ADVERTISEMENT

ಜಲಾಶಯಗಳಿಗೆ ಪ್ರವೇಶ ನಿಷೇಧ

ಮುಂಜಾಗ್ರತೆ ಕ್ರಮವಾಗಿ ಹಿಡಕಲ್‌, ನವಿಲುತೀರ್ಥದ ಜಲಾಶಯಗಳಲ್ಲಿ ಬಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 9 ಮೇ 2025, 15:12 IST
Last Updated 9 ಮೇ 2025, 15:12 IST
ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದ ಮುಖ್ಯದ್ವಾರಕ್ಕೆ ಶುಕ್ರವಾರ ಬೀಗ ಜಡಿದಿರುವುದು
ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದ ಮುಖ್ಯದ್ವಾರಕ್ಕೆ ಶುಕ್ರವಾರ ಬೀಗ ಜಡಿದಿರುವುದು   

ಬೆಳಗಾವಿ: ಕಾಶ್ಮೀರದಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಮತ್ತು ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಭದ್ರತೆಯನ್ನೂ ಹೆಚ್ಚಿಸಲಾಗಿದೆ.

ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದೆ. ಹಾಗಾಗಿ ಬೇಸಿಗೆ ಮುಗಿಯುತ್ತ ಬಂದರೂ, 51 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಹಿಡಕಲ್‌ ಡ್ಯಾಂನಲ್ಲಿ ಈಗ 16.87 ಟಿಎಂಸಿ ನೀರು ಸಂಗ್ರಹವಿದೆ. 37.73 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ನವಿಲುತೀರ್ಥ ಅಣೆಕಟ್ಟೆಯಲ್ಲಿ 12.26 ಟಿಎಂಸಿ ಅಡಿ ನೀರು ಸಂಗ್ರಹವಿದೆ. 

ಈಗ ಶಾಲೆ–ಕಾಲೇಜುಗಳಿಗೆ ರಜೆ ಇರುವುದರಿಂದ ಮಕ್ಕಳು, ಅವರ ಪಾಲಕರು ಜಲಾಶಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಯಲ್ಲಮ್ಮನಗುಡ್ಡಕ್ಕೆ ಭೇಟಿ ನೀಡಿದ ಭಕ್ತರೂ ನವಿಲುತೀರ್ಥ ಜಲಾಶಯಕ್ಕೆ ತೆರಳುತ್ತಿದ್ದಾರೆ. ಆದರೆ, ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಎರಡೂ ಕಡೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.

ADVERTISEMENT

ಭದ್ರತೆ ಹೆಚ್ಚಿಸಿದ್ದೇವೆ:

‘ನಮ್ಮ ಅಣೆಕಟ್ಟೆಗೆ ಯಾವ ಅಪಾಯವೂ ಇಲ್ಲ. ಆದರೆ, ಮುಂಜಾಗ್ರತೆ ಕ್ರಮವಾಗಿ ಸಾರ್ವಜನಿಕರಿಗೆ ಜಲಾಶಯದ ಬಳಿ ಮತ್ತು ಉದ್ಯಾನಕ್ಕೆ ಭೇಟಿ ನೀಡುವುದಕ್ಕೆ ನಿಷೇಧ ಹೇರಿದ್ದೇವೆ. ಪೊಲೀಸರು ಮತ್ತು ನಮ್ಮ ಇಲಾಖೆ ಸಿಬ್ಬಂದಿ ಭದ್ರತೆಗೆ ನಿಯೋಜಿಸಿದ್ದೇವೆ. ಹೆಚ್ಚುವರಿ ಪೊಲೀಸರನ್ನು ಒದಗಿಸುವಂತೆಯೂ ಕೋರಿದ್ದೇವೆ’ ಎಂದು ನವಿಲುತೀರ್ಥ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್‌ ವಿವೇಕ ಮುದಿಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.