ADVERTISEMENT

‘ದಾನವನ್ನು ದಾಸೋಹವನ್ನಾಗಿ ಮಾಡಿದ ಲಿಂಗರಾಜರು’

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 15:53 IST
Last Updated 10 ಜನವರಿ 2021, 15:53 IST
ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಶಿರಸಂಗಿ ಲಿಂಗರಾಜರ 160ನೇ ಜಯಂತಿಯನ್ನು ಭಾನುವಾರ ಆಚರಿಸಲಾಯಿತು
ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಶಿರಸಂಗಿ ಲಿಂಗರಾಜರ 160ನೇ ಜಯಂತಿಯನ್ನು ಭಾನುವಾರ ಆಚರಿಸಲಾಯಿತು   

ಬೆಳಗಾವಿ: ‘ದಾನವನ್ನು ದಾಸೋಹವನ್ನಾಗಿ ಮಾಡಿದ ಲಿಂಗರಾಜರು ನಿಜವಾದ ತ್ಯಾಗವೀರರು. ಅವರು ಬದುಕು ಅಮರ ಹಾಗೂ ಅನುಕರಣೀಯವಾದುದು’ ಎಂದು ಜಿ.ಎ. ಸಂಯುಕ್ತ ಪಿಯು ಕಾಲೇಜಿನ ಉಪನ್ಯಾಸಕ ಬಿ.ಎಚ್. ಮಾರದ ಹೇಳಿದರು.

ನಗರದ ಲಿಂಗರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ತ್ಯಾಗವೀರ ಶಿರಸಂಗಿ ಲಿಂಗರಾಜರ 160ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾಡಿನ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಿತ್ರಣ ಬದಲಾಯಿಸಿದ ಪುಣ್ಯಪುರುಷರ ಬಗ್ಗೆ ನಾವು ತಿಳಿದುಕೊಳ್ಳುವ ಅಗತ್ಯವಾಗಿದೆ. ಅವರಲ್ಲಿ ಲಿಂಗರಾಜರು ಅಗ್ರಗಣ್ಯರು. ತಮ್ಮ ಸಮಸ್ತ ಸಂಸ್ಥಾನದ ಚಿರಾಸ್ತಿಯನ್ನು ಶಿಕ್ಷಣಕ್ಕಾಗಿ ಮುಡುಪಾಟಗಿಟ್ಟು ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಪ್ರಾತಃಸ್ಮರಣೀಯರು. ಕರ್ನಾಟಕದ ಶಿಕ್ಷಣದ ಚರಿತ್ರೆಯಲ್ಲಿ ಅವರ ಕೊಡುಗೆ ಅದ್ವಿತೀಯವಾದುದು’ ಎಂದು ಸ್ಮರಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ತಟವಟಿ, ‘ಲಿಂಗರಾಜರ ತ್ಯಾಗ ಬಹುದೊಡ್ಡದು. ಸಮಾಜದ ಮಕ್ಕಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ಮಾಡಿದ ದಾನ ಚಿರಂತನವಾಗಿದೆ. ಅವರಿಂದ ಪ್ರಭಾವಿತರಾದ ಏಳು ಮಂದಿ ಶಿಕ್ಷಕರು ಕೆಎಲ್‌ಇ ಸಂಸ್ಥೆ ಹುಟ್ಟುಹಾಕಿದರು. ಸಂಸ್ಥೆಯ ಮೊದಲ ಪದವಿ ಕಾಲೇಜಿಗೆ ಲಿಂಗರಾಜ ಹೆಸರನ್ನು ನಾಮಕರಣ ಮಾಡಿದರು’ ಎಂದು ತಿಳಿಸಿದರು.

‘ಲಿಂಗರಾಜರು ಅಂದು ಸ್ಥಾಪಿಸಿದ ಟ್ರಸ್ಟ್‌ನಿಂದ ಡಾ.ನಂದೀಮಠರು, ಡಿ.ಸಿ. ಪಾವಟೆ, ಬಿ.ಡಿ. ಜತ್ತಿ, ಎಚ್.ವಿ. ಕೌಜಲಗಿ, ಆರ್.ಸಿ. ಹಿರೇಮಠ ಮೊದಲಾದವರು ಲಿಂಗರಾಜ ವಿದ್ಯಾರ್ಥಿವೇತನ ಪಡೆದು ಸಮಾಜದಲ್ಲಿ ಗೌರವಾನ್ವಿತ ಕಾರ್ಯಗಳನ್ನು ಮಾಡಿದರು. ಕೆಎಲ್‌ಇ ಸಂಸ್ಥೆಯು ಅವರ ಜಯಂತಿಯನ್ನು ಪ್ರತಿ ವರ್ಷ ಅಂಗ ಸಂಸ್ಥೆಗಳಲ್ಲಿ ಆಚರಿಸುತ್ತಾ ಗೌರವ ಸಲ್ಲಿಸುತ್ತಿದೆ’ ಎಂದರು.

ಕೆಎಲ್‌ಇ ಸಂಸ್ಥೆಯ ಆಜೀವ ಸದಸ್ಯರಾದ ಮಹಾದೇವ ಬಳಿಗಾರ, ಡಾ.ಪ್ರಕಾಶ ಕಡಕೋಳ, ಡಾ.ಶಿವಯೋಗಿ ಹೂಗಾರ, ಆರ್.ಎಲ್. ವಿಜ್ಞಾನ ಕಾಲೇಜಿನಪ್ರಾಚಾರ್ಯ ಡಾ.ಜ್ಯೋತಿ ಕವಳೇಕರ, ಪ್ರೊ.ಎಂ.ಆರ್. ಬನಹಟ್ಟಿ, ಪ್ರೊ.ಗಿರಿಜಾ ಹಿರೇಮಠ ಇದ್ದರು.

ಲಿಂಗರಾಜ ಜಯಂತಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ.ಆರ್.ಎಂ. ಪಾಟೀಲ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಎಚ್.ಎಂ. ಚನ್ನಪ್ಪಗೋಳ ವಂದಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.