ADVERTISEMENT

ಬೆಳಗಾವಿ: ಸವದತ್ತಿ ಯಲ್ಲಮ್ಮ ಪುರಸಭೆ ಇನ್ಮುಂದೆ ನಗರಸಭೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 8:23 IST
Last Updated 28 ಜನವರಿ 2026, 8:23 IST
ನಗರಸಭೆಯಲ್ಲಿ ಮೇಲ್ದರ್ಜೆಗೇರಿಸಿದ ನಿಮಿತ್ಯ ಏರ್ಪಡಿಸಲಾದ ವಿಶೇಷ ಸಮಾರಂಭದಲ್ಲಿ ಶಾಸಕ ವಿಶ್ವಾಸ್ ವೈದ್ಯ ಮಾತನಾಡಿದರು
ನಗರಸಭೆಯಲ್ಲಿ ಮೇಲ್ದರ್ಜೆಗೇರಿಸಿದ ನಿಮಿತ್ಯ ಏರ್ಪಡಿಸಲಾದ ವಿಶೇಷ ಸಮಾರಂಭದಲ್ಲಿ ಶಾಸಕ ವಿಶ್ವಾಸ್ ವೈದ್ಯ ಮಾತನಾಡಿದರು   

ಸವದತ್ತಿ: ಸವದತ್ತಿ ಯಲ್ಲಮ್ಮ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಮೂಲಕ ಹಲವು ದಶಕಗಳ ಕನಸು ನನಸಾಗಿ ಪ್ರಗತಿ ಪಥದಲ್ಲಿ ಹೊಸ ಇತಿಹಾಸವಾಗಲಿದೆ. ಇದು ಸವದತ್ತಿ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವೆಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.

ಯಲ್ಲಮ್ಮ ಪುರಸಭೆಯನ್ನು ಗಣರಾಜ್ಯೋತ್ಸವದಂದು ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ ನಿಮಿತ್ತ ಏರ್ಪಡಿಸಲಾದ ವಿಶೇಷ ಸಮಾರಂಭದಲ್ಲಿ ಮಾತನಾಡಿದರು.

ಪಟ್ಟಣದ ಜನತೆಯ ಆಶಯದಂತೆ ಪುರಸಭೆಯನ್ನು ನಗರಸಭೆಯಾಗಿ ಮೇಲ್ದಾರ್ಜೆಗೇರಿಸಲಾಗಿದೆ ಎಂದ ಶಾಸಕರು ಹರ್ಷ ವ್ಯಕ್ತಪಡಿಸಿದರು.

ADVERTISEMENT

ಪಟ್ಟಣದ ಜನಸಂಖ್ಯೆ ಮತ್ತು ಬೆಳೆಯುತ್ತಿರುವ ಅಗತ್ಯತೆಗಳಿಗೆ ತಕ್ಕಂತೆ ಅಧಿಕ ಅನುದಾನ, ಉತ್ತಮ ಮೂಲಭೂತ ಸೌಕರ್ಯ, ಆಡಳಿತಾತ್ಮಕ ಬಲವನ್ನು ಹೆಚ್ಚಿಸುವಲ್ಲಿ ಈ ಉನ್ನತೀರಣವು ಅತ್ಯಂತ ಸಹಕಾರಿಯಾಗಲಿದೆ. ಇದು ಕೇವಲ ಹೆಸರಿನ ಬದಲಾವಣೆ ಅಲ್ಲ. ಬದಲಾಗಿ ಸವದತ್ತಿಯ ಸಮಗ್ರ ಅಭಿವೃದ್ಧಿಯ ಹೊಸ ಅಧ್ಯಾಯ. ಅನುದಾನ, ಸಿಬ್ಬಂದಿ ಸಂಖ್ಯೆ ಹಾಗೂ ವಾರ್ಡಗಳ ಸಂಖ್ಯೆ ಹೆಚ್ಚಳವಾಗಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನಗರಸಭೆಯಾದ ಪರಿಣಾಮ ಸಾರ್ವಜನಿಕರ ಕೆಲಸಗಳು ಸುಗಮವಾಗಲಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೊಳಿ ಅವರ ಸಹಕಾರದೊಂದಿಗೆ ನಗರಸಭೆಯಾಗಿದೆ. ಸಧ್ಯಕ್ಕಿರುವ ತರಕಾರಿ ಮಾರುಕಟ್ಟೆಯನ್ನು ₹6 ಕೋಟಿ ಅನುದಾನದಲ್ಲಿ ಅಭಿವೃದ್ಧಿಸಲಾಗುವದು. ಜೊತೆಗೆ ಕೋಟೆ ಅಭಿವೃದ್ಧಿಗಾಗಿ ₹10 ಕೋಟಿ ಅನುದಾನ ಪ್ರಸ್ತಾವನೆಗೆ ಸಲ್ಲಿಸಲಾಗಿದೆ ಎಂದರು.

ಪೌರಾಯುಕ್ತ ಸಂಗನಬಸಯ್ಯ ಮಾತನಾಡಿ, 150 ವರ್ಷಗಳ ಇತಿಹಾಸವಿರುವ ಪುರಸಭೆ ಇದೀಗ ಜ. 26 ರಂದು ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು ಸಂತಸ ತಂದಿದೆ ಎಂದರು. ಮೂರು ಬಾರಿ ಕಡತ ಮರಳಿ ಬಂದಿತ್ತು. ಮತ್ತೆ ಶಾಸಕರ ಸತತ ಪ್ರಯತ್ನದಿಂದ ಸಫಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹತ್ತು ಹಲವು ಯೋಜನೆಗಳ ಅನುದಾನ ಹರಿದು ಬರಲಿದೆ ಎಂದರು.

ನಗರಸಭೆಯಾಗಿ ಮೇಲ್ದರ್ಜೆಗೇರಿದ ಕಾರಣ ವಿದ್ಯುತ್ ವೀಪಾಲಂಕಾರ, ತಳಿರು ತೋರಣಗಳಿಂದ ಸವದತ್ತಿ ಯಲ್ಲಮ್ಮ ನಗರಸಭೆ ಕಚೇರಿಯನ್ನು ಮಧುವಣಗಿತ್ತಿಯಂತೆ ಸಿಂಗರಿಸಲಾಗಿತ್ತು.  ಈ ವೇಳೆ ಮಾಜಿ ಶಾಸಕ ಆರ್.ವಿ. ಪಾಟೀಲ, ಅಶ್ವಥ್ ವೈದ್ಯ, ಗದಿಗೆಪ್ಪ ಕುರಿ, ಶ್ರೀಪಾದ ಸಬನೀಸ್, ಇಒ ಆನಂದ ಬಡಕುಂದ್ರಿ, ಶಿವಾನಂದ ಹೂಗಾರ, ಭರಮಣ್ಣ ಅಣ್ಣಿಗೇರಿ, ಎಂ.ಕೆ. ಬೇವೂರ, ಫಕ್ರುಸಾಬ ದೊಡಮನಿ, ಸಿಬ್ಬಂದಿ ಹಾಗೂ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.