ADVERTISEMENT

ಶಿವರಾತ್ರಿಗೆ ಸಿಂಗಾರ; ಭಕ್ತಿಯ ಝೇಂಕಾರ- ಧ್ಯಾನ, ಜಾಗರಣೆಗೆ ಭಕ್ತರ ಸಿದ್ಧತೆ

ಎಂ.ಮಹೇಶ
Published 10 ಮಾರ್ಚ್ 2021, 19:30 IST
Last Updated 10 ಮಾರ್ಚ್ 2021, 19:30 IST
ಬೆಳಗಾವಿಯ ಕಪಿಲೇಶ್ವರ ಮಂದಿರಕ್ಕೆ ಶಿವರಾತ್ರಿ ಹಿನ್ನೆಲೆಯಲ್ಲಿ ಅಲಂಕಾರ ಮಾಡಲಾಗಿದೆಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ಕಪಿಲೇಶ್ವರ ಮಂದಿರಕ್ಕೆ ಶಿವರಾತ್ರಿ ಹಿನ್ನೆಲೆಯಲ್ಲಿ ಅಲಂಕಾರ ಮಾಡಲಾಗಿದೆಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇರುವ ಶಿವ ಮಂದಿರಗಳಲ್ಲಿ ಗುರುವಾರ ಮಹಾಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಕರ್ಷಕವಾಗಿ ಸಿಂಗಾರಗೊಂಡಿರುವ ದೇವಾಲಯಗಳು, ಭಕ್ತರನ್ನು ಸೆಳೆಯುತ್ತಿವೆ.

ಶಿವನ ಧ್ಯಾನ ಹಾಗೂ ಜಾಗರಣೆಗೆ ಭಕ್ತರು ತಯಾರಿ ಮಾಡಿಕೊಂಡಿದ್ದಾರೆ.

ನಗರದಲ್ಲಿ ಶಿವನ ದೇವಸ್ಥಾನಗಳನ್ನು ಸ್ವಚ್ಛಗೊಳಿಸಿ, ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಭಕ್ತರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ, ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸುವವರ ಹೆಸರುಗಳನ್ನು ಮಂಗಳವಾರದಿಂದಲೇ ನೋಂದಣಿ ಮಾಡಿಕೊಳ್ಳುತ್ತಿದ್ದುದು ಕಂಡುಬಂತು. ಲೋಕ ಕಲ್ಯಾಣಕ್ಕಾಗಿ ಸದಾ ಕಾಲ ಧ್ಯಾನಮಗ್ನನಾಗಿರುವ ಶಿವ ಮಹಾಶಿವರಾತ್ರಿಯಂದು ವಿಶ್ರಾಂತ ಸ್ಥಿತಿಯಲ್ಲಿರುತ್ತಾನೆ. ಹೀಗಾಗಿ ಈ ಅವಧಿಯಲ್ಲಿ ಶಿವನನ್ನು ಪ್ರಾರ್ಥಿಸಿದರೆ ಇಷ್ಟಾರ್ಥಗಳನ್ನು ಕರುಣಿಸುತ್ತಾನೆ ಎಂಬ ಪ್ರತೀತಿ ಪುರಾಣ ಕಾಲದಿಂದಲೂ ಇದೆ. ಹೀಗಾಗಿ, ಶಿವರಾತ್ರಿಗೆ ವಿಶೇಷ ಮಹತ್ವವಿದೆ.

ADVERTISEMENT

ದಕ್ಷಿಣ ಕಾಶಿ ಎಂದೇ ಖ್ಯಾತಿ ಗಳಿಸಿರುವ ಕಪಿಲೇಶ್ವರ ದೇವಸ್ಥಾನ ವಿಶೇಷವಾಗಿ ಅಲಂಕೃತಗೊಂಡಿದೆ. ಕಪಿಲೇಶ್ವರ ಮಂದಿರ ಸಮಿತಿಯಿಂದ ದೇಗುಲದ ಒಳಭಾಗವನ್ನು ಸಂಪೂರ್ಣವಾಗಿ ಪುಷ್ಪಗಳ ಹಾರದಿಂದ ಅಲಂಕರಿಸಲಾಗಿದೆ. ಗುರುವಾರ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಮೊದಲಾದ ಪೂಜೆಗಳು ನೆರವೇರಲಿವೆ. ಆವರಣದಲ್ಲಿ ಅಗ್ನಿಹೋತ್ರ ಕಾರ್ಯಕ್ರಮವನ್ನೂ ಈ ಬಾರಿ ಹಮ್ಮಿಕೊಳ್ಳಲಾಗಿದೆ. ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ಮುಂಜಾನೆವರೆಗೂ ಸಹಸ್ರನಾಮ ಜಪ ಹಾಗೂ ಅಭಿಷೇಕ ನೆರವೇರಲಿವೆ. ಸಾವಿರಾರು ಭಕ್ತರು ರಾತ್ರಿ 12ರಿಂದ ಭಜನೆ ಹಾಗೂ ಶಿವನಾಮ ಸ್ಮರಣೆ ಮಾಡುತ್ತಾ ಜಾಗರಣೆ ಮಾಡಲಿದ್ದಾರೆ. ಶುಕ್ರವಾರ ಅನ್ನಪ್ರಸಾದ ನೆರವೇರಲಿದೆ.

ಈ ಬಾರಿ, ಪರಶುರಾಮನ ಪ್ರತಿಮೆಯನ್ನು ಪ್ರದರ್ಶಿಸಲಾಗಿದ್ದು ಆಕರ್ಷಿಸುತ್ತಿದೆ. ದೇಗುಲದ ಇಡೀ ಆವರಣ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದೆ.

ನಗರದಮಿಲಿಟರಿ ಮಹಾದೇವ ಮಂದಿರ, ಶಾಹೂನಗರದ ಶಿವಾಲಯ, ಮಹಾಂತೇಶ ನಗರದ ಶಿವಾಲಯ, ರಾಮಲಿಂಗಕಿಂಡ್‌ ಗಲ್ಲಿಯ ರಾಮಲಿಂಗೇಶ್ವರ ದೇವಸ್ಥಾನ, ತಾಲ್ಲೂಕಿನ ಬಿ.ಕೆ. ಕಂಗ್ರಾಳಿಯ ಕಲ್ಮೇಶ್ವರ ಮಂದಿರ ಮೊದಲಾದ ಕಡೆಗಳಲ್ಲಿ ಪೂಜೆ, ಭಜನೆ ಹಾಗೂ ಜಾಗರಣೆ ಕಾರ್ಯಕ್ರಮಗಳು ನಡೆಯಲಿವೆ. ಕೋವಿಡ್–19 ಕಾರಣದಿಂದಾಗಿ, ಕೆಲವು ದೇವಸ್ಥಾನಗಳಲ್ಲಿ ಮಹಾಪ್ರಸಾದ ವಿತರಣೆ ವ್ಯವಸ್ಥೆ ಮಾಡಿಲ್ಲ. ಕೆಲವು ಮಠಗಳಲ್ಲಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಹೊರವಲಯದ ಕಣಬರ್ಗಿಯಲ್ಲಿ ಮಹಾಶಿವರಾತ್ರಿ ನಿಮಿತ್ತ ಸಿದ್ದೇಶ್ವರ ಜಾತ್ರಾ ಕಾರ್ಯಕ್ರಮಗಳು ಬುಧವಾರದಿಂದಲೇ ಆರಂಭಗೊಂಡಿವೆ. ಅಲಂಕೃತ ಬಂಡಿಯಲ್ಲಿ ಸಿದ್ದೇಶ್ವರ ಮೂರ್ತಿಯನ್ನು ಮೆರವಣಿಗೆ ನಡೆಸಲಾಯಿತು. 11ರಂದು ಅದು ದೇವಸ್ಥಾನ ತಲುಪಲಿದೆ. ರಾತ್ರಿ ಅಭಿಷೇಕ ನೆರವೇರಲಿದೆ. 12ರಂದು ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಮಹಾಪ್ರಸಾದ ವಿತರಿಸಲಾಗುವುದು ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ರಾಮದುರ್ಗದ ಮುಳ್ಳೂರು ಗುಡ್ಡದಲ್ಲಿ ಶಿವನ ಪ್ರತಿಮೆಯ ಎದುರು 22 ಅಡಿ ಎತ್ತರದ ನಂದಿ ವಿಗ್ರಹ ಅನಾವರಣಗೊಳ್ಳುತ್ತಿರುವುದು ಈ ಬಾರಿಯ ವಿಶೇಷವಾಗಿದೆ.

ಆಕರ್ಷಿಸುತ್ತಿರುವ ‘ಶಿವಚರಿತ್ರೆ’

ಬೆಳಗಾವಿಯ ಕಪಿಲೇಶ್ವರ ಮಂದಿರದ ಆವರಣದಲ್ಲಿ ರೂಪಿಸಿರುವ ಆಕರ್ಷಕ ಮ್ಯೂರಲ್ ಪೇಂಟಿಂಗ್‌ಗಳನ್ನು ಒಳಗೊಂಡಿರುವ ‘ಶಿವಚರಿತ್ರೆ’ ಸಭಾಂಗಣ ಆಕರ್ಷಿಸುತ್ತಿದೆ. ಶಿವನ ಜೀವನದ ಪ್ರಮುಖ ಘಟನೆಗಳನ್ನು ಕಟ್ಟಿಕೊಡುವ ಎಂಟು ಕಲಾಕೃತಿಗಳು ಇವೆ.

ಮಾತಾ ಸತಿ, ರಾವಣನ ಗರ್ವಹರಣ, ಸಮುದ್ರ ಮಂಥನ, ತ್ರಿಪುರಾಸುರ ವಧೆ ಆತ್ಮಲಿಂಗ ಕಥನ, ಗಂಗೆಯು ಭೂಮಿಗೆ ಬಂದಿದ್ದನ್ನು ಚಿತ್ರಿಸುವ ಗಂಗಾವತರಣದ ಸನ್ನಿವೇಶದ ಮೇಲೆ ಬೆಳಕು ಚೆಲ್ಲುವ ಆಕರ್ಷಕ ಕಲಾಕೃತಿಗಳಿವೆ.

‘ಕಪಿಲೇಶ್ವರ ಮಂದಿರ ಟ್ರಸ್ಟ್‌ನಿಂದ ಈ ತಾಣ ಅಭಿವೃದ್ಧಿಪಡಿಸಲಾಗಿದೆ. ಭಕ್ತರೇ ನೀಡಿದ ಪ್ರಾಯೋಜಕತ್ವದ ಹಣದಿಂದ ಒಟ್ಟು ₹ 1 ಕೋಟಿಯಲ್ಲಿ ನಿರ್ಮಾಣಗೊಂಡಿದೆ. ಬೆಳಗಾವಿಯೊಂದಿಗೆ ಮಹಾರಾಷ್ಟ್ರ, ಗೋವಾ ಮೊದಲಾದ ಕಡೆಗಳಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ. ಇದರಿಂದಾಗಿ ಇದು ಜಾಗೃತ ಕ್ಷೇತವಾಗಿದೆ’ ಎನ್ನುತ್ತಾರೆ ಟ್ರಸ್ಟ್‌ನ ಕಾರ್ಯದರ್ಶಿ ರಾಕೇಶ್‌ ಕಲಘಟಗಿ.

‘ಮಹಾರಾಷ್ಟ್ರದ ರತ್ನಗಿರಿಯ ಕಲಾವಿದ ಸಂದೀಪ್ ಸಾವಂತ್ ಅವರು ಮ್ಯೂರಲ್ ಪೇಂಟಿಂಗ್‌ಗಳನ್ನು ಒಂದು ವರ್ಷ ಸಮಯ ತೆಗೆದುಕೊಂಡು ಮಾಡಿಕೊಟ್ಟಿದ್ದಾರೆ. ಭಕ್ತರ ಕೊಡುಗೆಯಿಂದಾಗಿಯೇ ಇಲ್ಲಿ ಅಭಿವೃದ್ಧಿ ಆಗುತ್ತಿದೆ. ಶಿವನೇ ಎಲ್ಲ ಕೆಲಸ ಮಾಡಿಸಿಕೊಳ್ಳುತ್ತಿದ್ದಾನೆ. ಧ್ಯಾನ ಮಂದಿರ, ಗ್ರಂಥಾಲಯವನ್ನೂ ನಿರ್ಮಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಶಿವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಕ್ತರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಪಾಲ್ಗೊಳ್ಳಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.