ADVERTISEMENT

ಅಂಬೇಡ್ಕರ್‌ ಜಯಂತಿಗೆ ಅಡ್ಡಿ, ಹಲ್ಲೆ: ಮಹಿಳೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 15:39 IST
Last Updated 19 ಏಪ್ರಿಲ್ 2024, 15:39 IST
   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ತಾಲ್ಲೂಕಿನ ಶಮನೇವಾಡಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ (ಏ.14) ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಗಲಾಟೆ ಮಾಡಿದ್ದಾರೆ. ದಲಿತ ಮುಖಂಡರನ್ನು ಥಳಿಸಿ, ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ದೂರು ನೀಡಿದರೂ ಪೊಲೀಸರು ಏನೂ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿ ಗ್ರಾಮದ ಮಹಿಳೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಗ್ರಾಮದ ಬಸದಿ ಹತ್ತಿರ ಅಂಬೇಡ್ಕರ್‌ ಜಯಂತಿ ಆಚರಿಸಲು ಸಿದ್ಧತೆ ನಡೆದಿತ್ತು. ಅಲ್ಲಿ ಜಯಂತಿ ಮಾಡದಂತೆ ಇನ್ನೊಂದು ಕೋಮಿನ ಜನ ತಕರಾರು ಮಾಡಿದರು. ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆಯಿತು. ಜಗಳದಲ್ಲಿ ಸಿಕ್ಕಿಕೊಂಡ ಕೆಲ ಮಹಿಳೆಯರ ಬಟ್ಟೆ ಹರಿದು ಅವಮಾನ ಮಾಡಿದರು. ಅಂಬೇಡ್ಕರ್‌ ಹಾಗೂ ಬುದ್ಧನ ಭಾವಚಿತ್ರ, ಫೋಟೊಗಳನ್ನು ದ್ವಂಸ ಮಾಡಿದರು’ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

‘ಆರೋಪಿಗಳ ಗುಂ‍ಪು ದಲಿತರ ಮನೆಗೆ ನುಗ್ಗಿ ದಾಂಧಲೆ ನಡೆಸಿದೆ. ಕಲ್ಲು ಎಸೆದು, ಕಟ್ಟಿಗೆಗಳಿಂದ ಹಲ್ಲೆ ಮಾಡಿದೆ. ಗಾಯಗೊಂಡವರು ಆಸ್ಪತ್ರೆ ಸೇರಿದ್ದಾರೆ. ಈ ಬಗ್ಗೆ ಸದಲಗಾ ಠಾಣೆಯಲ್ಲಿ 20ಕ್ಕೂ ಹೆಚ್ಚು ಮಂದಿ ಮೇಲೆ ದೂರು ದಾಖಲಿಸಲಾಗಿದೆ. ಆರೋಪಿಗಳು ಊರಲ್ಲಿ ಓಡಾಡಿಕೊಂಡಿದ್ದಾರೆ. ಆದರೆ, ಪೊಲೀಸರು ಯಾರನ್ನೂ ಬಂಧಿಸಿಲ್ಲ’ ಎಂದು ಮಹಿಳೆಯರು ಕಿಡಿ ಕಾರಿದರು.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಪಿಎಸ್‌ಐ ಶಿವಕುಮಾರ್‌ ಬಿರಾದಾರ, ‘ಘಟನೆ ಬಗ್ಗೆ ದೂರು ಸ್ವೀಕರಿಸಲಾಗಿದೆ. ಇದೂವರೆಗೆ ಆರೋಪಿಗಳನ್ನು ಬಂಧಿಸಿಲ್ಲ’ ಎಂದರು.

ಬಂಧಿಸದೇ ಇರುವುದಕ್ಕೆ ಕಾರಣ ಏನೆಂದು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.