ಸವದತ್ತಿ: ‘ಸವದತ್ತಿ ಯಲ್ಲಮ್ಮ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ, ಸಿ.ಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಅನುಮೋದಿಸಿದೆ. ಚುನಾವಣಾ ಪೂರ್ವದ ಭರವಸೆಗಳನ್ನು ಈಡೇರಿಸಿ ಮತ್ತೆ ಮತಯಾಚಿಸುವೆ’ ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.
ಇಲ್ಲಿನ ನಿಕ್ಕಮ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜರುಗಿದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮುಂಬರುವ ದಿನಗಳಲ್ಲಿ ನಗರವನ್ನು ಹೆಚ್ಚು ಸುಂದರಗೊಳಿಸಲಾಗುವುದು. ತಾಲ್ಲೂಕಿನ ಮದ್ಲೂರ, ಅರ್ಟಗಲ್ಲ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಅನುಮೋದನೆ ನೀಡಿದೆ. ಜನತೆಗೆ ನಿರಂತರ ಕುಡಿಯುವ ನೀರು ಪೂರೈಕೆ ನಡೆದಿದೆ. ಯುಜಿಡಿಗೆ ಶೀಘ್ರ ಚಾಲನೆ ನೀಡಲಾಗುವುದು’ ಎಂದರು.
‘ತಾಲ್ಲೂಕಿನ ಧಡೇರಕೊಪ್ಪ, ಬಡ್ಲಿ ಹಾಗೂ ಕುರಬರದಡ್ಡಿ ಶಾಲೆಗಳನ್ನು ಪ್ರಾಥಮಿಕದಿಂದ ಪ್ರೌಢಶಾಲೆಗಳಾಗಿ ಉನ್ನತೀಕರಿಸಲಾಗಿದೆ. ಮುಂಬರುವ ದಿನಗಳಲ್ಲಿ ಶಿಕ್ಷಕರ ದಿನಾಚರಣೆಯನ್ನು ಇನ್ನೂ ಬಲಪಡಿಸಲು ಪ್ರಯತ್ನಿಸಲಾಗುವು ಎಂದರು.
ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ, ‘ಶಿಕ್ಷಣಕ್ಕೆ ಪ್ರಾಮುಖ್ಯತೆಯಿರಿಸಿ ಶಾಸಕ ವಿಶ್ವಾಸ ವೈದ್ಯ ಅವರು ತಮ್ಮ ಮೊದಲ ವೇತನವನ್ನು ಗ್ರಾಂಥಾಲಯಕ್ಕೆ ನೀಡಿ ಮಾದರಿಯಾಗಿದ್ದಾರೆ. ಇವರ ನೇತೃತ್ವದಲ್ಲಿ ತಾಲ್ಲೂಕಿನಲ್ಲಿ ಶಿಕ್ಷಣವನ್ನು ಹೆಚ್ಚಿಸುವ ಪ್ರೋತ್ಸಾಹ ಚಟುವಟಿಕೆ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.
ಬಿಇಒ ಎ.ಎ. ಖಾಜಿ ಮಾತನಾಡಿ, ‘ಕೊನೆ ಶಾಲೆ-ಕೊನೆ ಮಗುವಿಗೂ ಶಿಕ್ಷಣ’ ಎನ್ನುವ ಧ್ಯೇಯದೊಂದಿಗೆ ಒಟ್ಟು 62 ಸಾವಿರ ಮಕ್ಕಳ ಶಿಕ್ಷಣ ಮಾತ್ರವಲ್ಲದೇ ದೈಹಿಕ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಲು ಶಾಸಕರು ಸೂಚಿಸಿದ್ದಾರೆ’ ಎಂದು ತಿಳಿಸಿದರು.
ಡಿವೈಎಸ್‌ಪಿ ಚಿದಂಬರ ಮಡಿವಾಳರ, ಅಶ್ವಥ್ ವೈದ್ಯ, ಕಿರಣ ಕುರಿ, ಪ್ರಕಾಶ ಹೆಮ್ಮರಡಿ, ಇಒ ಆನಂದ ಬಡಕುಂದ್ರಿ, ಪಿಐ ಧರ್ಮಾಕರ ಧರ್ಮಟ್ಟಿ, ಸುನೀಲ ಏಗನಗೌಡ್ರ, ಪ್ರಶಾಂತ ಹಂಪಣ್ಣವರ, ಡಿ.ಎಸ್. ಕೊಪ್ಪದ, ತುಕಾರಾಮ ಏಗನಗೌಡರ, ರುದ್ರಪ್ಪ ಕುಡಚಿ, ವಿರುಪಾಕ್ಷ ಕಂಪಲಿ, ಮಲ್ಲಿಕಾರ್ಜುನ ಹೊಳಿ, ಬಸವರಾಜ ಆಯಟ್ಟಿ, ಸೋಮು ಲಮಾಣಿ, ರಮೇಶ ಅಬ್ಬಾರ, ಜಗದೀಶ ತೋಟಗಿ, ಅಶೋಕ ಮುರಗೋಡ, ಬಿ.ಎನ್. ಬ್ಯಾಳಿ, ಶಿವು ರಾಠೋಡ, ಎಫ್.ವೈ. ಗಾಜಿ, ಅಮೃತ ಸಾಣಿಕೊಪ್ಪ, ಮೈತ್ರಾದೇವಿ ವಸ್ತ್ರದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.