ADVERTISEMENT

ಸುವರ್ಣ ವಿಧಾನಸೌಧಕ್ಕೆ ಗ್ರಾಮೀಣಾಭಿವೃದ್ಧಿ ಕಚೇರಿ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 6:33 IST
Last Updated 6 ಜನವರಿ 2020, 6:33 IST
ನೂತನ ಬಸ್‌ ಲೋಕಾರ್ಪಣೆ ನಂತರ ಸುವರ್ಣ ವಿಧಾನಸೌಧಕ್ಕೆ ಹೊರಟ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ. ಸಚಿವ ಈಶ್ವರಪ್ಪ ಉಪಸ್ಥಿತರಿದ್ದರು.
ನೂತನ ಬಸ್‌ ಲೋಕಾರ್ಪಣೆ ನಂತರ ಸುವರ್ಣ ವಿಧಾನಸೌಧಕ್ಕೆ ಹೊರಟ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ. ಸಚಿವ ಈಶ್ವರಪ್ಪ ಉಪಸ್ಥಿತರಿದ್ದರು.   

ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಕಚೇರಿಗಳ ಸ್ಥಳಾಂತರಕ್ಕೆ ಅಗತ್ಯವಿರುವ ಕೊಠಡಿಗಳನ್ನು ನೀಡುವಂತೆ ಸಭಾಧ್ಯಕ್ಷರಿಗೆ ಕೋರಿಕೆ ಸಲ್ಲಿಸಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಂಗಳವಾರ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಿ ಕಚೇರಿಗಳ ಸ್ಥಳಾಂತರ ಕುರಿತು ತೀರ್ಮಾನ ಮಾಡಲಾಗುವುದು’ಎಂದರು.

ಗಡಿ, ಭಾಷೆ ಹಾಗೂ ಜಲ ವಿವಾದವನ್ನು ಕೆಲವರು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.ನೆಲ-ಜಲ ಹಿತರಕ್ಷಣೆ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ‘ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಗಡಿ ವಿವಾದದ ಬಗ್ಗೆ ಅವಿವೇಕತನದ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ. ಗಡಿ ವಿವಾದ ಮುಗಿದ ಅಧ್ಯಾಯ. ಆ ಬಗ್ಗೆ ವಿನಾಕಾರಣ ಹೇಳಿಕೆ ನೀಡುವುದು ಸೂಕ್ತವಲ್ಲ’ ಎಂದು ಪ್ರತಿಕ್ರಿಯಿಸಿದರು.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ರಾಜ್ಯದ ಪರ ತೀರ್ಪು ಬರುವ ವಿಶ್ವಾಸವಿದೆ ಎಂದರು.

9 ನೂತನ ಬಸ್ ಲೋಕಾರ್ಪಣೆ

ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಒಂಬತ್ತು ನೂತನ ಬಸ್‌ಗಳನ್ನು ಸಾರ್ವಜನಿಕ ಸೇವೆಗೆಲೋಕಾರ್ಪಣೆಗೊಳಿಸಿದರು. ನಗರದ ಕೇಂದ್ರ ಬಸ್ ನಿಲ್ದಾಣ ಆವರಣದಲ್ಲಿ ನೂತನ ಬಸ್‌ಗಳಿಗೆ ಪೂಜೆ ನೆರವೇರಿಸುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.

ಬಸ್ ನಿಲ್ದಾಣ ಕಾಮಗಾರಿಯ ಪರಿಶೀಲಬೆ ನಡೆಸಿದ ಅವರು, ಜೂನ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ, ಮಹಾಂತೇಶ ದೊಡ್ಡಗೌಡರ, ಮಹೇಶ ಕುಮಠಳ್ಳಿ ಉಪಸ್ಥಿತರಿದ್ದರು.

ವಾಯವ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ, ಬಸ್ ನಿಲ್ದಾಣದ ಕಾಮಗಾರಿ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಬಳಿಕ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು, ನೂತನ ಮಲ್ಟಿ ಎಕ್ಸೆಲ್ ಬಸ್‌ನಲ್ಲಿ ಸುವರ್ಣ ವಿಧಾನಸೌಧಕ್ಕೆ ಪ್ರಯಾಣಿಸಿದರು.

ಸುವರ್ಣ ವಿಧಾನಸೌಧದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟನಾ ಸಮಾರಂಭಕ್ಕೆ ಎಲ್ಲ ಅತಿಥಿಗಳು ಬಸ್‌ನಲ್ಲೇ ಪ್ರಯಾಣಿಸಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸೇರಿದಂತೆ ಎಲ್ಲ ಶಾಸಕರು ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.