ADVERTISEMENT

ಸಮುದಾಯ ಭವನಗಳಲ್ಲಿ ತರಗತಿ!

ಜೋಡಕುರಳಿ: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ದುಸ್ಥಿತಿ

ಸುಧಾಕರ ಎಸ್.ತಳವಾರ, ಬೆಂಗಳೂರು
Published 14 ಜನವರಿ 2019, 6:45 IST
Last Updated 14 ಜನವರಿ 2019, 6:45 IST
ಚಿಕ್ಕೋಡಿ ತಾಲ್ಲೂಕಿನ ಜೋಡಕುರಳಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಮುದಾಯಭವನದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ
ಚಿಕ್ಕೋಡಿ ತಾಲ್ಲೂಕಿನ ಜೋಡಕುರಳಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಮುದಾಯಭವನದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ   

ಚಿಕ್ಕೋಡಿ: 800ಕ್ಕೂ ಹೆಚ್ಚು ಮಕ್ಕಳು ಕಲಿಯುವ ಆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಇರುವುದು ಆರೇ ಕೊಠಡಿಗಳು. ಸಮುದಾಯ ಭವನಗಳಲ್ಲೇ ಮಕ್ಕಳು ಕಲಿಯುವ ಅನಿವಾರ್ಯತೆ ಇದೆ. ಕಂಡೂ ಕಾಣದಂತಿರುವ ಜನಪ್ರತಿನಿಧಿಗಳು, ಮೂಲಸೌಕರ್ಯವಂಚಿತ ಗ್ರಾಮೀಣ ಶಾಲೆ!

– ತಾಲ್ಲೂಕಿನ ಜೋಡಕುರಳಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ದುಸ್ಥಿತಿ ಇದು.

ಇಲ್ಲಿ 1ರಿಂದ 10ನೇ ತರಗತಿಯವರೆಗೆ 413 ವಿದ್ಯಾರ್ಥಿನಿಯರು ಮತ್ತು 387 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆರು ಕೊಠಡಿಗಳಲ್ಲಿಯೇ ಇವರೆಲ್ಲರೂ ‘ಅಡ್ಜಸ್ಟ್‌’ ಮಾಡಿಕೊಳ್ಳಬೇಕಾದ ಸ್ಥಿತಿ ಇದೆ. ಇಲ್ಲಿರುವ ಮಕ್ಕಳ ಸಂಖ್ಯೆಗೆ ತಕ್ಕಂತೆ, ಶಿಕ್ಷಣ ಇಲಾಖೆ ನಿಯಮದ ಪ್ರಕಾರ ಕನಿಷ್ಠ 29 ಕೊಠಡಿಗಳಾದರೂ ಬೇಕು. ಇರುವ ಆರು ಕೊಠಡಿಗಳಲ್ಲಿ ಮೂರು ಈಗಲೋ–ಆಗಲೋ ಬೀಳುವ ಹಂತದಲ್ಲಿವೆ! ಇರುವ ಕೊಠಡಿಗಳಲ್ಲಿಯೇ ಮಕ್ಕಳನ್ನು ನೆಲದ ಮೇಲೆಯೇ ಕೂರಿಸಿ ಪಾಠ ಹೇಳಿಕೊಡಲಾಗುತ್ತಿದೆ.

ADVERTISEMENT

ಅನಾಹುತವಾಗಿಲ್ಲ:ಹಲವು ತಿಂಗಳ ಹಿಂದೆಯಷ್ಟೇ ಮೂರು ಕೊಠಡಿಗಳು ರಾತ್ರಿ ವೇಳೆ ಕುಸಿದು ಬಿದ್ದಿದ್ದವು. ರಾತ್ರಿ ವೇಳೆ ಕೊಠಡಿಗಳು ಬಿದ್ದಿರುವುದರಿಂದ ಅನಾಹುತವಾಗಿರಲಿಲ್ಲ. ಹೀಗಾಗಿ, ಆತಂಕದಲ್ಲಿಯೇ ಶಿಕ್ಷಕರು ಹಾಗೂ ಮಕ್ಕಳು ಇದ್ದಾರೆ. ಅಡುಗೆ ಕೋಣೆ ಮತ್ತು ಅದರ ಪಕ್ಕದಲ್ಲಿರುವ ಕೊಠಡಿಗಳನ್ನು ಕೂಡಲೇ ನೆಲಸಮಗೊಳಿಸಿ, ಮುಂದಾಗಬಹುದಾದ ಅನಾಹುತ ತಪ್ಪಿಸಬೇಕು ಎಂಬುದು ಮಕ್ಕಳ ಒತ್ತಾಯವಾಗಿದೆ.

ಗ್ರಾಮದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್‌ ಭವನ ಮತ್ತು ಕನಕದಾಸ ಭವನದಲ್ಲಿ ಮಕ್ಕಳಿಗೆ ಪಾಠ ಮಾಡುವಂತಹ ದುಃಸ್ಥಿತಿ ಇಲ್ಲಿದೆ. ಅಂಬೇಡ್ಕರ್‌ ಭವನದಲ್ಲಿ 6ನೇ ತರಗತಿಯ 116 ಮಕ್ಕಳು ಮತ್ತು ಕನಕದಾಸ ಭವನದಲ್ಲಿ 1ರಿಂದ 3ನೇ ತರಗತಿಯ 150 ಮತ್ತು 6ನೇ ತರಗತಿಯ 156 ಮಕ್ಕಳು ಓದುತ್ತಿದ್ದಾರೆ. ಮೂಲಸೌಲಭ್ಯ ವಂಚಿತ ಈ ಬಡ ಮಕ್ಕಳ ಕೂಗು ಕೇಳುವವರಿಲ್ಲದಂತಾಗಿದೆ ಎನ್ನುವುದು ಸಾರ್ವಜನಿಕರ ಆಕ್ರೋಶವಾಗಿದೆ.

ಇನ್ನಾದರೂ ಈ ಭಾಗದ ಜನಪ್ರತಿನಿಧಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ, ಮೂಲಸೌಲಭ್ಯ ವಂಚಿತ ಈ ಶಾಲೆಗಳ ಪರಿಸ್ಥಿತಿ ಸುಧಾರಿಸಲು ಕ್ರಮ ಕೈಗೊಳ್ಳಬೇಕು. ಸಮರ್ಪಕ ಕೊಠಡಿಗಳನ್ನು ಮಂಜೂರು ಮಾಡಿಸುವ ಮೂಲಕ ಬಡ ಮಕ್ಕಳ ಕಲಿಕೆಗೆ ಅನುಕೂಲ ಕಲ್ಪಿಸಿಕೊಡಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.

ಆತಂಕದಲ್ಲೇ ಅಕ್ಷರಾಭ್ಯಾಸ:‘ಜೋಡಕುರಳಿ ಶಾಲೆಯ ಮಕ್ಕಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಾಯಿ ಇಲ್ಲದ ತಬ್ಬಲಿಗಳಂತೆ ನೋಡುತ್ತಿದ್ದಾರೆ. ನಮ್ಮ ಶಾಲೆಯತ್ತ ಯಾರೂ ಬಂದಿಲ್ಲ. ಇರುವ ಕೊಠಡಿಗಳಲ್ಲಿಯೂ ಕೆಲವು ಬೀಳುವ ಹಂತದಲ್ಲಿವೆ. ಮಳೆ ಬಂದರೆ ಕಲ್ಲು ಮತ್ತು ಮಣ್ಣು ಉದುರುತ್ತಿವೆ. ಇದರಿಂದ ನಮಗೆ ಭಯವಾಗುತ್ತಿದೆ. ಅಧಿಕಾರಿಗಳು ಮತ್ತು ಈ ಭಾಗದ ಜನಪ್ರತಿನಿಧಿಗಳು ನಮ್ಮ ನೋವನ್ನು ಅರ್ಥ ಮಾಡಿಕೊಂಡು ಸಮರ್ಪಕ ಕೊಠಡಿ ಕೊಡಬೇಕು. ನಮಗೆ ನೆಮ್ಮದಿಯಿಂದ ಕಲಿಯಲು ಅನುಕೂಲ ಮಾಡಬೇಕು’ ಎಂದು ವಿದ್ಯಾರ್ಥಿ ಸಂಗಪ್ಪ ಸಂಕ್ರಟ್ಟಿ ಮೊದಲಾದವರು ಒತ್ತಾಯಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.