ADVERTISEMENT

ಬೈಲಹೊಂಗಲ: "ಅನ್ಯಭಾಷೆಗಳ ಆಕ್ರಮಣ ತಡೆಯಲಿ"

ದೇವಲಾಪೂರ: 7ನೇ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಡಾ.ಶಾಂತಿನಾಥ ದಿಬ್ಬದ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 6:06 IST
Last Updated 4 ಫೆಬ್ರುವರಿ 2023, 6:06 IST
ಬೈಲಹೊಂಗಲ ತಾಲ್ಲೂಕಿನ ದೇವಲಾಪೂರ ಗ್ರಾಮದಲ್ಲಿ ಕಸಾಪ ಸಮ್ಮೇಳನದ ಮೆರವಣಿಗೆಯಲ್ಲಿ ಮಕ್ಕಳ ಸಾಹಿತ್ಯದ ಗ್ರಂಥ ತಲೆ ಮೇಲೆ ಹೊತ್ತು ಸಾಗಿದರು
ಬೈಲಹೊಂಗಲ ತಾಲ್ಲೂಕಿನ ದೇವಲಾಪೂರ ಗ್ರಾಮದಲ್ಲಿ ಕಸಾಪ ಸಮ್ಮೇಳನದ ಮೆರವಣಿಗೆಯಲ್ಲಿ ಮಕ್ಕಳ ಸಾಹಿತ್ಯದ ಗ್ರಂಥ ತಲೆ ಮೇಲೆ ಹೊತ್ತು ಸಾಗಿದರು   

ಬೈಲಹೊಂಗಲ: ‘ಬೆಳಗಾವಿ ಅಪ್ಪಟ ಕನ್ನಡ ಕೇಂದ್ರ. ಈ ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಕನ್ನಡ ಭಾಷೆಯ ಉಳಿವು, ಪ್ರಸಾರ ಬೆಳವಣಿಗೆಯಲ್ಲಿ ಈ ನಾಡಿನ ಜನತೆ ಸದಾ ಮುಂಚೂಣಿಯಲ್ಲಿದ್ದಾರೆ. ವಿಶೇಷವಾಗಿ ಗಡಿ ಪ್ರದೇಶಗಳಲ್ಲಿರುವ ಕನ್ನಡ ಶಾಲೆಗಳ ಸ್ಥಿತಿ ಸುಧಾರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅನ್ಯಭಾಷೆಗಳ ಆಕ್ರಮಣವನ್ನು ತಗ್ಗಿಸಬೇಕು’ ಎಂದು ಸಮ್ಮೇಳನದ ಅಧ್ಯಕ್ಷ ಡಾ.ಶಾಂತಿನಾಥ ದಿಬ್ಬದ ಹೇಳಿದರು.

ತಾಲ್ಲೂಕಿನ ದೇವಲಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ರಾಜ್ಯದ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಉಳಿವಿಗಾಗಿ ಮತ್ತು ಸಂವಧ೯ನೆಗಾಗಿ ಎಲ್ಲರೂ ಸಂಘಟಿತರಾಗಿ, ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು’ ಎಂದರು.

‘ಸರ್ಕಾರ ಕನ್ನಡ ಭಾಷೆ ಬಳಕೆಯ ವಿಷಯದಲ್ಲಿ ಇನ್ನೂ ಕೆಲವು ಕಠೋರ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಬೆಳಗಾವಿ ನಮ್ಮದು ಎಂಬುದನ್ನು ಕಾನೂನು ರೀತಿಯಲ್ಲಿ ಸಾಧಿಸಬೇಕು. ಈ ಭಾಗದ ನೀರಾವರಿ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಬೇಕು’ ಎಂದು ಹೇಳಿದರು.

ADVERTISEMENT

ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿದರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಆರ್.ಠಕ್ಕಾಯಿ ಮಾತನಾಡಿದರು.

ಸ್ವಾಗತ ಸಮಿತಿ ಅಧ್ಯಕ್ಷ ಈಶ್ವರ ಉಳ್ಳೇಗಡ್ಡಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಪರಿಷತ್ತಿನ ಧ್ವಜಾರೊಹಣ ನೆರವೇರಿಸಿದರು.

ತಾಲ್ಲೂಕು ಘಟಕ ಅಧ್ಯಕ್ಷ ಎನ್.ಆರ್.ಠಕ್ಕಾಯಿ ನಾಡ ಧ್ವಜಾರೋಹಣ ನೆರವೇರಿಸಿದರು. ಸಾಹಿತಿ ಅನ್ನಪೂರ್ಣ ಕನೋಜ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ಸ್ನೇಹಲತಾ ಮೆಟಗುಡ್ಡ, ಗ್ರಾ.ಪಂ ಅಧ್ಯಕ್ಷ ಬಸವರಾಜ ಪಟ್ಟೆದ, ಉಪಾಧ್ಯಕ್ಷೆ ಜೈರಾಬಿ ನದಾಫ, ಚಿತ್ರನಟ ಶಿವರಂಜನ ಬೋಳನ್ನವರ, ಪತ್ರಕರ್ತ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ಮೋಹನ ಪಾಟೀಲ, ಎಸ್‌.ಡಿ.ಗಂಗಣ್ಣವರ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಮೆರವಣಿಗೆ: ಸಮ್ಮೇಳನದ ಅಧ್ಯಕ್ಷ ಡಾ.ಶಾಂತಿನಾಥ ದಿಬ್ಬದ ಅವರನ್ನು ಬೆಳ್ಳಿ ಸಾರೋಟಿನಲ್ಲಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಚಕ್ಕಡಿ, ಟ್ಯಾಕ್ಟರ್‌ಗಳಲ್ಲಿ ದೇಶದ ಮಹಾನ್‌ ನಾಯಕರ ವೇಷ ಧರಿಸಿದ್ದ ವಿದ್ಯಾರ್ಥಿಗಳು ಗಮನಸೆಳೆದರು. ವಿವಿಧ ವಾದ್ಯಮೇಳಗಳು ಮೆರವಣಿಗೆಗೆ ಕಳೆ ತಂದವು. ಮೆರವಣಿಗೆಯಲ್ಲಿ ಮಕ್ಕಳು ಸಾಹಿತ್ಯದ ಗ್ರಂಥ ತಲೆ ಮೇಲೆ ಹೊತ್ತು ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.