ADVERTISEMENT

ಫೋನ್‌ ಇನ್‌: ದೂರುಗಳಿಗೆ ಸ್ಪಂದಿಸಿದ ಎಸ್ಪಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 3:07 IST
Last Updated 27 ನವೆಂಬರ್ 2022, 3:07 IST
ಬೆಳಗಾವಿಯಲ್ಲಿ ಶನಿವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಎಸ್ಪಿ ಡಾ.ಸಂಜೀವ ಪಾಟೀಲ, ಎಎಸ್ಪಿ ಮಹಾನಿಂಗ ನಂದಗಾವಿ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡರು
ಬೆಳಗಾವಿಯಲ್ಲಿ ಶನಿವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಎಸ್ಪಿ ಡಾ.ಸಂಜೀವ ಪಾಟೀಲ, ಎಎಸ್ಪಿ ಮಹಾನಿಂಗ ನಂದಗಾವಿ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡರು   

ಬೆಳಗಾವಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರು ಶನಿವಾರ ನಡೆಸಿದ ನೇರ ಫೋನ್‌ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವು ಜನ ತಮ್ಮ ದೂರು, ದುಮ್ಮಾನಗಳನ್ನು ಹೇಳಿಕೊಂಡರು. ಪ್ರತಿಯೊಬ್ಬರ ಕರೆಗೂ ಅಧಿಕಾರಿಗಳು ಸಮರ್ಪಕವಾದ ಉತ್ತರ, ಪರಿಹಾರ ನೀಡಿದರು.

ಸಿ ದರ್ಜೆಯ ಮಹಿಳಾ ಅಧಿಕಾರಿಯೊಬ್ಬರು ಕರೆ ಮಾಡಿ, ‘ಯೂ ಟೂಬ್‌ ಚಾಲನ್‌ ವರದಿಗಾರ ಎಂದು ಹೇಳಿಕೊಂಡು ಕೆಲವರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ. ಮಹಿಳಾ ಅಧಿಕಾರಿಯನ್ನು ಪೀಡಿಸುತ್ತಿರುವ ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

ಇದಕ್ಕೆ ಸ್ಪಂದಿಸಿದ ಡಾ.ಸಂಜೀವ, ‘ಮಹಿಳಾ ಅಧಿಕಾರಿ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಇದರ ಬಗ್ಗೆ ನೀವು ಲಿಖತ ದೂರು ಕೊಡಿ. ತಕ್ಷಣಕ್ಕೆ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ADVERTISEMENT

‘ಅಜ್ಜಿಯೊಬ್ಬರಿಗೆ ಸೊಸೆ ಕಿರುಕುಳ ನೀಡಿ ಮನೆಯಿಂದ ಹೊರಗೆ ಹಾಕಿದ್ದಾರೆ. ಅಜ್ಜಿಯ ಮನೆಯನ್ನು ಅವರ ಮಗನ ಹೆಸರಿಗೆ ಬರೆಯಬೇಕು ಎಂದು ಪೀಡಿಸುತ್ತಿದ್ದಾರೆ. ವೃದ್ಧೆಗೆ ಸಹಾಯ ಮಾಡಿ’ ಎಂದು ರಾಮದುರ್ಗ ತಾಲ್ಲೂಕಿನ ನಾಗನೂರು ಗ್ರಾಮದ ಮಹಿಳೆಯೊಬ್ಬರು ಅಳಲು ತೋಡಿಕೊಂಡರು.

ಇದಕ್ಕೆ ಸಹಾನುಭೂತಿಯಿಂದ ಸ್ಪಂದಿಸಿದ ಡಾ.ಸಂಜೀವ, ‘ಅಜ್ಜಿಯರ ಕಡೆಯಿಂದ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ಕೊಡಿಸಿ. ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ’ ಎಂದು ಸಲಹೆ ನೀಡಿದರು.

ಹಳ್ಳಿಗಳಲ್ಲಿ ಕೆಲವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಕೆಲವರು ದೂರು ಹೇಳಿಕೊಂಡರು. ‘ಕಳೆದ ಬಾರಿಯ ಫೋನ್‌ ಇನ್ ಕಾರ್ಯಕ್ರಮದಲ್ಲೂ ಇಂಥ ದೂರುಗಳು ಕೇಳಿಬಂದಿವೆ. ಈಗಾಗಲೇ ಹಲವರ ಮೇಲೆ ಕ್ರಮ ಜರುಗಿಸಲಾಗಿದೆ. ಮಾಹಿತಿ ಆಧಿರಿಸಿ ಮುಂದೆಯೂ ಕಾರ್ಯಾಚರಣೆ ನಡೆಸಲಾಗುವುದು. ಜನರು ಮುಂದೆ ಬಂದು ದೂರು ನೀಡಬೇಕು’ ಎಂದು ಎಸ್ಪಿ ಪ್ರತಿಕ್ರಿಯಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ, ಡಿವೈಎಸ್ಪಿ ವೀರೇಶ ದೊಡಮನಿ, ಸಿಪಿಐ ಬಿ.ಆರ್.ಗಡ್ಡೇಕರ ಸೇರಿದಂತೆ ಇನ್ನಿತರರು ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.