ADVERTISEMENT

ಬಿಡಿಸಿಸಿ ಚುನಾವಣೆ: ರೆಸಾರ್ಟ್‌ನಲ್ಲಿ ಒಂದಾಗಿ ಮಾತುಕತೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 4:05 IST
Last Updated 15 ಅಕ್ಟೋಬರ್ 2025, 4:05 IST
<div class="paragraphs"><p>ಸತೀಶ ಜಾರಕಿಹೊಳಿ</p></div>

ಸತೀಶ ಜಾರಕಿಹೊಳಿ

   

ಬೆಳಗಾವಿ: ‘ವಿಧಾನಸಭೆ, ಲೋಕಸಭೆ ಚುನಾವಣೆಗಳು ಪಕ್ಷ ಆಧರಿತವಾಗಿ ನಡೆಯುತ್ತವೆ. ಆ ಸಂದರ್ಭದಲ್ಲಿ ರೆಸಾರ್ಟ್‌ ರಾಜಕಾರಣ ಒಳ್ಳೆಯದಲ್ಲ. ಸಹಕಾರ ಕ್ಷೇತ್ರದಲ್ಲಿ ಚುನಾವಣೆ ನಡೆದಾಗ ಎಲ್ಲರೂ ಒಟ್ಟಿಗೆ ರೆಸಾರ್ಟ್‌ ಹೋಗಿ ಚರ್ಚಿಸುವುದು ಸಾಮಾನ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಡಿಸಿಸಿ ಚುನಾವಣೆಯಲ್ಲಿ ಉಳಿದ ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಮ್ಮ ತಂಡವೇ ಹೆಚ್ಚು ಸೀಟ್‌ ಗೆಲ್ಲುವ ವಿಶ್ವಾಸವಿದೆ’ ಎಂದರು.

ADVERTISEMENT

‘ಲಿಂಗಾಯತರನ್ನು ಒಡೆದು ಆಳುತ್ತಿದ್ದಾರೆ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸತೀಶ, ‘ಆ ರೀತಿ ಹೇಳಿದವರು ಯಾರು? ಚರ್ಚೆಗಳಿಗೆಲ್ಲ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಚರ್ಚೆಗೆ ಟ್ಯಾಕ್ಸ್, ಜಿಎಸ್ಟಿ ಇರುವುದಿಲ್ಲ‌‌. ಹಾಗಾಗಿ, ಯಾರು ಏನು ಬೇಕಾದರೂ ಹೇಳುತ್ತಾರೆ’ ಎಂದರು.

‘ಎಲ್ಲರಿಗೂ ಸೋಲಿನ ಭಯ ಇದ್ದೆ ಇರುತ್ತದೆ. ಭಯ ಇದ್ದರೆ ಹೆಚ್ಚಿನ‌ ಮತಗಳಿಂದ ಗೆಲ್ಲುತ್ತಾರೆ.  ನಿಪ್ಪಾಣಿ, ಹುಕ್ಕೇರಿ, ರಾಮದುರ್ಗ ಸೇರಿ ಎಲ್ಲ ಕಡೆ ಕ್ರಾಸ್ ವೋಟಿಂಗ್ ಆಗಬಹುದು. ಇಂಥ ಚುನಾವಣೆಗಳಲ್ಲಿ ಈ ಕಡೆಯುವರು ಆಕಡೆ ಆ ಕಡೆಯುವರು ಈ ಕಡೆ ಮತ ಹಾಕುವುದು ಸಾಮಾನ್ಯ’ ಎಂದರು.

‘ಹುಕ್ಕೇರಿಯಲ್ಲಿ ಮತದಾನದ ಹಕ್ಕು ತೆಗೆದುಕೊಂಡವರು ಯಾರಿಗೆ ಮತ ಹಾಕಬೇಕು ಎಂದು ನಿರ್ಧರಿಸಿದ್ದು, ಅವರಿಗೆ ಮತ ಚಲಾಯಿಸುತ್ತಾರೆ. ಹಾಗಾಗಿ, ಪ್ರಚಾರ ಮಾಡುವ ಅವಶ್ಯಕತೆ ಇಲ್ಲ. ಆದರೆ, ಗೆಲ್ಲಲು ಎಲ್ಲ ರೀತಿ ಪ್ರಯತ್ನಿಸುತ್ತೇವೆ’ ಎಂದರು.

‘ಶಾಸಕ ಅಶೋಕ ಪಟ್ಟಣ ಅವರಿಗೆ ಸೋಲಿನ ಭಯ ಇದೆ ಎಂದೇನಿಲ್ಲ. ಅವರೇ ಗೆಲ್ಲುತ್ತಿದ್ದರು. ಅ.19ರಂದು ನಿರ್ಧಾರ ತೆಗೆದುಕೊಳ್ಳುವಂತೆ ಹೇಳಿದ್ದೇವು. ಆದರೂ ಅವರು ರಿಸ್ಕ್‌ ಬೇಡ ಎಂದು  ನಾಮಪತ್ರ ಹಿಂಪಡೆದಿದ್ದಾರೆ. ರಾಮದುರ್ಗದಲ್ಲಿ ಈಗಲೂ ಗೊಂದಲ ಇದೆ. ಕೊನೆ ಕ್ಷಣದಲ್ಲಿ ಮುಖಂಡರು ಯಾವ ರೀತಿ ಗೊಂದಲ ಬಗೆಹರಿಸುತ್ತಾರೆ ನೋಡೋಣ’ ಎಂದರು.

‘ಕೆಎಂಎಫ್, ಡಿಸಿಸಿ ಸೇರಿ ಇತರೆ ಸಂಘ ಸಂಸ್ಥೆಗಳಲ್ಲಿ ಅವಿರೋಧ ಆಯ್ಕೆ ಆಗುತ್ತಿತ್ತು. ಆದರೆ, ಒಂದು ವರ್ಷದ ಹಿಂದೆ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಸಿದ್ಧತೆ ನಡೆದಿತ್ತು.‌ ಈಗ ಪೂರ್ಣ ಪ್ರಮಾಣದಲ್ಲಿ ಬಾಲಚಂದ್ರ ಜಾರಕಿಹೊಳಿ ನೇತೃತ್ವ ವಹಿಸಿದ್ದಾರೆ. ಅವರು ತಯಾರಿ ನಡೆಸಿದ ಪರಿಣಾಮ 9 ಸ್ಥಾನಗಳ ಅವಿರೋಧ ಆಯ್ಕೆ ಆಗಿದೆ’ ಎಂದೂ ಪ‍್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಿಪ್ಪಾಣಿಯಲ್ಲಿ ಈ ಚುನಾವಣೆಯಲ್ಲಿ ಉತ್ತಮ ಪಾಟೀಲ ಅವರಿಗೆ ಸಹಾಯ ಮಾಡುವುದಿಲ್ಲ ಎಂದು ಮುಂಚೆಯೇ ಹೇಳಿದ್ದೇವು. ಈ ಸಲ ಅಣ್ಣಾಸಾಹೇಬ ಜೊಲ್ಲೆ ಅವರ ಜೊತೆಗೆ ನಿಲ್ಲಬೇಕಿದೆ. ಅಥಣಿ ವಸ್ತುಸ್ಥಿತಿ ಬಗ್ಗೆ ಹೆಚ್ಚು ನಾವು ಗಮನ ಕೊಟ್ಟಿಲ್ಲ’ ಎಂದರು. 

‘ಸುವರ್ಣ ವಿಧಾನಸೌಧದಲ್ಲಿ ಡಿ.8ರಿಂದ ಹತ್ತು ದಿನಗಳ ಕಾಲ ಚಳಿಗಾಲ ಅಧಿವೇಶನ ನಡೆಯಲಿದೆ. ನಮ್ಮ ಸರ್ಕಾರದಿಂದ ಅಧಿವೇಶನ ಯಶಸ್ವಿಯಾಗಿ ಮಾಡೋಣ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.