ADVERTISEMENT

ಚಿಕಲೆ: ನಿಯಮ ಉಲ್ಲಂಘನೆ ನಿರಂತರ; ಜಲಪಾತದ ತುದಿಯಲ್ಲಿ ನಿಲ್ಲದ ರೀಲ್ಸ್‌ ಹುಚ್ಚಾಟ

ನಿಗದಿತ ಸ್ಥಳ ದಾಟಿ ವಾಹನ ಓಡಿಸುತ್ತಿರುವ ಪ್ರವಾಸಿಗರು,

ಸಂತೋಷ ಈ.ಚಿನಗುಡಿ
Published 16 ಆಗಸ್ಟ್ 2025, 2:42 IST
Last Updated 16 ಆಗಸ್ಟ್ 2025, 2:42 IST
ಖಾನಾಪುರ ತಾಲ್ಲೂಕಿನ ಚಿಕಲೆ ಜಲಪಾತದಲ್ಲಿ ಡ್ರೋನ್‌ ಹಾರಿಸಿದ ಪ್ರವಾಸಿಗರು
ಖಾನಾಪುರ ತಾಲ್ಲೂಕಿನ ಚಿಕಲೆ ಜಲಪಾತದಲ್ಲಿ ಡ್ರೋನ್‌ ಹಾರಿಸಿದ ಪ್ರವಾಸಿಗರು   

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಅರಣ್ಯದಲ್ಲಿರುವ ರುದ್ರರಮಣೀಯ ಜಲಪಾತವನ್ನು ಪ್ರವಾಸಿ ತಾಣವಾಗಿ ಪರಿಗಣಿಸಲಾಗಿದೆ. ಅರಣ್ಯದೊಳಗೆ ಪ್ರವೇಶಕ್ಕೆ ಅವಕಾಶ ಸಿಕ್ಕಿದ್ದೇ ಸಾಕು ಎಂಬಂತೆ ವರ್ತಿಸುತ್ತಿರುವ ಹಲವು ಪ್ರವಾಸಿಗರು ಕಾರು, ಬೈಕುಗಳನ್ನ ಜಲಪಾತದ ಬಳಿಯೇ ಒಯ್ಯುತ್ತಿದ್ದಾರೆ. ಮತ್ತೆ ಕೆಲವರು ಡ್ರೋನ್‌ ಹಾರಿಸಿ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ.

ಬೆಳಗಾವಿ ಪ್ರಾದೇಶಿಕ ಅರಣ್ಯ ವಿಭಾಗದ ಕಣಕುಂಬಿ ಪ್ರಾದೇಶಿಕ ವಲಯಕ್ಕೆ ಸೇರಿದ ಚಿಕಲೆ ಜಲಪಾತ ಹೆಚ್ಚು ಆಕರ್ಷಕವಾಗಿದೆ. ಹೀಗಾಗಿ, ಪ್ರವಾಸಿಗರ ಸಂಖ್ಯೆಯೂ ದೊಡ್ಡದು. ಖಾನಾಪುರ ತಾಲ್ಲೂಕಿನ ಅರಣ್ಯದಲ್ಲಿ ಸಾಕಷ್ಟು ಜಲಪಾತಗಳಿವೆ. ಆದರೆ, ಎಲ್ಲ ಕಡೆ ಪ್ರವೇಶವಿಲ್ಲ. ಚಿಕಲೆ ಜಲಪಾತವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ಅರಣ್ಯ ಇಲಾಖೆಯೇ ಪ್ರವೇಶಾವಕಾಶ ನೀಡಿದೆ. ಶುಲ್ಕವನ್ನೂ ಆಕರಿಸಲಾಗುತ್ತಿದೆ. ಆದರೆ, ಪ್ರವಾಸಿಗರು ಇಲಾಖೆಯ ನಿಯಮಗಳನ್ನು ಮೀರುವುದು ನಿರಂತರವಾಗಿ ನಡೆದಿದೆ.

ಇದು ತುಂಬ ಕಡಿದಾದ ಜಲಪಾತ. ಅಪಾಯಕಾರಿ ಕಂದಕಗಳಿವೆ. ಯಾವಾಗಲೂ ದಟ್ಟ ಮಂಜು ಕವಿದಿರುತ್ತದೆ. ಜಲಪಾತದ ಪ್ರದೇಶದಲ್ಲಿ ಅಪಾರ ಸಂಖ್ಯೆಯ ವನ್ಯಜೀವಿಗಳು, ಸಸ್ಯ ಸಂಕುಲವಿದೆ. ಇದಕ್ಕೆ ಹಾನಿ ಆಗದಂತೆ ನೋಡಿಕೊಳ್ಳುವುದು ಇಲಾಖೆ ಜವಾಬ್ದಾರಿ. ಇದೇ ಕಾರಣಕ್ಕೆ ಜಲಪಾತದ ಸಮೀಪ ವಾಹನ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರವಾಸಿಗರು ತುತ್ತತುದಿಗೆ ನಡೆದುಕೊಂಡೂ ಹೋಗಬಾರದು. ಡ್ರೋನ್‌ಗಳನ್ನು ಹಾರಿಸಬಾರದು ಎಂಬ ನಿಯಮಗಳಿವೆ. ಆದರೆ, ಇಲ್ಲಿ ಯಾವುದೂ ಪಾಲನೆ ಆಗುತ್ತಿಲ್ಲ ಎಂಬುದು ಪರಿಸರ ಪ್ರಿಯರ ತಕರಾರು.

ADVERTISEMENT

ಅಪಾಯಕಾರಿ ಸ್ಥಳಕ್ಕೆ ಹೋಗದಂತೆ ಅರಣ್ಯ ಇಲಾಖೆಯಿಂದ ನಿರ್ಮಿಸಿದ ಸುರಕ್ಷತಾ ಬೇಲಿ (ಫೆನ್ಸಿಂಗ್) ಕಿರಿದಾಗಿದೆ. ಈ ಬೇಲಿ ಯಾರು ಬೇಕಾದರೂ ದಾಟಿಕೊಂಡು ಹೋಗುವಂತಿದೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ತುದಿಗೆ ಹೋಗಿ ಫೋಟೊ, ವಿಡಿಯೊ ಮಾಡಿಕೊಳ್ಳುವುದು, ಹಾಡು ಹಾಕಿ ಕುಣಿಯುವುದು, ರೀಲ್ಸ್‌ ಮಾಡುವುದು ನಡೆದೇ ಇದೆ. ಇದನ್ನು ತಡೆಯಲು ಎತ್ತರದ ತಂತಿಬೇಲಿ ನಿರ್ಮಿಸಬೇಕು ಎಂಬ ಕುರಿತು ‘ಪ್ರಜಾವಾಣಿ’ ಗಮನ ಸೆಳೆದರೂ ಅಧಿಕಾರಿಗಳು ಕ್ರಮ ವಹಿಸಿಲ್ಲ.

ಖಾನಾಪುರ ತಾಲ್ಲೂಕಿನ ಚಿಕಲೆ ಜಲಪಾತದ ಬಳಿ ನಿಯಮ ಮೀರಿ ಪ್ರವೇಶ ಮಾಡಿದ ವಾಹನ

ನಿಲ್ಲದ ಡ್ರೋನ್‌ ಬಳಕೆ

ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಡ್ರೋನ್‌ ಹಾರಿಸಲು ನಿಷೇಧವಿದೆ. ಆದರೆ ಚಿಕಲೆ ಜಲಪಾತದ ಸೌಂದರ್ಯ ಸೆರೆ ಹಿಡಿಯುವ ಉದ್ದೇಶದಿಂದ ಕೆಲ ಯುವಕರು ಡ್ರೋನ್‌ ಹಾರಿಸುವುದು ನಡೆದೇ ಇದೆ. ಇದರ ವಿಡಿಯೊ ಫೋಟೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿಯೂ ಹಾಕಿಕೊಂಡ ಉದಾಹಣೆಗಳಿವೆ. ಕೆಲವರು ದುಬಾರಿ ಕಾರುಗಳನ್ನು ಜಲಪಾತದ ಹತ್ತಿರದವರೆಗೆ ನಿಷೇಧಿತ ಪ್ರದೇಶವನ್ನೂ ದಾಟಿ ಓಡಿಸಿಕೊಂಡು ಹೋಗಿದ್ದಾರೆ. ರಾಜಾರೋಷವಾಗಿ ಫೋಟೊ ಶೂಟ್‌ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅ‍ಪ್ಲೋಡ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.