ADVERTISEMENT

‘ಕೌಶಲ ಬೆಳೆಸಿಕೊಂಡರೆ ಉತ್ತಮ ಅವಕಾಶ’

ಗುರುನಾಥ ಕಡಬೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 13:57 IST
Last Updated 25 ಫೆಬ್ರುವರಿ 2021, 13:57 IST
ಬೆಳಗಾವಿಯ ಆರ್‌ಸಿಯು ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಗುರುವಾರ ನಡೆದ ಸಂವಹನ ಕೂಟ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ ಅವರೊಂದಿಗೆ ಬೋಧಕರು ಹಾಗೂ ವಿದ್ಯಾರ್ಥಿಗಳು ಇದ್ದಾರೆ
ಬೆಳಗಾವಿಯ ಆರ್‌ಸಿಯು ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಗುರುವಾರ ನಡೆದ ಸಂವಹನ ಕೂಟ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ ಅವರೊಂದಿಗೆ ಬೋಧಕರು ಹಾಗೂ ವಿದ್ಯಾರ್ಥಿಗಳು ಇದ್ದಾರೆ   

ಬೆಳಗಾವಿ: ‘ತಂತ್ರಜ್ಞಾನದ ಬೆಳವಣಿಗೆ, ಅಂತರ್ಜಾಲ ಸೌಲಭ್ಯ ಮತ್ತು ಬದಲಾಗಿರುವ ಸನ್ನಿವೇಶದಲ್ಲಿ ಪತ್ರಿಕೋದ್ಯಮದ ಸ್ವರೂಪವೂ ಬದಲಾಗಿದೆ. ಆದರೆ, ಮೂಲತತ್ವ ಹಾಗೆಯೇ ಉಳಿದಿದೆ. ಆದ್ದರಿಂದ ಬರವಣಿಗೆಯ ತುಡಿತ ಹೊಂದಿರುವವರಿಗೆ ಈ ರಂಗದಲ್ಲಿ ಹಲವು ಅವಕಾಶಗಳಿವೆ’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ ತಿಳಿಸಿದರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಗುರುವಾರ ನಡೆದ ಸಂವಹನ ಕೂಟ, ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಮತ್ತು 2019–20ನೇ ಸಾಲಿನ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾಜಿಕ ಜಾಲತಾಣ ಬಳಸುವವರಿಗೆ ಬರೆಯುವ ಅವಕಾಶವಿದೆ. ಇದನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ಬಳಸಿಕೊಂಡು ವ್ಯಾಸಂಗದ ನಂತರ ವೃತ್ತಿ ಜೀವನ ರೂಪಿಸಿಕೊಳ್ಳಬಹುದಾಗಿದೆ’ ಎಂದರು.

ADVERTISEMENT

‘ನೌಕರಿಗಾಗಿ ಶಿಕ್ಷಣ ಎಂಬ ಪರಿಸ್ಥಿತಿ ಈಗ ಉಳಿದಿಲ್ಲ. ನೌಕರಿ ಹಾಗೂ ಶಿಕ್ಷಣ ಎರಡು ಬೇರೆ ಬೇರೆ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇದನ್ನು ಅರಿತು ಕೌಶಲಗಳನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿಭಾಗದ ಸಂಯೋಜಕ ವಿನೋದ ಗಾಯಕವಾಡ, ‘ಪತ್ರಿಕೋದ್ಯಮ ವಿದ್ಯಾರ್ಥಿಗಳು ಪಠ್ಯಕ್ರಮದ ಅಧ್ಯಯನದ ಜೊತೆಗೆ ಕ್ಷೇತ್ರ ಭೇಟಿ ಮತ್ತು ಬರವಣಿಗೆ ಮೂಲಕ ಹೆಚ್ಚಿನ ಜ್ಞಾನ ಸಂಪಾದಿಸಬೇಕು. ಪತ್ರಿಕೋದ್ಯಮ ಎನ್ನುವುದು ಅದ್ಭುತ ಪದವಿಯಾಗಿದೆ. ಎಂಥದೆ ಸಂದರ್ಭದಲ್ಲೂ ಸುದ್ದಿ ಬರೆಯುವಂತಹ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಪತ್ರಕರ್ತನಾಗಲು ಸಾಧ್ಯ’ ಎಂದರು.

‘ಪತ್ರಿಕೋದ್ಯಮ ವಿಭಾಗಕ್ಕೆ ಮುಖ್ಯ ಕಟ್ಟಡದಲ್ಲಿ ಎರಡು ಕೊಠಡಿಗಳು ಹಾಗೂ ಸಿಬ್ಬಂದಿ ಒದಗಿಸಲಾಗಿದೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗಲಿದೆ’ ಎಂದರು.

ಉಪನ್ಯಾಸಕ ಡಾ.ಸತೀಶ ಇಟಗಿ ಮಾತನಾಡಿದರು. ಉಪನ್ಯಾಸಕರಾದ ವಿದ್ಯಾಶ್ರೀ ಹಲಕೇರಿಮಠ, ಸುನೀತಾ ದಾಸರ, ವಿದ್ಯಾರ್ಥಿ ಪ್ರತಿನಿಧಿಗಳಾದ ಕಿರಣ ಕಾಂಬಳೆ, ಪೂರ್ಣಿಮಾ ಹುಡೇದ, ಪ್ರದೀಪ ಪಾಟೀಲ, ಸಹನಾ ಭಜಂತ್ರಿ ಇದ್ದರು.

ಸಂಜಯ ಚವಾಣ ಸ್ವಾಗತಿಸಿದರು. ಸಹನಾ ಭಜಂತ್ರಿ ನಿರೂಪಿಸಿದರು. ಪ್ರವೀಣ ಗೌಡರ ವಂದಿಸಿದರು.

ಹೊಸ ವಿದ್ಯಾರ್ಥಿಗಳಿಗೆ ಪುಷ್ಪ ಹಾಗೂ ಪುಸ್ತಕಗಳನ್ನು ನೀಡಿ ಸ್ವಾಗತಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.