ADVERTISEMENT

ರ‍್ಯಾಂಕ್‌, ಚಿನ್ನದ ಪದಕದಲ್ಲಿ ಮೇಲುಗೈ

ಗ್ರಾಮೀಣ ವಿದ್ಯಾರ್ಥಿಗಳ ‘ಶೈಕ್ಷಣಿಕ ಕಾಮಧೇನು’ ಮುಗಳಖೋಡ ಕಾಲೇಜು

ಬಾಲಶೇಖರ ಬಂದಿ
Published 12 ಆಗಸ್ಟ್ 2021, 12:40 IST
Last Updated 12 ಆಗಸ್ಟ್ 2021, 12:40 IST
ಮುಗಳಖೋಡ ಡಾ.ಸಿ.ಬಿ. ಕುಲಿಗೋಡ ಪದವಿ ಕಾಲೇಜಿನ ನೋಟ
ಮುಗಳಖೋಡ ಡಾ.ಸಿ.ಬಿ. ಕುಲಿಗೋಡ ಪದವಿ ಕಾಲೇಜಿನ ನೋಟ   

ಮೂಡಲಗಿ (ಬೆಳಗಾವಿ ಜಿಲ್ಲೆ): ರಾಯಬಾಗ ತಾಲ್ಲೂಕಿನ ಮುಗಳಖೋಡದ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ಡಾ.ಸಿ.ಬಿ. ಕುಲಿಗೋಡ ಪದವಿ ಮಹಾವಿದ್ಯಾಲಯವು ಗ್ರಾಮೀಣ ಭಾಗದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯ ರೂಪಿಸುತ್ತಿರುವ ‘ಶೈಕ್ಷಣಿಕ ಕಾಮಧೇನು’ವಾಗಿ ಗುರುತಿಸಿಕೊಂಡಿದೆ.

ಸಾಮಾಜ ಮತ್ತು ಶಿಕ್ಷಣದ ಬಗ್ಗೆ ಕಾಳಜಿ ಹೊಂದಿರುವ ಸಂಸ್ಥೆಯ ಸಂಸ್ಥಾಪಕ ಡಾ.ಸಿ.ಬಿ. ಕುಲಿಗೋಡ ಅವರು ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ 2008ರಲ್ಲಿ ಬಿ.ಎ. ಪದವಿ ಕಾಲೇಜು ಪ್ರಾರಂಭಿಸಿದರು. 2016ರಲ್ಲಿ ಬಿ.ಕಾಂ. ಕೂಡ ಆರಂಭವಾಗಿದೆ. 35 ವಿದ್ಯಾರ್ಥಿಗಳೊಂದಿಗೆ ಪ್ರಾರಂಭಗೊಂಡ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ 720 ದಾಖಲಾತಿ ಇದೆ.

ಮೊದಲ ಬ್ಯಾಚ್‌ದಲ್ಲಿ ತೆರ್ಗಡೆಯಾದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ 3 ಮತ್ತು 8ನೇ ರ‍್ಯಾಂಕ್‌ಗಳನ್ನು ಪಡೆದುಕೊಂಡು ಗಮನಸೆಳೆದಿದ್ದರು. ಕಾಲೇಜು ಪ್ರಾರಂಭದಲ್ಲೇ ಗುಣಮಟ್ಟದ ಶಿಕ್ಷಣದ ಛಾಪು ಮೂಡಿಸಿ ಗಮನಸೆಳೆದಿತ್ತು. ಬಿ.ಎ. ಕೋರ್ಸ್‌ನಲ್ಲಿ ಪತ್ರಿಕೋದ್ಯಮ ಐಚ್ಛಿಕ ವಿಷಯವಾಗಿ ಆಯ್ಕೆಗೆ ಅವಕಾಶವಿದೆ.

ADVERTISEMENT

ಶೈಕ್ಷಣಿಕ ಸೌಲಭ್ಯ:

8 ಎಕರೆಯಲ್ಲಿ ಕ್ಯಾಂಪಸ್‌ ಅರಳಿದೆ. ಗಿಡಮರಗಳಿಂದ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಬೋಧನಾ ಕೊಠಡಿಗಳು, ಗ್ರಂಥಾಲಯ, ಗಣಕಯಂತ್ರ ಪ್ರಯೋಗಾಲಯ, ಕ್ರೀಡಾ ಕೊಠಡಿ, ಮಹಿಳಾ ಕೊಠಡಿ, ಸಭಾಭವನಗಳಿವೆ. ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ಮೂಲ ಸೌಲಭ್ಯಗಳಿವೆ.

400 ಮೀ. ಓಟದ ಟ್ರ್ಯಾಕ್ ಇದೆ. ಕ್ರೀಡೆಗೆ ಉತ್ತೇಜನ ನೀಡಲಾಗುತ್ತಿದೆ. ಹೀಗಾಗಿ ವಿಶ್ವವಿದ್ಯಾಲಯ ಮತ್ತು ರಾಜ್ಯಮಟ್ಟದ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಗ್ರಾಮ ಮತ್ತು ತೋಟಪಟ್ಟಿಯಲ್ಲಿರುವ ವಿದ್ಯಾರ್ಥಿಗಳಿಗಾಗಿ ಬಸ್ ಸೌಲಭ್ಯ ಕಲ್ಪಿಸಿದ್ದರಿಂದ ಪಾಲಕರು ಹೆಣ್ಣು ಮಕ್ಕಳ ಪದವಿ ಕಲಿಕೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿರುವುದು ವಿಶೇಷ.

ಬೋಧನೆ:

ಕಾಲೇಜಿನಲ್ಲಿ 21 ಮಂದಿ ಉಪನ್ಯಾಸಕರಿದ್ದಾರೆ. ಅವರಲ್ಲಿ ಮೂವರು ಪಿಎಚ್.ಡಿ. ಪದವೀಧರರು. ಉಳಿದವರು ಎಂ.ಫಿಲ್., ನೆಟ್, ಸೆಟ್ ಪರೀಕ್ಷೆ ಪಾಸ್ ಮಾಡಿದ್ದಾರೆ. 9 ಜನ ಬೋಧಕೇತರ ಸಿಬ್ಬಂದಿ ಇದ್ದಾರೆ.

‘‌ಉಪನ್ಯಾಸಕರ ಉತ್ತಮ ಬೋಧನೆಯಿಂದಾಗಿ ಈವರೆಗೆ ವಿಶ್ವವಿದ್ಯಾಲಯದಿಂದ 7 ರ‍್ಯಾಂಕ್‌ಗಳು ಮತ್ತು 9 ಚಿನ್ನದ ಪದಕಗಳನ್ನು ಇಲ್ಲಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ' ಎಂದು ಪ್ರಾಚಾರ್ಯ ಪ್ರೊ.ಪ್ರಕಾಶ ಸಿ. ಕಂಬಾರ ಹೇಳಿದರು.

ವ್ಯಕ್ತಿತ್ವ ವಿಕಸನ, ವೃತ್ತಿ ಮಾರ್ಗದರ್ಶನ, ವಿಷಯಾಧಾರಿತ ವಿಚಾರಸಂಕಿರಣಗಳನ್ನು ನಿರಂತವಾಗಿ ನಡೆಸಲಾಗುತ್ತಿದೆ. ಇ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ.

‘ಶಿಕ್ಷಣ ಕಲಿಕೆಗೆ ಬಡತನ ಅಡ್ಡಿ ಆಗಬಾರದು. ಹೀಗಾಗಿ, ಕಡು ಬಡ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯತಿ ಕೊಡುತ್ತಿದ್ದೇವೆ’ ಎಂದು ಸಂಸ್ಥೆಯ ಅಧ್ಯಕ್ಷ ಸಂಜಯ ಕುಲಿಗೋಡ ಹೇಳಿದರು.

‘ಆಡಳಿತ ಮಂಡಳಿ ಮತ್ತು ಕಾಲೇಜು ಸಿಬ್ಬಂದಿ ಸಹಕಾರದಿಂದಾಗಿ ಕಾಲೇಜು ಶೈಕ್ಷಣಿಕವಾಗಿ ಪ್ರಗತಿಯಲ್ಲಿದೆ’ ಎನ್ನುತ್ತಾರೆ ಅವರು.

ಗುಣಮಟ್ಟದ ಶಿಕ್ಷಣ

ಸರ್ಕಾರದ ಅನುದಾನ ಇಲ್ಲದಿದ್ದರೂ ಶೈಕ್ಷಣಿಕವಾಗಿ ಉತ್ತಮ ಗುಣಮಟ್ಟ ಕಾಯ್ದುಕೊಂಡು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಪ್ರಸಾರ ಮಾಡುತ್ತಿದ್ದೇವೆ.

–ಸಂಜಯ ಕುಲಿಗೋಡ, ಅಧ್ಯಕ್ಷ, ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆ, ಮುಗಳಖೋಡ

ಉತ್ತಮ ಫಲಿತಾಂಶ

ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ವಿಶೇಷ ಗಮನ ನೀಡುತ್ತಿರುವುದರಿಂದ ಕಾಲೇಜು ಪ್ರತಿ ವರ್ಷ ಉತ್ತಮ ಫಲಿತಾಂಶ ಪಡೆಯುತ್ತಿದೆ.

– ಪ್ರೊ.ಪ್ರಕಾಶ ಕಂಬಾರ, ಪ್ರಾಚಾರ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.