ಅಪಘಾತ
–ಪ್ರಾತಿನಿಧಿಕ ಚಿತ್ರ
ಖಾನಾಪುರ: ದ್ವಿಚಕ್ರ ಮತ್ತು ಶಾಲಾ ವಾಹನಗಳ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ನಂದಗಡ ಗ್ರಾಮದ ಹೊರವಲಯದ ಬೆಳಗಾವಿ-ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.
ಮೃತರನ್ನು ತಾಲ್ಲೂಕಿನ ಅವರೊಳ್ಳಿ ಗ್ರಾಮದ ನಿವಾಸಿ ಮಾರುತಿ ಉಮೇಶ ಕೊಡೊಳ್ಳಿ (23) ಮತ್ತು ಗಾಯಾಳುವನ್ನು ಕಾಮಶಿನಕೊಪ್ಪ ಗ್ರಾಮದ ನಿವಾಸಿ ವಿಠ್ಠಲ ಫಕೀರ ಗಂಜಿ (22) ಎಂದು ಗುರುತಿಸಲಾಗಿದೆ.
ತಾಲ್ಲೂಕಿನ ಕಸಬಾ ನಂದಗಡ ಗ್ರಾಮದ ಸಂಬಂಧಿಕರೊಬ್ಬರ ಮನೆಗೆ ಬಂದಿದ್ದ ಮಾರುತಿ ಹಾಗೂ ವಿಠ್ಠಲ ಮರಳಿ ಅವರೊಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ನಂದಗಡದ ಎನ್.ಆರ್.ಇ ಸಂಸ್ಥೆಗೆ ಸೇರಿದ ಶಾಲಾ ವಾಹನಕ್ಕೆ ಬೈಕ್ ಗುದ್ದಿ ನೆಲಕ್ಕೆ ಅಪ್ಪಳಿಸಿದೆ.
ಈ ಅಪಘಾತದಲ್ಲಿ ಮಾರುತಿ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ವಿಠ್ಠಲ ಅವರನ್ನು ಅದೇ ಶಾಲಾ ವಾಹನದಲ್ಲಿ ಖಾನಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ವಿಠ್ಠಲ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.