ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ವಿಶೇಷ ಶಿಕ್ಷಕರ ನಿಯೋಜಿಸಿ

ವಿಶೇಷ ಪರೀಕ್ಷಾ ಕೊಠಡಿ ಸ್ಥಾಪಿಸಲು ಮನವಿ

ಸುಧಾಕರ ಎಸ್.ತಳವಾರ, ಬೆಂಗಳೂರು
Published 18 ಫೆಬ್ರುವರಿ 2020, 14:10 IST
Last Updated 18 ಫೆಬ್ರುವರಿ 2020, 14:10 IST
ಗಜಾನನ ಮನ್ನಿಕೇರಿ
ಗಜಾನನ ಮನ್ನಿಕೇರಿ   

ಚಿಕ್ಕೋಡಿ: ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಟರ್ನಿಂಗ್‌ ಪಾಯಿಂಟ್ ಇದ್ದಂತೆ. ಆದರೆ, ಶ್ರವಣದೋಷವುಳ್ಳ ಮಕ್ಕಳಿಗೆ ಇಲಾಖೆಯಿಂದ ಆದ್ಯತೆ ನೀಡಲಾಗುತ್ತಿಲ್ಲ. ಅವರಿಗಾಗಿ ವಿಶೇಷ ಪರೀಕ್ಷಾ ಕೊಠಡಿ ಸ್ಥಾಪಿಸಿ, ಸಂಜ್ಞೆ ಮೂಲಕ ತಿಳಿಸುವ ವಿಶೇಷ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ನಿಯೋಜಿಸಿದೇ ಇರುವುದರಿಂದ ಸಂದೇಹ ಮತ್ತು ಸಂಶಯಗಳನ್ನು ಪರಿಹರಿಸಿಕೊಳ್ಳಲು ಆಗದೇ ಆ ಮಕ್ಕಳು ಪರೀಕ್ಷೆಯಲ್ಲಿ ವಿಫಲರಾಗುವ ಆತಂಕ ಎದುರಾಗಿದೆ.

ರಾಜ್ಯದಲ್ಲಿ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಬೆಳಗಾವಿ, ಮೈಸೂರು, ಕಲಬುರ್ಗಿ, ಬಳ್ಳಾರಿಯಲ್ಲಿ ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಗಳಿವೆ. ವಿವಿಧೆಡೆ ಸ್ವಯಂ ಸೇವಾ ಸಂಸ್ಥೆಗಳಡಿಯಲ್ಲಿ ಅನುದಾನ ಪಡೆದು ನಡೆಸುತ್ತಿರುವ ಶ್ರವಣದೋಷವುಳ್ಳ ಮಕ್ಕಳ ಶಾಲೆಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಯುತ್ತಿರುವ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಸಾಮಾನ್ಯ ಮಕ್ಕಳಿಗೆ ಮತ್ತು ವಿಭಿನ್ನ ಸಾಮರ್ಥ್ಯವುಳ್ಳ ಮಕ್ಕಳಿಗೆ ಒಂದೇ ರೀತಿಯ ಪ್ರಶ್ನೆಪತ್ರಿಕೆಯ ನೀಡಲಾಗುತ್ತದೆ. ಇದನ್ನು ಎದುರಿಸುವುದು ವಿಭಿನ್ನ ಸಾಮರ್ಥ್ಯವುಳ್ಳ ಮಕ್ಕಳಿಗೆ ಕಷ್ಟವಾಗುತ್ತಿದೆ ಎನ್ನುತ್ತಾರೆ ಪೋಷಕರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆಯ ದಿನದಂದು ಪರೀಕ್ಷೆಯ ಪ್ರಾರಂಭದ ಮೊದಲನೇ ಲಾಂಗ್ ಬೆಲ್, ಎರಡನೇ ಲಾಂಗ್ ಬೆಲ್, ಮೂರನೇ ಲಾಂಗ್ ಬೆಲ್, ಸಮಯದ ಮುಕ್ತಾಯದ ಬೆಲ್ ಹೀಗೆ ಸಮಯ ಹೊಂದಾಣಿಕೆಯನ್ನು ಮಕ್ಕಳಿಗೆ ತಿಳಿಸುವುದು ಅಗತ್ಯವಾಗಿದೆ. ಅಂಧ ಮಕ್ಕಳಿಗೆ ಸಹಾಯಕ ಬರಹಗಾರರನ್ನು ಒದಗಿಸುವಂತೆ ಶ್ರವಣದೋಷವುಳ್ಳ ಮಕ್ಕಳ ಸಂವಹನಕ್ಕೆ ವಿಶೇಷ ಶಿಕ್ಷಕರ ನೇಮಕ ಮಾಡಬೇಕು. ಶ್ರವಣದೋಷವುಳ್ಳ ಮಕ್ಕಳಿಗೆ ಸಾಮಾನ್ಯ ವಿದ್ಯಾರ್ಥಿಗಳ ರೀತಿಯಲ್ಲಿ ಪ್ರಶ್ನೆಪತ್ರಿಕೆಯನ್ನು ಅರ್ಥ ಮಾಡಿಕೊಂಡು ಉತ್ತರಿಸುವುದು ಕಷ್ಟ. ಪಶ್ನೆಪತ್ರಿಕೆಯಲ್ಲಿ ಉಂಟಾಗುವ ಗೊಂದಲಗಳನ್ನು ‍ಪರಿಹರಿಸಲು ಸಂಜ್ಞಾ ಭಾಷಾ ಶಿಕ್ಷಕರ ಅಗತ್ಯವಿರುತ್ತದೆ. ಶ್ರವಣದೋಷವುಳ್ಳ ಮಕ್ಕಳಿಗಾಗಿಯೇ ಪ್ರತ್ಯೇಕ ಪರೀಕ್ಷಾ ಕೊಠಡಿ ಸ್ಥಾಪಿಸಿ ವಿಷಯ ಶಿಕ್ಷಕರಲ್ಲದ ವಿಶೇಷ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ನಿಯೋಜಿಸಬೇಕು’ ಎಂದು ವಿಶೇಷ ಶಿಕ್ಷಕ ಶಂಕರಗೌಡ ಪಾಟೀಲ ಹೇಳುತ್ತಾರೆ.

ADVERTISEMENT

‘ವಿಶೇಷ ಮಕ್ಕಳಿಗೆ ಅವರ ಸಾಮ‌ರ್ಥ್ಯಕ್ಕೆ ಅನುಗುಣವಾಗಿ ಶಿಕ್ಷಣ ಪಡೆಯಲು ಮುಕ್ತ ಅವಕಾಶ ದೊರಕಿಸಬೇಕು ಮತ್ತು ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಬೇಕು. ಈ ಮೂಲಕ ಅವರು ಶಿಕ್ಷಣ ಮುಂದುವರಿಸಲು ಹಾಗೂ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕರಿಸಬೇಕು. ವಿಶೇಷ ಮಕ್ಕಳನ್ನು ‘ವಿಶೇಷ’ವಾಗಿಯೇ ಪರಿಗಣಿಸಿ ಸೂಕ್ತ ಮಾರ್ಗೋಪಾಯ ರೂಪಿಸಬೇಕು’ ಎನ್ನುವ ಮನವಿ ಅವರದು.

‘ಶ್ರವಣದೋಷವುಳ್ಳ ಅಥವಾ ವಿಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿಯೇ ಪ್ರತ್ಯೇಕ ಪರೀಕ್ಷಾ ಕೊಠಡಿ ಸ್ಥಾಪಿಸಲು ಅವಕಾಶವಿಲ್ಲ. ಆದರೆ, ಶ್ರವಣದೋಷ ಮತ್ತು ದೃಷ್ಟಿದೋಷವಿರುವ ಮಕ್ಕಳಿಗೆ ಅರ್ಧ ಗಂಟೆ ಪರೀಕ್ಷಾ ಅವಧಿಯನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಅವರ ಉತ್ತರ ಪತ್ರಿಕೆಗಳ ಮೇಲೆ ಗ್ರೀನ್ ಸ್ಟೀಕರ್ ಅಂಟಿಸಿ ನೀಡಲಾಗುತ್ತದೆ. ಪರೀಕ್ಷಾ ಅವಧಿಯಲ್ಲೂ ಆ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಸಮನ್ವಯ ಶಿಕ್ಷಣದಡಿ ಸಾಮಾನ್ಯ ವಿದ್ಯಾರ್ಥಿಗಳ ಕೊಠಡಿಯಲ್ಲೇ ಪರೀಕ್ಷೆ ಬರೆಯುವುದರಿಂದ ಅವರಲ್ಲಿ ಕೀಳರಿಮೆ ಮೂಡುವುದಿಲ್ಲ’ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಗಜಾನನ ಮನ್ನಿಕೇರಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.