ADVERTISEMENT

ಗಣೇಶೋತ್ಸವಕ್ಕೆ ಅಗತ್ಯ ಸಿದ್ಧತೆಗೆ ಆಗ್ರಹ

ಅಹಿತಕರ ಘಟನೆಗೆ ಕಡಿವಾಣ ಹಾಕಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 15:52 IST
Last Updated 15 ಜುಲೈ 2019, 15:52 IST
ಗಣೇಶೋತ್ಸವಕ್ಕೆ ಈಗಿನಿಂದಲೇ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಆಗ್ರಹಿಸಿ ಬೆಳಗಾವಿಯ ಲೋಕಮಾನ್ಯ ತಿಲಕ ಗಣೇಶ ಮಹಾಮಂಡಳದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ಮಾಡಿದರು
ಗಣೇಶೋತ್ಸವಕ್ಕೆ ಈಗಿನಿಂದಲೇ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಆಗ್ರಹಿಸಿ ಬೆಳಗಾವಿಯ ಲೋಕಮಾನ್ಯ ತಿಲಕ ಗಣೇಶ ಮಹಾಮಂಡಳದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ಮಾಡಿದರು   

ಬೆಳಗಾವಿ: ನಗರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವ ಗಣೇಶೋತ್ಸವಕ್ಕೆ ಈಗಿನಿಂದಲೇ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಆಗ್ರಹಿಸಿ ಇಲ್ಲಿನ ಲೋಕಮಾನ್ಯ ತಿಲಕ ಗಣೇಶ ಮಹಾಮಂಡಳದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ಮಾಡಿದರು.

ಮಹಾಮಂಡಳದ ಅಧ್ಯಕ್ಷ ವಿಜಯ ಜಾಧವ ಮಾತನಾಡಿ, ‘ಪ್ರತಿ ವರ್ಷ ಗಣೇಶೋತ್ಸವ ಸಂದರ್ಭದಲ್ಲಿ ಕೆಲವು ಅಹಿತಕರ ಘಟನೆಗಳು ನಡೆಯುತ್ತಿವೆ. ಹೀಗಾಗಿ, ಈ ಬಾರಿ ಈಗಿನಿಂದಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಗಣೇಶನ ಮೂರ್ತಿಗಳನ್ನು ತರುವಾಗ ಹಾಗೂ ಬೀಳ್ಕೊಡುವಾಗ ರಸ್ತೆಯಲ್ಲಿನ ತಗ್ಗು ಗುಂಡಿಗಳಿಂದ ಸಮಸ್ಯೆಯಾಗುತ್ತಿದೆ. ರಸ್ತೆಗಳ ದುರಸ್ತಿ ಮಾಡಿಸಬೇಕು. ರಸ್ತೆಗೆ ಅಡ್ಡಲಾಗಿ ಬೆಳೆದಿರುವ ಮರದ ರೆಂಬೆಗಳನ್ನು ಕತ್ತರಿಸಬೇಕು. ವಿದ್ಯುತ್‌ ಕಂಬಗಳು ಹಾಗೂ ತಂತಿಗಳನ್ನು ಎತ್ತರಿಸಬೇಕು. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಹೈಮಾಸ್ಟ್‌ ದೀಪಗಳನ್ನು ಹಾಕಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಮೂರ್ತಿಗಳನ್ನು ವಿಸರ್ಜಿಸುವ ಹೊಂಡದ ಸುತ್ತಲಿನ ಸ್ಥಳವನ್ನು ಸ್ವಚ್ಛಗೊಳಿಸಬೇಕು. ಗಣೇಶ ಮೂರ್ತಿಗಳನ್ನು ವೀಕ್ಷಿಸಲು ಬರುವ ಜನರಿಗಾಗಿ ನಗರದ ವಿವಿಧ ಪ್ರದೇಶಗಳಿಗೆ ರಾತ್ರಿ ವೇಳೆ ಬಸ್‌ ಸೌಲಭ್ಯ ಕಲ್ಪಿಸಬೇಕು. ಗಣೇಶೋತ್ಸವ ಮಂಡಳಿಗಳ ಸಮೀಪ ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಆಗಬೇಕು. ಪೊಲೀಸ್‌ ಇಲಾಖೆಯಿಂದ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸದಸ್ಯರಾದ ಗಿರೀಶ ಧೋಂಗಡಿ, ನಿತಿನ ಭಾಟ್ಕಂಡೆ, ಹೇಮಂತ ಹವಳ, ಸುನೀಲ ಜಾಧವ, ಆನಂದ ಬಡಿಗೇರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.