ADVERTISEMENT

ಕೋವಿಡ್‌ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 13:41 IST
Last Updated 9 ಜುಲೈ 2020, 13:41 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಕೋವಿಡ್‌–19 ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ವೈದ್ಯರ ಕೊರತೆಯಿದೆ. ಕೆಲವು ಕಡೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ರೋಗಿಗಳು ರಸ್ತೆಯ ಮೇಲೆ ಬಿದ್ದಿರುವುದನ್ನು ನೋಡಿದ್ದೇವೆ. ಇದನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವಿವಿಧ ಸಂಘ– ಸಂಸ್ಥೆಗಳು, ನೌಕರರು, ಸಾರ್ವಜನಿಕರು ನೀಡಿದ ಸಾಕಷ್ಟು ಹಣ ಸರ್ಕಾರದ ಬಳಿ ಇದೆ. ಹಣದ ಕೊರತೆ ಇಲ್ಲ. ಈ ಹಣವನ್ನು ಉಪಯೋಗಿಸಿ, ಜನಪರ ಕೆಲಸ ಮಾಡಬೇಕು’ ಎಂದರು.

‘ಟೆಸ್ಟ್‌ಗೆ ₹ 4,500 ದರ ನಿಗದಿಪಡಿಸಿದ್ದಾರೆ. ಇಷ್ಟು ದುಡ್ಡು ಕೊಟ್ಟು ಮಾಡಿಸಲು ಶ್ರೀಮಂತರಿಗೇ ಸಾಧ್ಯವಾಗುವುದಿಲ್ಲ. ಇನ್ನು ಬಡವರಿಗೆ ದೂರದ ಮಾತು. ಸೂಕ್ತ ಚಿಕಿತ್ಸೆ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದರು.

ADVERTISEMENT

ಜನರಿಗೆ ತೊಂದರೆ:

‘ನಗರದಲ್ಲಿರುವ ಜಿಲ್ಲಾ ಮಟ್ಟದ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಿದರೆ ಜನರಿಗೆ ತೊಂದರೆಯಾಗುತ್ತದೆ. ಇವುಗಳನ್ನು ಸ್ಥಳಾಂತರಿಸಬಾರದು. ರಾಜ್ಯ ಮಟ್ಟದ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಿದರೆ ಅಧಿಕಾರಿಗಳು ಬರುವುದಿಲ್ಲ. ಹೀಗಾಗಿ ಏನೂ ಮಾಡಲಾಗದ ಸ್ಥಿತಿ ಇದೆ. ವರ್ಷಕ್ಕೊಮ್ಮೆ ಅಧಿವೇಶನ ನಡೆಸಬೇಕಷ್ಟೇ’ ಎಂದು ಹೇಳಿದರು.

ಆಣೆ ಮಾಡಿಸಿ: ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಮಧ್ಯೆ ನಡೆದಿರುವ ‘ಕುಕ್ಕರ್‌ ಫೈಟ್‌’ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕುಕ್ಕರ್‌ ಬಂದ್ ಮಾಡುವುದು ಚಾಲೂ ಮಾಡುವುದು ಎಲ್ಲ ನಿಮ್ಮ (ಮಾಧ್ಯಮ) ಕೈಯಲ್ಲಿ ಇದೆ’ ಎಂದರು.

‘ಇಬ್ಬರನ್ನೂ ಯಾವುದಾದರೂ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಆಣೆ ಪ್ರಮಾಣ ಮಾಡಿಸಿ. ಯಾರು ಸುಳ್ಳು ಹೇಳುತ್ತಿದ್ದಾರೆ, ಯಾರು ನಿಜ ಹೇಳುತ್ತಿದ್ದಾರೆ ಎನ್ನುವುದು ಗೊತ್ತಾಗಬೇಕಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.