ADVERTISEMENT

‘ಬಿಜೆಪಿಯವರು ಹತ್ತು ಬಾರಿ ಯೋಚಿಸಲಿ’

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 14:31 IST
Last Updated 4 ನವೆಂಬರ್ 2020, 14:31 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಗೋಕಾಕ: ‘ಎಂಇಎಸ್ ಮುಖಂಡ ಅರವಿಂದ ಪಾಟೀಲ ಅವರನ್ನು ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬೆಂಬಲಿಸಿ, ಮುಂದೆ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿರುವ ಬಿಜೆಪಿಯವರು ಈ ನಿಟ್ಟಿನಲ್ಲಿ ಹತ್ತು ಬಾರಿ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಕನ್ನಡಿಗರ ಹಿತಾಸಕ್ತಿ ವಿರುದ್ಧ ನಿರಂತರವಾಗಿ ತೊಡಗಿರುವವರನ್ನು ಬೆಂಬಲಿಸುವಾಗ ಎಚ್ಚರ ವಹಿಸಬೇಕು’ ಎಂದು ಕೆ‍ಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕ ರಾಜ್ಯೋತ್ಸವದಂದು ಕರಾಳ ದಿನಾಚರಣೆ ನಡೆಸುವವರಿಗೆ ರಾಷ್ಟ್ರೀಯ ಪಕ್ಷ ಬೆಂಬಲ ನೀಡುವುದು ಸಮಂಜಸವೇ?’ ಎಂದು ಕೇಳಿದರು.

‘ಈ ಹಿಂದೆ ಆ ಸಂಘಟನೆ ಕರ್ನಾಟಕ ಮತ್ತು ಕನ್ನಡ ಭಾಷೆ ಕುರಿತು ಪ್ರದರ್ಶಿಸಿರುವ ನಿಲುವನ್ನು ಪರಾಮರ್ಶಿಸುವ ಅಗತ್ಯವಿದೆ. ಕೇವಲ ರಾಜಕೀಯ ಉದ್ದೇಶಗಳ ಈಡೇರಿಕೆಗಾಗಿ, ನಮ್ಮನ್ನು ನಿಂದಿಸುವವರಿಗೆ ಮಣೆ ಹಾಕುವ ಪ್ರವೃತ್ತಿ ಅತ್ಯಂತ ಅಪ್ರಸ್ತುತ ಮತ್ತು ಅಪವಿತ್ರ’ ಎಂದು ಟೀಕಿಸಿದರು.

ADVERTISEMENT

‘ಹೇಳುವುದೊಂದು ಮಾಡುವುದೊಂದು ಎನ್ನುವುದು ಬಿಜೆಪಿ ಸರ್ಕಾರಕ್ಕೆ ಹೊಸತೇನಲ್ಲ. ನೇಕಾರರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಭರವಸೆ ನೀಡಿ ಈಗ ನಿರ್ಧಾರ ಬದಲಿಸುವ ಮೂಲಕ ಸರ್ಕಾರ ಶ್ರಮಿಕರ ದಾರಿ ತಪ್ಪಿಸುತ್ತಿದೆ’ ಎಂದು ದೂರಿದರು.

‘ಸರ್ಕಾರದ ಭರವಸೆಯ ಮಾತುಗಳ ಹಿನ್ನೆಲೆಯಲ್ಲಿ ನೇಕಾರರು ಹೆಚ್ಚಿನ ಸೀರೆಗಳನ್ನು ಸಿದ್ಧಪಡಿಸಿದ್ದಾರೆ. ಆದರೆ, ಸರ್ಕಾರದ ಖಜಾನೆ ಖಾಲಿಯಾಗಿರುವುದರಿಂದ ನೇಕಾರರ ಕನಸು ನುಚ್ಚು ನೂರಾಗಿದೆ. ಅವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.