ADVERTISEMENT

ಉಗರಗೋಳ: ದೂರದಿಂದಲೇ ಯಲ್ಲಮ್ಮನಿಗೆ ನಮಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 13:32 IST
Last Updated 17 ಜನವರಿ 2022, 13:32 IST
ಬನದ ಹುಣ್ಣಿಮೆ ಅಂಗವಾಗಿ ಸವದತ್ತಿ ಯಲ್ಲಮ್ಮನ ಭಕ್ತರು ಉಗರಗೋಳದಲ್ಲಿ ಸೋಮವಾರ ಧಾರ್ಮಿಕ ವಿಧಿವಿಧಾನ ಕೈಗೊಂಡರು
ಬನದ ಹುಣ್ಣಿಮೆ ಅಂಗವಾಗಿ ಸವದತ್ತಿ ಯಲ್ಲಮ್ಮನ ಭಕ್ತರು ಉಗರಗೋಳದಲ್ಲಿ ಸೋಮವಾರ ಧಾರ್ಮಿಕ ವಿಧಿವಿಧಾನ ಕೈಗೊಂಡರು   

ಉಗರಗೋಳ: ಕೋವಿಡ್ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಆದರೂ ಸೋಮವಾರ ‘ಬನದ ಹುಣ್ಣಿಮೆ’ ಅಂಗವಾಗಿ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ದೂರದಿಂದಲೇ ದೇವಿಗೆ ನಮನ ಸಲ್ಲಿಸಿದರು.

ಉಗರಗೋಳ, ಹಿರೇಕುಂಬಿ, ಚಿಕ್ಕುಂಬಿ, ಚುಳಕಿ ಗ್ರಾಮಗಳಲ್ಲಿ ಬನದ ಹುಣ್ಣಿಮೆ ಆಚರಿಸಿ ಭಕ್ತಿ ಸಮರ್ಪಿಸಿದರು.

ಭಾನುವಾರ ಸಂಜೆಯಿಂದಲೇ ಯಲ್ಲಮ್ಮನಗುಡ್ಡ ಸುತ್ತಮುತ್ತಲಿನ ಗ್ರಾಮಗಳ ಹೊರವಲಯಕ್ಕೆ ಬಂದು ತಂಗಿದ್ದ ಭಕ್ತರು ಸೋಮವಾರ ನಸುಕಿನ ಜಾವದಿಂದಲೇ ಸಾಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದರು.

ADVERTISEMENT

ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಹಾಗೂ ಜನರ ಸಂಚಾರ ನಿಷೇಧಿಸಲಾಗಿತ್ತು. ಚಕ್ಕಡಿ ಬಂಡಿ, ಟ್ಯಾಕ್ಟರ್, ಟಂಟಂ ಹಾಗೂ ಪಾದಯಾತ್ರೆ ಮೂಲಕ ಬಂದಿದ್ದ ಭಕ್ತಸಮೂಹವನ್ನು ಚೆಕ್‌ಪೋಸ್ಟ್‌ಗಳಲ್ಲೆ ತಡೆದರು.

‘ಉಧೋ ಊಧೋ ಯಲ್ಲಮ್ಮ ನಿನ್ಹಾಲ್ಕ ಉಧೋ’ ಎಂಬ ಜೈಕಾರ ಮುಗಿಲು ಮುಟ್ಟಿತು. ಭಕ್ತರು ಭಂಡಾರ ಹಾರಿಸುತ್ತಾ ರಸ್ತೆ ಬದಿಯಲ್ಲಿ ಹಾಗೂ ಜಮೀನುಗಳಲ್ಲಿ ಬಿಡಾರ ಹೂಡಿ ನೈವೇದ್ಯ ತಯಾರಿಸಿ ಪರಡಿ ತುಂಬುವುದು ಕಂಡುಬಂತು. ಉಗರಗೋಳದ ನವಾಬರ ಕೆರೆ ಹಾಗೂ ರೈತರ ಜಮಿನುಗಳಲ್ಲಿ ಜನರು ಸ್ನಾನ ಮಾಡಿದರು.

ಗುಡ್ಡಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಆದರೆ, ಗುಡ್ಡದ ಪಕ್ಕದ ಗ್ರಾಮಗಳಿಗೆ ಭಕ್ತರ ಪ್ರವಾಹ ನಿಂತಿಲ್ಲ. ಕೋವಿಡ್ ನಿರ್ಬಂಧದ ನಡುವೆಯೂ ಜನರು ಗುಂಪು ಗುಂಪಾಗಿ ಬಂದು ನಮಿಸಿ ವಾಪಸಾಗುತ್ತಿದ್ದಾರೆ.

‘ಜನರ ಆರೋಗ್ಯ ಕಾಪಾಡುವಂತೆ ಪ್ರಾರ್ಥಿಸಲು ಹಾಗೂ ಧಾರ್ಮಿಕ ಸಂಪ್ರದಾಯ ಮುಂದುವರಿಸಬೇಕು ಎನ್ನುವ ಕಾರಣದಿಂದ ಗುಡ್ಡಕ್ಕೆ ಹೊರಟಿದ್ದೆವು. ಆದರೆ, ಪ್ರವೇಶ ಸಿಗದಿದ್ದರಿಂದ ಉಗರಗೋಳದಲ್ಲೇ ಸುರಕ್ಷತಾ ಕ್ರಮ ಅನುಸರಿಸಿ ಪೂಜೆ–ಪುನಸ್ಕಾರ ಮಾಡಿ ದೇವಿಗೆ ನಮಿಸಿದ್ದೇವೆ’ ಎಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಬಂದಿದ್ದ ಈಶ್ವರ ಎಂ. ಚಿನ್ನಿಕಟ್ಟಿ ತಿಳಿಸಿದರು.

ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಎಂದಿನಂತೆ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.