೇ ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ. ಸೆ. 21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಸೆ. 22ರಂದು ನಾಮಪತ್ರ ಹಿಂಪಡೆಯುವ ಅಂತಿಮ ದಿನವಾಗಿದೆ. ಕಾರ್ಖಾನೆ ಆವರಣದಲ್ಲಿ ಸೆ. 28ಕ್ಕೆ ಮತದಾನ ನಡೆಯಲಿದೆ. ಮತದಾನ ಮುಗಿದ ನಂತರ ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.