ಬೆಳಗಾವಿಯ ವಿಟಿಯುವಿನಲ್ಲಿ ಶುಕ್ರವಾರ ನಡೆದ 25ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾ.ವಿ.ನಾರಾಯಣನ್, ಪ್ರಶಾಂತ್ ಪ್ರಕಾಶ್ ಮತ್ತು ಸಿ.ಎಸ್.ಸುಂದರ್ ರಾಜು ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಪ್ರದಾನ ಮಾಡಲಾಯಿತು. ರಾಜ್ಯಪಾಲ ಥಾವರಚಂದ ಗೆಹ್ಲೋತ್ ಅವರು, ಪ್ರೊ.ಎಸ್.ವಿದ್ಯಾಶಂಕರ ಉಪಸ್ಥಿತರಿದ್ದರು.
ಬೆಳಗಾವಿ: ‘ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕವೇ ವಿಕಸಿತ ಭಾರತದ ಕನಸು ನನಸಾಗಲಿದೆ’ ಎಂದು ಕೇಂದ್ರ ಸರ್ಕಾರದ ಪ್ರಧಾನ ವೈದ್ಯಕೀಯ ಸಲಹೆಗಾರ ಪ್ರೊ.ಅಜಯ್‌ಕುಮಾರ್ ಸೂದ್ ಅಭಿಪ್ರಾಯಪಟ್ಟರು.
ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 25ನೇ ವಾರ್ಷಿಕ ಘಟಿಕೋತ್ಸವ(ಭಾಗ–1)ದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.
‘ಇಂದು ಜಗತ್ತು ಕ್ಷಿಪ್ರವಾಗಿ ಬದಲಾಗುತ್ತಿದೆ. ಇದಕ್ಕೆ ತಂತ್ರಜ್ಞಾನವೂ ಉತ್ತಮ ಸಾರಥಿಯಾಗಿದೆ. ನಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕು ರೂಪಿಸುವ ಜತೆಗೆ, ಪ್ರಬಲ ರಾಷ್ಟ್ರ ನಿರ್ಮಿಸುವಲ್ಲಿ ತಂತ್ರಜ್ಞಾನ ಮಹತ್ತರ ಪಾತ್ರ ವಹಿಸುತ್ತಿದೆ. ಕೃಷಿ, ಆರೋಗ್ಯ ರಕ್ಷಣೆ ಮತ್ತಿತರ ರಂಗಗಳಲ್ಲಿ ಉತ್ಪಾದಕತೆ ಹೆಚ್ಚಿಸುವ ಜತೆಗೆ, ಆರ್ಥಿಕ ಬೆಳವಣಿಗೆಗೂ ಕಾರಣವಾಗಿದೆ’ ಎಂದು ಹೇಳಿದರು.
‘ಇಂದಿನ ವಿಜ್ಞಾನವೇ ನಾಳೆಯ ತಂತ್ರಜ್ಞಾನ. ಯುವ ಪದವೀಧರರು ತಮ್ಮ ಜ್ಞಾನವನ್ನು ಪರೀಕ್ಷೆಗಳಿಗೆ ಮಾತ್ರವಲ್ಲದೆ, ಸಮಾಜದ ಅಭಿವೃದ್ಧಿಗೂ ಬಳಸಬೇಕು. ತಾಂತ್ರಿಕ ರಂಗದಲ್ಲಿ ನೀವು ನೈಪುಣ್ಯತೆ ಸಾಧಿಸಿದರೆ ಸಾಲದು. ಬದಲಿಗೆ ರಾಷ್ಟ್ರಪ್ರಜ್ಞೆ ಹೊಂದಿದ ನಾಗರಿಕನಾಗಬೇಕು. ಶಿಕ್ಷಣದಿಂದ ಈವರೆಗೆ ಪಡೆದ ಜ್ಞಾನ ಮತ್ತು ಇಚ್ಛಾಶಕ್ತಿಯಿಂದ ಸಮೃದ್ಧ ಭಾರತ ಕಟ್ಟಬಹುದು’ ಎಂದು ಅಭಿಪ್ರಾಯಪಟ್ಟರು.
‘ಇತ್ತೀಚೆಗೆ ನಡೆದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ವೇಳೆ, ಭಾರತದ ತಂತ್ರಜ್ಞಾನ ಕ್ಷಮತೆ ಮತ್ತು ರಕ್ಷಣಾ ಸಾಮರ್ಥ್ಯ ಸಾಬೀತಾಗಿದೆ. ದೇಶಿಯವಾಗಿಯೇ ಅಭಿವೃದ್ಧಿಪಡಿಸಿದ ಅಕಾಶ್ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಎಐ ಆಧಾರಿತ ನಿರ್ಣಯ ವ್ಯವಸ್ಥೆಗಳು ಭಾರತವನ್ನು ಆತ್ಮನಿರ್ಭರ ರಾಷ್ಟ್ರವಾಗಿ ರೂಪಿಸುತ್ತಿವೆ. ಈ ಯಶಸ್ಸಿನ ಹಿಂದೆ ಆತ್ಮನಿರ್ಭರ್ ಭಾರತದ ನಿರ್ಮಾತೃಗಳಾದ ನಮ್ಮ ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ನವೋದ್ಯಮಗಳ ಕೊಡುಗೆ ಇದೆ’ ಎಂದರು.
ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ಸ್ವಾಗತಿಸಿದರು. ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ, ಕಾರ್ಯಕಾರಿ ಪರಿಷತ್ ಹಾಗೂ ವಿದ್ಯಾ ವಿಧಾನಮಂಡಲ ಸದಸ್ಯರು ವೇದಿಕೆ ಮೇಲಿದ್ದರು.
ಬೆಳಗಾವಿಯ ವಿಟಿಯುವಿನಲ್ಲಿ ಶುಕ್ರವಾರ ನಡೆದ 25ನೇ ವಾರ್ಷಿಕ ಘಟಿಕೋತ್ಸವದಲ್ಲಿ ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳು ಸಂಭ್ರಮಿಸಿದ್ದು ಹೀಗೆ
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಯುವ ಪದವೀಧರರು ಹೊಸ ಉದ್ಯಮಗಳನ್ನು ಸ್ಥಾಪಿಸಿ, ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ತಮ್ಮ ಜವಾಬ್ದಾರಿ ನಿಭಾಯಿಸಿ ಭವ್ಯ ಭಾರತ ಕಟ್ಟಲು ಕೈಜೋಡಿಸಬೇಕುಪ್ರೊ.ಅಜಯ್‌ಕುಮಾರ್ ಸೂದ್, ಕೇಂದ್ರ ಸರ್ಕಾರದ ಪ್ರಧಾನ ವೈದ್ಯಕೀಯ ಸಲಹೆಗಾರ
‘ಹೊಸ ಆಲೋಚನೆಗಳು ಅಗತ್ಯ’
ರಾಜ್ಯಪಾಲ ಥಾವರಚಂದ ಗೆಹ್ಲೋತ್, ‘ಸ್ಟಾರ್ಟ್‌ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ತಮ್ಮದೇಯಾದ ಛಾಪು ಮೂಡಿಸಿವೆ. ಇಂದು ಆರೋಗ್ಯ, ಸೈಬರ್ ಮತ್ತು ಇತರೆ ರಂಗಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಯುವಕರು ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು’ ಎಂದರು. ದೇಶವನ್ನು ಯಶಸ್ವಿಪಥದಲ್ಲಿ ಮುನ್ನಡೆಸಲು ಯುವ ಪದವೀಧರರಿಂದ ಹೊಸ ಆಲೋಚನೆಗಳ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.
****
60,052 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಈ ಸಲದ ಘಟಿಕೋತ್ಸವದಲ್ಲಿ 60,052 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಈ ಪೈಕಿ 58,561 ವಿದ್ಯಾರ್ಥಿಗಳಿಗೆ(ಸ್ವಾಯತ್ತ ಮಹಾವಿದ್ಯಾಲಯದ 20,707 ವಿದ್ಯಾರ್ಥಿಗಳು) ಬಿ.ಇ, 117 ವಿದ್ಯಾರ್ಥಿಗಳಿಗೆ ಬಿ.ಟೆಕ್, 10 ವಿದ್ಯಾರ್ಥಿಗಳಿಗೆ ಬಿ.ಪ್ಲ್ಯಾನ್, 1,040 ವಿದ್ಯಾರ್ಥಿಗಳಿಗೆ (ಸ್ವಾಯತ್ತ ಮಹಾವಿದ್ಯಾಲಯದ 234 ವಿದ್ಯಾರ್ಥಿಗಳು) ಬಿ.ಆರ್ಕ್, 24 ವಿದ್ಯಾರ್ಥಿಗಳಿಗೆ ಬಿ.ಎಸ್ಸಿ (ಆನರ್ಸ್) ಪದವಿ ನೀಡಲಾಯಿತು.
262 ಪಿಎಚ್.ಡಿ ಮತ್ತು ಎರಡು ಇಂಟಿಗ್ರೇಟೇಡ್ ಡ್ಯುಯಲ್ ಡಿಗ್ರಿ ಸಹ ಪ್ರದಾನ ಮಾಡಲಾಯಿತು.
***
ಮೂವರಿಗೆ ಗೌರವ ಡಾಕ್ಟರೇಟ್
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಡಾ.ವಿ.ನಾರಾಯಣನ್, ಎಕ್ಸೆಲ್ ಇಂಡಿಯಾ ಸಂಸ್ಥಾಪಕ ಪ್ರಶಾಂತ್ ಪ್ರಕಾಶ್ ಮತ್ತು ಬೆಂಗಳೂರಿನ ಎಟ್ರಿಯ ವಿಶ್ವವಿದ್ಯಾಲಯದ ಕುಲಾಧಿಪತಿ ಸಿ.ಎಸ್.ಸುಂದರ್ ರಾಜು ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು, ‘ಡಾಕ್ಟರ್ ಆಫ್ ಸೈನ್ಸ್’ ಪ್ರದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.