ಮೂಡಲಗಿ: ಕೂಲಿಕಾರ ಕಲ್ಲೋಳಿಯ ಹಣಮಂತ ಖಾನಟ್ಟಿ ಅವರ ಮಗಳು ಐಶ್ವರ್ಯ ಖಾನಟ್ಟಿ ಪ್ರಸಕ್ತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 99.68 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ.
ಕಲ್ಲೋಳಿಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿರುವ ಐಶ್ವರ್ಯ ಸಾಧನೆಗೆ ಇಡೀ ಶೈಕ್ಷಣಿಕ ವಲಯ ಮೆಚ್ಚುಗೆ ವ್ಯಕ್ತಪಡಿಸಿದೆ.
‘ನನ್ನ ಮಗಳು ಮಾಡಿರುವ ಸಾಧನೆಗೆ ಬಾಳ ಖುಷಿಯಾಗೆದ್ರೀ. ಬೇರೆಯೊಬ್ಬರ ಹೊಲದಲ್ಲಿ ಕೂಲಿ ಮಾಡಿಕೊಂಡು ಜೀವನಾ ಮಾಡಾತೀನ್ರಿ. ನನ್ನ ಪತ್ನಿ ಗಂಗವ್ವ ನನ್ನ ಜೊತೆಗೆ ಕೂಲಿಗೆ ಸಾಥ್ ನೀಡ್ತಾಳ್ರಿ. ಐಶ್ವರ್ಯ ಒಂದನೇ ತರಗತಿಯಿಂದ ಸರ್ಕಾರಿ ಶಾಲೆಯಲ್ಲಿ ಕಲತಾಳ್ರಿ’ ಎಂದು ತಂದೆ ಹಣಮಂತ ಖಾನಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಶಾಲೆಯಲ್ಲಿ ಹೇಳುವ ಪಾಠಗಳನ್ನು ಗಮನವಿಟ್ಟು ಆಲಿಸುತ್ತಿದ್ದೆ. ಪ್ರತಿ ದಿನ ತಪ್ಪದೇ ಆರು ಗಂಟೆ ಓದುವುದು. ಕೇಳಿರುವ ಪಾಠಗಳನ್ನು ಬರೆದು ತೆಗೆಯುವುದು. ಗೊತ್ತಿರದ ವಿಷಯವನ್ನು ಶಿಕ್ಷಕರಿಂದ ಕೇಳಿ ತಿಳಿದುಕೊಳ್ಳುತ್ತಿದ್ದೆ’ ಎಂದು ವಿದ್ಯಾರ್ಥಿನಿ ಐಶ್ಚರ್ಯ ಅನಿಸಿಕೆ ಹಂಚಿಕೊಂಡಳು.
‘ಶಾಲೆಯಲ್ಲಿಯ ಶಿಕ್ಷಕರ ಉತ್ತಮ ಮಾರ್ಗದರ್ಶನ ನನ್ನ ಸಾಧನೆಗೆ ಕಾರಣವಾಗಿದೆ. ನೀಟ್ ಪರೀಕ್ಷೆ ಬರೆದು ವೈದ್ಯಳಾಗಿ ಸಮಾಜ ಸೇವೆ ಮಾಡಬೇಕು ಎನ್ನುವ ಉದ್ಧೇಶವಿದೆ’ ಎಂದು ತಿಳಿಸಿದಳು.
‘ಐಶ್ವರ್ಯ ಕನ್ನಡದಲ್ಲಿ 125, ಗಣಿತ, ವಿಜ್ಞಾನ, ಹಿಂದಿ ವಿಷಯಗಳಲ್ಲಿ ನೂರಕ್ಕೆ ನೂರು, ಇಂಗ್ಲಿಷ್ ಮತ್ತು ವಿಜ್ಞಾನದಲ್ಲಿ 99 ಅಂಕಗಳನ್ನು ಪಡೆದುಕೊಂಡಿದ್ದಾಳೆ’ ಎಂದು ಕಲ್ಲೋಳಿ ಮೊರಾರ್ಜಿ ವಸತಿ ಶಾಲೆಯ ಪ್ರಾಚಾರ್ಯ ರಾಘವೇಂದ್ರ ಗಂಗರಡ್ಡಿ ತಿಳಿಸಿದರು.
‘ಐಶ್ವರ್ಯ 6ನೇ ತರಗತಿಯಿಂದ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಳು. ಸದ್ಯ ಅವಳು ರಾಷ್ಟ್ರೋತ್ಥಾನ ಪ್ರತಿಷ್ಠಾನದವರು ಮುಂದಿನ ಶಿಕ್ಷಣ ನೀಡುವುದಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.