ADVERTISEMENT

ಕೊಲೆ ಪ್ರಕರಣ: 24 ಗಂಟೆಗಳಲ್ಲೇ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 12:43 IST
Last Updated 18 ಡಿಸೆಂಬರ್ 2020, 12:43 IST
ಬೆಳಗಾವಿಯ ಹಳೆಯ ಬೆಳಗಾವಿ ಪ್ರದೇಶದ ಅಂಬೇಡ್ಕರ್ ಗಲ್ಲಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಠಾಣೆ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ
ಬೆಳಗಾವಿಯ ಹಳೆಯ ಬೆಳಗಾವಿ ಪ್ರದೇಶದ ಅಂಬೇಡ್ಕರ್ ಗಲ್ಲಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಠಾಣೆ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ   

ಬೆಳಗಾವಿ: ಇಲ್ಲಿನ ಹಳೆ ಬೆಳಗಾವಿ ಪ್ರದೇಶದ ಅಂಬೇಡ್ಕರ್‌ ಗಲ್ಲಿಯಲ್ಲಿ ನಡೆದಿದ್ದ ಚಾಲಕ ಜಯಪಾಲ ಮಸನು ಗರಾಣಿ (35) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಶಹಾಪುರ ಠಾಣೆ ಪೊಲೀಸರು, ಕೇವಲ 24 ಗಂಟೆಗಳಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ಜ್ಯೋತಿರಾಜ ಸಿದ್ರಾಯಿ ದೊಡ್ಡಮನಿ (24), ಅಕ್ಷಯ ಕೃಷ್ಣ ಕೋಲ್ಕಾರ (24), ಪ್ರಶಾಂತ ಯಲ್ಲಪ್ಪ ಕಳ್ಳಿಮನಿ (30), ಪ್ರಶಾಂತ ಬಸವಂತ ಗರಾಣಿ (28), ರೋಹಿತ್ ರಾಜೇಂದ್ರ ದೊಡ್ಡಮನಿ (23), ಶಿವರಾಜ ಅಲಿಯಾಸ್ ಸೋನ್ಯಾ ನಾಗೇಶ ದೊಡ್ಡಮನಿ (21) ಆರೋಪಿಗಳು. ಅಂಬೇಡ್ಕರ್‌ ಗಲ್ಲಿ ನಿವಾಸಿಗಳೆ ಆದ ಅವರನ್ನು ಗುರುವಾರ ತಡರಾತ್ರಿ ಬಂಧಿಸಲಾಗಿದೆ. ಅವರಿಂದ ರಕ್ತಸಿಕ್ತ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಡಿಸಿಪಿ ವಿಕ್ರಂ ಅಮಟೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಎಲ್ಲರೂ ಸ್ನೇಹದಿಂದಲೇ ಇದ್ದರು. ಹರಟೆ ಹೊಡೆಯುತ್ತಿದ್ದರು. ಆದರೆ, ಇತ್ತೀಚೆಗೆ ಸಂಬಂಧ ಹಾಳಾಗಿತ್ತು. ಆಗಾಗ ಜಗಳವೂ ನಡೆದಿತ್ತು. ಬುಧವಾರ ತಡರಾತ್ರಿ ಮಾತಿಗೆ ಮಾತು ಬೆಳೆದು ವಿಕೋ‍ಪಕ್ಕೆ ಹೋಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವಿಚಾರಣೆ ಮುಂದುವರಿದಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ರಾಘವೇಂದ್ರ ಹವಾಲ್ದಾರ ಮತ್ತು ಪಿಎಸ್ಐ ಮಂಜುನಾಥ ನಾಯಕ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.