ADVERTISEMENT

ಬೆಳಗಾವಿ: ಸ್ಮಾರ್ಟ್‌ ಸಿಟಿ ಅನುಷ್ಠಾನ, ಹಲವು ದೂರು

ಶಂಕರಗೌಡ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 8:32 IST
Last Updated 26 ಅಕ್ಟೋಬರ್ 2020, 8:32 IST
ಶಂಕರಗೌಡ ಪಾಟೀಲ
ಶಂಕರಗೌಡ ಪಾಟೀಲ   

ಬೆಳಗಾವಿ: ‘ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ಸಮರ್ಪಕವಾಗಿಲ್ಲ ಎನ್ನುವ ಬಗ್ಗೆ ಬಹಳ ದೂರುಗಳಿವೆ. ಕಳಪೆ ಕಾಮಗಾರಿಗಳು ನಡೆದಿರುವ ಬಗ್ಗೆ ಕೆಲವರು ದಾಖಲೆಗಳನ್ನೂ ನೀಡಿದ್ದಾರೆ’ ಎಂದು ನವದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ತಿಳಿಸಿದರು.

‘ಈ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಜೊತೆ ಚರ್ಚಿಸುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿದೆ’ ಎಂದು ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕೇಂದ್ರದಿಂದ ರೂಪಿಸಿರುವ ‘ಪ್ರಧಾನ ಮಂತ್ರಿ ಜನಕಲ್ಯಾಣಕಾರಿ ಯೋಜನೆ ಪ್ರಚಾರ ಪ್ರಸಾರ ಅಭಿಯಾನ’ಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಸರ್ಕಾರದ ಸೂಚನೆಯಂತೆ, ಪಕ್ಷದ ಕಾರ್ಯಕರ್ತರಲ್ಲದ ಹಾಗೂ ಕೈಗಾರಿಕೆ ಸೇರಿದಂತೆ ವಿವಿಧ ವರ್ಗದ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಕೈಗಾರಿಕೋದ್ಯಮಿ ವಿಲಾಸ ಬಾದಾಮಿ‌, ಪ್ರಧಾನ ಕಾರ್ಯದರ್ಶಿಯಾಗಿ ಗಣಪತಿ, ಯುವ ಘಟಕದ ಅಧ್ಯಕ್ಷರಾಗಿ ಶಿವಾನಂದ ಹಿರೇಮಠ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ರಮೇಶ ದೇಶಪಾಂಡೆ, ಮಹಿಳಾ ಕ್ಷೇಮಾಭಿವೃದ್ಧಿ ಘಟಕದ ಅಧ್ಯಕ್ಷರಾಗಿ ವಾಣಿ ರಾಮಚಂದಾನಿ, ಪ್ರಧಾನ ಕಾರ್ಯದರ್ಶಿಯಾಗಿ ವೀಣಾ ಜೋಶಿ, ಸದಸ್ಯರಾಗಿ ಪ್ರಕಾಶ ಹಿರೇಮಠ, ಸತೀಶ ಜಾಧವ, ವಿಜಯ ಚಪ್ಪರ, ಮೇಘನಾ ಹಾಗೂ ರೇಣುಕಾ ಅವರನ್ನು ನೇಮಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಜನಪ್ರತಿನಿಧಿಗಳು ಎಲ್ಲ ಯೋಜನೆಗಳ ಬಗ್ಗೆಯೂ ಎಲ್ಲರಿಗೂ ಹೇಳಲಾಗುವುದಿಲ್ಲ. ಹೀಗಾಗಿ, ಈ ಘಟಕವು ಸರ್ಕಾರದ ಕಾರ್ಯಕ್ರಮಗಳ ಕುರಿತು ತಿಳಿಸಿಕೊಡಲಿದೆ. ಯೋಜನೆಗಳ ಲಾಭವನ್ನು ಫಲಾನುಭವಿಗಳಿಗೆ ತಿಳಿಸುವ ಉದ್ದೇಶದಿಂದ ಈ ಅಭಿಯಾನ ರೂಪಿಸಲಾಗಿದೆ. ಈ ಘಟಕದವರಿಗೂ ರಾಜಕಾರಣಕ್ಕೂ ಸಂಬಂಧವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.