ADVERTISEMENT

ತಿದ್ದಿಕೊಂಡ ಆರ್‌ಸಿಯು: ವಿದ್ಯಾರ್ಥಿನಿಗೆ ಸಿಕ್ಕಿದ್ದು 96 ಅಂಕ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 19:14 IST
Last Updated 12 ಜೂನ್ 2019, 19:14 IST

ಬೆಳಗಾವಿ: ಅಥಣಿಯ ಬಿ.ಕಾಂ. ವಿದ್ಯಾರ್ಥಿನಿಗೆ 100ಕ್ಕೆ 101 ಅಂಕ ನೀಡಿ ಮಾಡಿದ್ದ ಯಡವಟ್ಟನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸರಿಪಡಿಸಿದೆ. ಅವರ ಸರಿಯಾದ ಫಲಿತಾಂಶವನ್ನು ಬುಧವಾರ ಪ್ರಕಟಿಸಿದೆ.

ಜಾಲತಾಣದಲ್ಲಿ ಪ್ರಕಟಿಸಿದ್ದ ಅಂಕಪಟ್ಟಿಯಲ್ಲಿ, 6ನೇ ಸೆಮಿಸ್ಟರ್‌ ವಿದ್ಯಾರ್ಥಿನಿ ಶೈಲಶ್ರೀ ಸಾಂವಗಾಂವಗೆ ‘ಮಾಡರ್ನ್‌ ಆಡಿಟಿಂಗ್ ಅಂಡ್ ಪ್ರಾಕ್ಟೀಸಸ್’ ವಿಷಯದಲ್ಲಿ 101 ದೊರೆತಿದೆ ಎಂದು ತಿಳಿಸಲಾಗಿತ್ತು. ಬಳಿಕ ಆ ರಿಸಲ್ಟ್‌ ಶೀಟನ್ನೇ ಅಳಿಸಿ ಹಾಕಲಾಗಿತ್ತು. ಮೊದಲು ಅಚ್ಚರಿಗೆ ಒಳಗಾಗಿದ್ದ ವಿದ್ಯಾರ್ಥಿನಿ ಹಾಗೂ ಕಾಲೇಜಿನವರು, ಅಂಕಪಟ್ಟಿಯನ್ನು ಜಾಲತಾಣದಿಂದ ತೆಗೆದು ಹಾಕಿದ್ದರಿಂದ ಗೊಂದಲಕ್ಕೆ ಒಳಗಾಗಿದ್ದರು.

‌‘ವಿಶ್ವವಿದ್ಯಾಲಯ ವ್ಯಾಪ್ತಿಯ 1.80 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗಿದೆ. ಒಬ್ಬ ವಿದ್ಯಾರ್ಥಿನಿಯ ಅಂಕಗಳನ್ನು ಟೋಟಲ್ ಮಾಡುವಾಗ ಟೈಪಿಂಗ್‌ ತಪ್ಪಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಅದನ್ನು ಸರಿಪಡಿಸಿದ್ದೇವೆ. ಕಾಲೇಜಿಗೆ ಕಳುಹಿಸಿರುವ ಅಂಕಪಟ್ಟಿಯಲ್ಲಿ ಎಲ್ಲವೂ ಸರಿ ಇದೆ’ ಎಂದು ಮೌಲ್ಯಮಾಪನ ಕುಲಸಚಿವ ‍ಪ್ರೊ.ರಂಗರಾಜ ವನದುರ್ಗ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.