ADVERTISEMENT

ಕೊರೊನಾ: ಗಣೇಶೋತ್ಸವದ ಮೇಲೂ ಕರಿನೆರಳು

ಶ್ರೀಕಾಂತ ಕಲ್ಲಮ್ಮನವರ
Published 1 ಜುಲೈ 2020, 13:37 IST
Last Updated 1 ಜುಲೈ 2020, 13:37 IST
ಗಣೇಶ ಮೂರ್ತಿ ತಯಾರಿಸುವಲ್ಲಿ ನಿರತರಾಗಿರುವ ಮೂರ್ತಿಕಾರರು. –ಚಿತ್ರ: ಏಕನಾಥ ಅಗಸಿಮನಿ
ಗಣೇಶ ಮೂರ್ತಿ ತಯಾರಿಸುವಲ್ಲಿ ನಿರತರಾಗಿರುವ ಮೂರ್ತಿಕಾರರು. –ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ಗಣೇಶೋತ್ಸವದ ಮೇಲೂ ಕರಿನೆರಳು ಬೀರಿದೆ. ಅದ್ಧೂರಿತನ ಹಾಗೂ ವೈವಿಧ್ಯಮಯದಿಂದ ಆಕರ್ಷಿಸುತ್ತಿದ್ದ ಬೆಳಗಾವಿ ಗಣೇಶೋತ್ಸವ ಈ ಸಲ ಸರಳವಾಗಿರಲಿದೆ. ಸಂಪ್ರದಾಯಕ್ಕೆ ಅನುಗುಣವಾಗಿ ಗಣೇಶನ ಮೂರ್ತಿಗೆ ಸರಳವಾಗಿ ಪೂಜೆ ಸಲ್ಲಿಸಲು ಸಾರ್ವಜನಿಕ ಉತ್ಸವ ಮಂಡಳಗಳು ತೀರ್ಮಾನಿಸಿದ್ದು, ಅನುಮತಿಗಾಗಿ ಜಿಲ್ಲಾಡಳಿತಕ್ಕೆ ಮೊರೆ ಹೋಗಿವೆ.

ಹಿಂದೂ ಧರ್ಮೀಯರನ್ನು ಒಗ್ಗೂಡಿಸುವ ಉದ್ದೇಶದಿಂದ ಬಾಲಗಂಗಾಧರ ತಿಲಕ ಅವರು ನೆರೆಯ ಮಹಾರಾಷ್ಟ್ರದ ಪುಣೆಯಲ್ಲಿ ಗಣೇಶೋತ್ಸವ ಆರಂಭಿಸಿದರು. ನಂತರ ಅವರೇ ಬೆಳಗಾವಿಯ ರವಿವಾರಪೇಟೆಯಲ್ಲೂ ಗಣೇಶ ಮೂರ್ತಿ ಇಟ್ಟು ಉತ್ಸವಕ್ಕೆ ಚಾಲನೆ ನೀಡಿದ್ದರು. ಇವೆಲ್ಲ ಕಾರಣಗಳಿಂದಾಗಿ, ಬೆಳಗಾವಿಯಲ್ಲಿ ಪ್ರತಿವರ್ಷ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು.

ಸಂದೇಶ ನೀಡುವಂತಹ ಪರಿಕಲ್ಪನೆ ಆಧಾರಿತ ದೊಡ್ಡ ದೊಡ್ಡ ಗಣೇಶ ಮೂರ್ತಿಗಳು, ವೈವಿಧ್ಯಮಯ ಪಾತ್ರಗಳಲ್ಲಿ ಗಣೇಶನ ಮೂರ್ತಿಗಳು, ಅದಕ್ಕೆ ಪೂರಕವಾದ ಇತರ ಪಾತ್ರಗಳ ಮೂರ್ತಿಗಳು, ಬೃಹತ್‌ ಪೆಂಡಾಲ್‌, ಆಕರ್ಷಕ ಮಂಟಪ, ವಿದ್ಯುದ್ದೀಪಗಳ ಜಗಮಗ, ಹಾಡು– ಸಂಗೀತದ ಅಬ್ಬರವು ಗಣೇಶೋತ್ಸವಕ್ಕೆ ಮೆರುಗು ತಂದುಕೊಟ್ಟಿದ್ದವು. ಆದರೆ, ಈ ಸಲ ಕೊರೊನಾದಿಂದಾಗಿ ಇವೆಲ್ಲ ಅದ್ಧೂರಿಗಳನ್ನು ಕೈಬಿಡಲು ಉತ್ಸವ ಮಂಡಳಗಳು ನಿರ್ಧರಿಸಿವೆ.

ADVERTISEMENT

ಅಲ್ಲೂ ಸರಳ ಆಚರಣೆ:

ಗಣೇಶೋತ್ಸವ ಪ್ರಾರಂಭವಾದ ಮಹಾರಾಷ್ಟ್ರದಲ್ಲಿಯೂ ಸರಳ ಆಚರಣೆಗೆ ಸಾರ್ವಜನಿಕ ಮಂಡಳಗಳು ತೀರ್ಮಾನಿಸಿವೆ. ಅದೇ ಮಾದರಿಯಲ್ಲಿ ಬೆಳಗಾವಿಯಲ್ಲೂ ಆಚರಿಸಲು ಸ್ಥಳೀಯ ಮಂಡಳಗಳು ತೀರ್ಮಾನಿಸಿವೆ.

ಚಿಕ್ಕ ಅಳತೆಯ ಗಣೇಶ ಮೂರ್ತಿಗಳನ್ನು ಕೂರಿಸುವುದು, ಸಣ್ಣದಾಗಿ ಪೆಂಡಾಲ್‌ ಹಾಕುವುದು, ಹೆಚ್ಚು ಅಲಂಕಾರ ಮಾಡದಿರುವುದು, ಬೀದಿ ಉದ್ದಕ್ಕೂ ವಿದ್ಯುದ್ದೀಪಗಳ ಅಲಂಕಾರ ಮಾಡದಿರುವುದು, ಮೈಕ್‌, ಡಾಲ್ಬಿ, ವಾದ್ಯಗೋಷ್ಠಿ ಬಳಸದಿರುವ ತೀರ್ಮಾನ ಕೈಗೊಂಡಿವೆ.

ಮುಂಜಾಗ್ರತೆ:

ಪ್ರತಿ ಮಂಟಪದಲ್ಲಿ ಸ್ಯಾನಿಟೈಸರ್‌ ಬಳಸುವುದು, ಮೂರ್ತಿ ವೀಕ್ಷಿಸಲು ಬರುವವರಿಗೆ ಮಾಸ್ಕ್‌ ಕಡ್ಡಾಯಗೊಳಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಬ್ಯಾರಿಕೇಡ್‌ ವ್ಯವಸ್ಥೆ ಮಾಡಲು ಮಂಡಳಗಳು ಯೋಚಿಸಿವೆ. ಇವುಗಳ ಜೊತೆ ಜಿಲ್ಲಾಡಳಿತ ನೀಡುವ ಸೂಚನೆಗಳನ್ನೂ ಪಾಲಿಸಲು ಮಂಡಳಗಳ ಸದಸ್ಯರು ತಯಾರಾಗಿದ್ದಾರೆ.

ಕೊರೊನಾದಿಂದಾಗಿ ಕಷ್ಟಕಾಲ ಬಂದಿರುವುದು ನಿಜ. ಹಾಗಂತ ಸಂಪ್ರದಾಯ ಬಿಡಲಾಗದು. ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಆಚರಿಸಲು ಸಿದ್ಧರಿದ್ದೇವೆ ಎನ್ನುತ್ತಾರೆ ಅವರು.

ಮೂರ್ತಿಕಾರರ ಸಂಕಟ:

ಪ್ರತಿವರ್ಷ ಮೂರ್ತಿಕಾರರು ಜನವರಿ–ಫೆಬ್ರುವರಿಯಿಂದಲೇ ಮೂರ್ತಿಗಳನ್ನು ಮಾಡಲು ಆರಂಭಿಸುತ್ತಾರೆ. ಅದೇ ರೀತಿ ಈ ವರ್ಷವೂ ಆರಂಭಿಸಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಸಾರಿಗೆ ಬಂದ್‌ ಆಗಿದ್ದರಿಂದ ಮೂರ್ತಿ ತಯಾರಿಸಲು ಬೇಕಾದ ಜಡಿ ಮಣ್ಣು, ಬಣ್ಣ ಹಾಗೂ ಇತರ ಅಲಂಕಾರಿಕ ವಸ್ತುಗಳು ಸಿಕ್ಕಿರಲಿಲ್ಲ. ಹೀಗಾಗಿ ಆ ಅವಧಿಯಲ್ಲಿ ಮೂರ್ತಿಗಳನ್ನು ತಯಾರಿಸಿರಲಿಲ್ಲ. ಲಾಕ್‌ಡೌನ್‌ ತೆರವುಗೊಂಡ ನಂತರ ಪುನಃ ಮೂರ್ತಿಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ. ಗೃಹಬಳಕೆಗಾಗಿ ಉಪಯೋಗಿಸುವ ಅರ್ಧದಷ್ಟು ಮೂರ್ತಿಗಳನ್ನು ತಯಾರಿಸಿ ಇಟ್ಟಿದ್ದಾರೆ. ಸಾರ್ವಜನಿಕ ಉತ್ಸವ ಮಂಡಳಗಳಲ್ಲಿ ಇಡುವ ಮೂರ್ತಿಗಳನ್ನು ಈಗಷ್ಟೇ ತಯಾರಿಸಲು ಆರಂಭಿಸಿದ್ದಾರೆ.

‘ಸಾರ್ವಜನಿಕ ಗಣೇಶ ಉತ್ಸವ ಕುರಿತು ಜಿಲ್ಲಾಡಳಿತ ಯಾವ ರೀತಿಯ ಮಾರ್ಗಸೂಚಿ ನೀಡುತ್ತದೆ ಎನ್ನುವುದನ್ನು ನೋಡಿಕೊಂಡು ಮೂರ್ತಿ ತಯಾರಿಸಲು ಮಂಡಳಗಳು ನಮಗೆ ತಿಳಿಸಲಿವೆ. ನಂತರ ನಾವು ಮೂರ್ತಿ ತಯಾರಿಸಲಿದ್ದೇವೆ’ ಎಂದು ಮೂರ್ತಿಕಾರ ವಿಶಾಲ ಗೋಧೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.