ADVERTISEMENT

ಬೆಳಗಾವಿ: ಆಸ್ಪತ್ರೆಗಳಿಗೆ ವೈದ್ಯರು ಬರುತ್ತಿಲ್ಲ, ಚಿಕಿತ್ಸೆಗೆ ಪರದಾಟ

ಭರ್ತಿಗೆ ಅರ್ಜಿ ಆಹ್ವಾನಿಸಿದರೂ ಬಾರದ ಸ್ಪಂದನೆ

ಎಂ.ಮಹೇಶ
Published 26 ಮೇ 2021, 19:30 IST
Last Updated 26 ಮೇ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಳಗಾವಿ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೇರಿದಂತೆ ಹಲವು ಹುದ್ದೆಗಳು ಖಾಲಿ ಉಳಿದಿರುವ ಪರಿಣಾಮ, ಜನರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸುವುದು ಲಭ್ಯವಾಗುತ್ತಿಲ್ಲ.

ಹೋದ ವರ್ಷ ಕೋವಿಡ್ ಮೊದಲನೇ ಅಲೆ ಕಾಣಿಸಿಕೊಂಡಾಗ, ಆರೋಗ್ಯ ಸಂಸ್ಥೆಗಳು ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವುದು ದೊಡ್ಡ ತೊಡಕಾಗಿ ಪರಿಣಮಿಸಿತ್ತು. ಹಂತ ಹಂತವಾಗಿ ಅವುಗಳ ಸಬಲೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿತ್ತು. ಆದರೆ, ವರ್ಷ ಕಳೆದರೂ ಎಲ್ಲ ಆಸ್ಪತ್ರೆಗಳಲ್ಲೂ ಬಹುತೇಕ ಹುದ್ದೆಗಳನ್ನಾದರೂ ಭರ್ತಿ ಮಾಡುವ ಕೆಲಸವಾಗಿಲ್ಲ. ‘ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಯಾರೂ ಅರ್ಜಿ ಹಾಕಲಿಲ್ಲ’ ಎಂದು ನೆಪ ಹೇಳುತ್ತಾ ಬರಲಾಗಿತ್ತಿದೆಯೇ ಹೊರತು, ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ. ಗ್ರಾಮೀಣ ಜನರು ಚಿಕಿತ್ಸೆಗಾಗಿ ಪರದಾಡುವುದು ತಪ್ಪಿಲ್ಲ. ಖಾಸಗಿಯವರ ಮೊರೆ ಹೋಗುವುದು ನಿಂತಿಲ್ಲ.

ವ್ಯತಿರಿಕ್ತ ಪರಿಣಾಮ: ‘ಹುದ್ದೆಗಳು ಕಾಲ ಕಾಲಕ್ಕೆ ಭರ್ತಿಯಾಗದೆ ಇರುವುದರಿಂದ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆ. ವೈದ್ಯರು ಹಾಗೂ ಸಿಬ್ಬಂದಿಗೆ ಕೆಲಸದ ಒತ್ತಡ ಬಹಳ ಹೆಚ್ಚಾಗುತ್ತಿದೆ. ಹೊರಗುತ್ತಿಗೆ ಮೇಲೆ ನೇಮಿಸಿಕೊಂಡು ನಿರ್ವಹಣೆಗೆ ಪ್ರಯತ್ನಿಸಲಾಗುತ್ತಿದೆ. ಕೊರೊನಾ ವೈರಾಣು ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆಯು ಹೆಚ್ಚಾಗಿ ಬಾಧಿಸುತ್ತಿದೆ. ಸಮರ್ಪಕ ನಿರ್ವಹಣೆಯು ಸವಾಲಾಗಿ ಪರಿಣಮಿಸಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ನನಗೆ ಮೂರು ಕಡೆಗಳಲ್ಲಿ ಪ್ರಭಾರವಿದೆ. ಹೀಗಾಗಿ, ನಿಗದಿತ ದಿನಗಳಲ್ಲಿ ಮಾತ್ರವೇ ಆಯಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವುದು ಸಾಧ್ಯವಾಗುತ್ತಿದೆ. ಇರುವ ಒಬ್ಬ ಎಲ್ಲ ಆಸ್ಪತ್ರೆಗಳಲ್ಲೂ ಏಕಕಾಲಕ್ಕೆ ಲಭ್ಯವಾಗುವುದು ಹೇಗೆ ಸಾಧ್ಯ?’ ಎಂದು ಸರ್ಕಾರಿ ವೈದ್ಯರೊಬ್ಬರು ಕೇಳಿದರು.

ಅವರೂ ಬಾಧಿತರು: ಕೆಲವು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯೂ ಕೋವಿಡ್ ಬಾಧಿತರಾಗಿದ್ದಾರೆ. ಅವರು ಆರೈಕೆ ಪಡೆದು ಬರಲು ಸರಾಸರಿ ಎರಡು ವಾರಗಳಾದರೂ ಆಗುತ್ತಿದೆ. ಇದೂ ಕೂಡ ಆರೋಗ್ಯ ಸೇವೆಯಲ್ಲಿ ವ್ಯತ್ಯಯಕ್ಕೆ ಕಾರಣವಾಗುತ್ತಿರುವುದು ಅಲ್ಲಲ್ಲಿ ವರದಿಯಾಗಿದೆ. ಲಾಕ್‌ಡೌನ್‌ ಕಾರಣದಿಂದ, ಕೆಲವು ಕಡೆಗಳಲ್ಲಿ ಸಿಬ್ಬಂದಿ ಸಕಾಲಕ್ಕೆ ಬಾರದಿರುವ ಬಗ್ಗೆಯೂ ಆರೋಪಗಳಿವೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ‘ಕೋವಿಡ್ 1ನೇ ಅಲೆಯ ಸಂದರ್ಭಕ್ಕೂ ಈ ವರ್ಷವೂ ಹೋಲಿಸಿದರೆ ಕೆಲವು ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆದಿದೆ. 75 ಸ್ಟಾಫ್‌ ನರ್ಸ್‌ಗಳು, 75 ಎಎನ್‌ಎಂಗಳು, 11 ಲ್ಯಾಬ್ ಟೆಕ್ನೀಷಿಯನ್‌ಗಳು ಹಾಗೂ 15 ಪಾರ್ಮಾಸಿಸ್ಟ್‌ಗಳನ್ನು ನೇಮಿಸಿಕೊಳ್ಳಲಾಗಿದೆ. ಕೇವಲ ನಾಲ್ವರು ವೈದ್ಯರ ನೇಮಕಾತಿಯಷ್ಟೆ ಸಾಧ್ಯವಾಗಿದೆ. ವೈದ್ಯರು ಬರುವುದಕ್ಕೆ ಮುಂದಾಗುತ್ತಿಲ್ಲ. ಇದರಿಂದಾಗಿ ಹುದ್ದೆಗಳ ಭರ್ತಿ ಸಾಧ್ಯವಾಗುತ್ತಿಲ್ಲ’ ಎಂದು ತಿಳಿಸಿದರು.

‘ಹುದ್ದೆಗಳ ಕೊರತೆ ಕಾರಣದಿಂದ ಕೋವಿಡ್‌ ಸಂಬಂಧಿತ ಚಿಕಿತ್ಸೆಯಲ್ಲಿ ತೊಂದರೆಗಳು ಎದುರಾಗದಂತೆ ನಿರ್ವಹಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ರಜೆ ಇರುವುದರಿಂದಾಗಿ, ಅಲ್ಲಿ ಆರೋಗ್ಯ ತಪಾಸಣೆ ಮತ್ತಿತರ ಕಾರ್ಯಕ್ರಮಗಳಿಗೆ ನಿಯೋಜನೆಗೊಂಡಿರುವ ವೈದ್ಯರು ಹಾಗೂ ಸಿಬ್ಬಂದಿಯನ್ನು ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದ ಕೆಲಸಗಳಿಗೆ ಬಳಸಲಾಗುತ್ತಿದೆ. ಆಯುಷ್ ವೈದ್ಯರನ್ನು ಕೋವಿಡ್ ಕೇರ್‌ ಕೇಂದ್ರಗಳಿಗೆ ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಅರ್ಧದಷ್ಟು ಖಾಲಿ!
ಜಿಲ್ಲೆಗೆ ಮಂಜೂರಾದ ಹುದ್ದೆಗಳ ಪೈಕಿ ಅರ್ಧದಷ್ಟೂ ಭರ್ತಿಯಾಗಿಲ್ಲ! ಆರೋಗ್ಯ ಇಲಾಖೆಯಿಂದ ಜಿಲ್ಲೆಗೆ ಮಂಜೂರಾದ ವಿವಿಧ ಹುದ್ದೆಗಳ ಸಂಖ್ಯೆ 3,822. ಇವುಗಳಲ್ಲಿ 1,500ಕ್ಕೂ ಹೆಚ್ಚಿನವು ಖಾಲಿ ಇವೆ. ಇಲ್ಲಿ 139 ಪ್ರಾಥಮಿಕ ಆರೋಗ್ಯ ಕೇಂದ್ರ, 16 ಸಮುದಾಯ ಆರೋಗ್ಯ ಕೇಂದ್ರಗಳಿವೆ. 9 ಸಾರ್ವಜನಿಕ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. 14 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಎಂಬಿಬಿಎಸ್‌ ವೈದ್ಯರ 146 ಹುದ್ದೆಗಳ ಪೈಕಿ 26 ಖಾಲಿ ಮತ್ತು ತಜ್ಞ ವೈದ್ಯರಲ್ಲಿ 142ರ ಪೈಕಿ 42 ಖಾಲಿ ಇವೆ.

ಮುಖ್ಯವಾಗಿ ವೈದ್ಯರ ಹುದ್ದೆಗಳೇ ದೊಡ್ಡ ಪ್ರಮಾಣದಲ್ಲಿ ಖಾಲಿ ಇರುವುದು ನಿರ್ವಹಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

315 ಸ್ಟಾಫ್‌ ನರ್ಸ್‌ಗಳ ಹುದ್ದೆಗಳು ಮಂಜೂರಾಗಿದ್ದು, ಬಹುತೇಕ ಭರ್ತಿಯಾಗಿವೆ. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ 654ರಲ್ಲಿ ಇನ್ನೂ ಬರೋಬ್ಬರಿ 223 ಹುದ್ದೆಗಳು ಭರ್ತಿ ಆಗಬೇಕಿದೆ. ಹಿರಿಯ ಪುರುಷ ಆರೋಗ್ಯ ಸಹಾಯಕರು ವಿಭಾಗದಲ್ಲಿ ಮಂಜೂರಾಗಿರುವುದು 468. ಇದರಲ್ಲಿ 361 ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಲಭ್ಯವಾಗಿದೆ.

ಅಧಿಕಾರಿ ಏನಂತಾರೆ?
ವಿಶೇಷವಾಗಿ ತಜ್ಞ ವೈದ್ಯರು ಬರುತ್ತಿಲ್ಲ. ನೇರ ನೇಮಕಾತಿಗೆ ಸಂದರ್ಶನಕ್ಕೆ ಬರುವಂತೆ ಅರ್ಜಿ ಆಹ್ವಾನಿಸಲಾಗಿತ್ತು. ಪ್ರತಿಕ್ರಿಯೆ ಬರುತ್ತಿಲ್ಲ. ₹ 1.10 ಲಕ್ಷ ವೇತನ ಸಾಲುವುದಿಲ್ಲ ಎನ್ನುತ್ತಾರೆ.
-ಡಾ.ಎಸ್.ವಿ. ಮುನ್ಯಾಳ, ಡಿಎಚ್‌ಒ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.