ADVERTISEMENT

ಸಹೋದನಿಗೆ ಆನ್‌ಲೈನ್‌ನಲ್ಲಿ ರಾಖಿ

ಅಂಚೆ ಇಲಾಖೆಯ ಚಿಕ್ಕೋಡಿ ಕಚೇರಿಯಿಂದ ಯೋಜನೆ, ಮಹಿಳೆಯರ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2023, 5:43 IST
Last Updated 25 ಆಗಸ್ಟ್ 2023, 5:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸುಧಾಕರ ತಳವಾರ

ಚಿಕ್ಕೋಡಿ: ದೂರದ ಊರಿನಲ್ಲಿರುವ ಸಹೋದರನಿಗೆ ನೀವು ರಾಖಿಯನ್ನು ಹೇಗೆ ಕಳುಹಿಸುತ್ತೀರಿ? ಮಾರುಕಟ್ಟೆಗೆ ಹೋಗಿ ರಾಖಿ ಖರೀದಿಸಿ, ಅದನ್ನು ಪಾಕೇಟಿನಲ್ಲಿ ಪ್ಯಾಕ್ ಮಾಡಿ ಅಂಚೆ ಕಚೇರಿಗೆ ತೆರಳಿ ಕೊಡಬೇಕು. ಆದರೆ, ಈ ಬಾರಿ ಅದರ ಅಗತ್ಯವಿಲ್ಲ. ಈ ಕ್ರಮವನ್ನು ಸರಳ ಮಾಡಿರುವ ಚಿಕ್ಕೋಡಿ ಅಂಚೆ ಕಚೇರಿ, ಆನ್‌ಲೈನ್ ರಾಖಿ ಕಳಿಸುವ ವಿನೂತನ ಪ್ರಯೋಗ ನಡೆಸಿದೆ.

ಆನ್‌ಲೈನ್ ಮೂಲಕ ರಾಖಿ ಕಳಿಸಲು ಅಂಚೆ ಇಲಾಖೆಯು ₹120 ಶುಲ್ಕ ನಿಗದಿಪಡಿಸಿದೆ. ಕೇವಲ ರಾಖಿಗೆ ಇಷ್ಟು ಶುಲ್ಕವೇ ಎನ್ನಬೇಡಿ. ₹120 ಪಾವತಿಸಿದರೆ ಅಂಚೆ ಇಲಾಖೆಯೇ ರಾಖಿ, ಗ್ರೀಟಿಂಗ್‌ ಕಾರ್ಡ್‌ ಒಳಗೊಂಡು ವಾಟರ್‌ಪ್ರೂಫ್ ಪಾಕೇಟಿನಲ್ಲಿ ರಾಖಿ ಕಳಿಸಲಿದೆ.

ADVERTISEMENT

ಮನೆಯಲ್ಲಿ ಕುಳಿತುಕೊಂಡೇ ಅಂಚೆ ಇಲಾಖೆ ವೆಬ್‌ಸೈಟಿಗೆ ಭೇಟಿ ನೀಡಿ, ತಮಗೆ ಇಷ್ಟವಾದ ರಾಖಿ ಸೂಚಿಸಿ, ತಮ್ಮ ಸಹೋದರರಿಗೆ ಶುಭ ಸಂದೇಶವನ್ನೂ ಬರೆದು ಕಳಿಸಬಹುದು.

ದೇಶದ ಯಾವುದೇ ಭಾಗದಲ್ಲಿರುವ ತಮ್ಮ ಸಹೋದರರಿಗೆ ಈ ಯೋಜನೆ ಮೂಲಕ ರಾಖಿ ಕಳಿಸಲು ಅಂಚೆ ಇಲಾಖೆ ಅವಕಾಶ ಕಲ್ಪಿಸಿದೆ. ಜುಲೈನಿಂದಲೇ ಈ ಯೋಜನೆ ಜಾರಿಗೊಂಡಿದೆ. ಆ.30ರಂದು ರಕ್ಷಾ ಬಂಧನ ಹಬ್ಬದು, 26ರವರೆಗೆ ನೋಂದಣಿ ಮಾಡಿಸಿಕೊಂಡು ನಿಗದಿತ ಸ್ಥಳಕ್ಕೆ ರಾಖಿ ಕಳಿಸಬಹುದು.

ನೋಂದಣಿ ಮಾಡಿಸುವುದು ಹೇಗೆ?: ರಕ್ಷಾ ಬಂಧನಕ್ಕಾಗಿ ಅಂಚೆ ಇಲಾಖೆ ರಾಖಿ ಪೋಸ್ಟ್ ಎಂಬ ವೆಬ್‌ಸೈಟ್ ಸೃಷ್ಟಿಸಿದೆ. ಅದರ ಮೇಲೆ ಕ್ಲಿಕ್ ಮಾಡಿ ತಮಗಿಷ್ಟವಾದ ರಾಖಿ ಡಿಸೈನ್ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಅದರೊಂದಿಗೆ ಶುಭ ಸಂದೇಶದ ಗ್ರೀಟಿಂಗ್ ಕಾರ್ಡ್‌ ಕೂಡ ಲಭ್ಯವಿದ್ದು, ತಮಗೆ ಇಷ್ಟವಾದ ಸಂದೇಶ ಪತ್ರ ಆಯ್ಕೆ ಮಾಡಿಕೊಳ್ಳಬಹುದು.

27 ಬಗೆಯ ಆಕರ್ಷಕ ರಾಖಿ ಡಿಸೈನ್ ಆ ವೆಬ್ ಸೈಟಿನಲ್ಲಿ ಇವೆ. ವಿಶೇಷವೆಂದರೆ ಸೈನಿಕರಿಗೆ ಕಳಿಸುವ ವಿಶೇಷ ಶುಭ ಸಂದೇಶ ಪತ್ರವಿದೆ. ರಾಖಿ ಮತ್ತು ಶುಭಾಶಯ ಪತ್ರ ಆಯ್ಕೆ ಮಾಡಿಕೊಂಡ ಬಳಿಕ ರಜಿಸ್ಟ್ರೇಶನ್ ಮಾಡಿ, ರಾಖಿ ಕಳಿಸುವ ವಿಳಾಸ ನಮೂದಿಸಿ ಸಲ್ಲಿಸಬೇಕು.

ಪ್ರತಿ ವರ್ಷ ಸಾವಿರಾರು ಗ್ರಾಹಕರು ರಾಖಿ ಕಳಿಸುತ್ತಿದ್ದರು. ಪ್ರಸಕ್ತ ವರ್ಷ ಈ ವಿನೂತನ ಯೋಜನೆ ಪರಿಚಯಿಸಿರುವ ಕಾರಣ ಆನ್ ಲೈನ್ ಮೂಲಕ ಗ್ರಾಹಕರಿಂದ ಯಾವ ರೀತಿಯ ಸ್ಪಂದನೆ ದೊರಕಲಿದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ ಎನ್ನುತ್ತಾರೆ ಅಂಚೆ ಇಲಾಖೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.