ಕೌಜಲಗಿ: ಗೋಕಾಕ ತಾಲ್ಲೂಕಿನ ಅತಿ ದೊಡ್ಡ ಗ್ರಾಮವಾದ ಕೌಜಲಗಿ ಹೋಬಳಿ ಕೇಂದ್ರವೂ ಆಗಿದೆ. ಶಿಕ್ಷಣ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಬೆಳವಣಿಗೆ ಕಂಡರೂ, ಮೂಲಸೌಕರ್ಯಗಳಲ್ಲಿ ಮಾತ್ರ ಹಿಂದೆ ಬಿದ್ದಿದೆ. ಈ ಊರಿನ ರಸ್ತೆಗಳು, ಬಸ್ ನಿಲ್ದಾಣ, ಗ್ರಂಥಾಲಯಗಳ ಸ್ಥಿತಿಯೇ ಇದಕ್ಕೆ ಕನ್ನಡಿ ಹಿಡಿಯುತ್ತದೆ.
ಗ್ರಾಮದ ಪ್ರತಿಯೊಂದು ರಸ್ತೆ ದುರವಸ್ಥೆಯಿಂದ ಕೂಡಿದೆ. ಮಳೆಗಾಲದಲ್ಲಂತೂ ವಯಸ್ಸಾದವರು ಮತ್ತು ಚಿಕ್ಕ ಮಕ್ಕಳು ಮನೆಯನ್ನು ಬಿಟ್ಟು ಬರುವ ಹಾಗಿಲ್ಲ. ಬಸವೇಶ್ವರ ಪೇಟೆಯ ರಸ್ತೆಗೆ ಬಹಳ ವರ್ಷಗಳ ಹಿಂದೆ ಸಿಮೆಂಟ್ ಹಾಕಿದ್ದು, ಎಲ್ಲವೂ ಕಿತ್ತುಹೋಗಿದೆ. ತಗ್ಗುಗಳಲ್ಲಿ ನೀರು ಸಂಗ್ರಹಗೊಂಡು ಹಂದಿ, ನಾಯಿ, ಬಿಡಾಡಿ ದನಗಳಿಗೆ ಈಜುಗೊಳ ನಿರ್ಮಾಣವಾಗಿವೆ.
ಗ್ರಾಮ ಪಂಚಾಯಿತಿಯ ಕೆಲ ಸದಸ್ಯರ ಮನೆಗಳ ಮುಂದೆಯೂ ರಸ್ತೆ ಹಾಳಾಗಿದೆ. ಆದರೂ ಕಣ್ಣೆತ್ತಿ ನೋಡಲು ಸಿದ್ಧರಿಲ್ಲ. ರೈತಾಪಿ ಜನ ದಿನವೂ ಎತ್ತು ಚಕ್ಕಡಿ ಓಡಿಸಿಕೊಂಡು ಹೋಗುವುದು ಕಷ್ಟವಾಗಿದೆ. ದನಕರುಗಳಿಗೆ ಸೈಕಲ್, ಬೈಕುಗಳ ಮೇಲೆ ಮೇವಿನ ಹೊರೆ ತರುವುದು ಸರ್ಕಸ್ ಮಾಡಿದಂತೆಯೇ ಸರಿ.
ಇನ್ನೊಂದೆಡೆ, ಗ್ರಾಮ ಪಂಚಾಯಿತಿ ಮುಂದಿರುವ ಚರಂಡಿಗಳೇ ದುರ್ಗಂಧ ಬೀರುತ್ತಿವೆ. ಬಸ್ ನಿಲ್ದಾಣದಲ್ಲೂ ಸಾಕಷ್ಟು ತ್ಯಾಜ್ಯ ಸಂಗ್ರಹವಾಗಿದೆ. ಆದರೆ, ಅಧಿಕಾರಿಗಳು ಶುಚಿತ್ವಕ್ಕೆ ಗಮನ ಹರಿಸಿಲ್ಲ. ಶಾಲೆ– ಕಾಲೇಜಿಗೆ ಹೋಗಬೇಕಾದ ವಿದ್ಯಾರ್ಥಿಗಳು ದಿನವೂ ದುರ್ನಾತದ ಸಂಕಷ್ಟ ಎದುರಿಸುವುದು ಸಾಮಾನ್ಯವಾಗಿದೆ.
ಬೇಕಿದೆ ಸ್ವಚ್ಛ ನೀರು: ಗ್ರಾಮದ ಜನರ ಕುಡಿಯುವ ನೀರಿಗಾಗಿ ‘ಮಹಲಗುಂಡ’ ಎಂಬ ಒಂದೇ ಬಾವಿ ಇದೆ. ಮೊದಲು ಗ್ರಾಮಸ್ಥರು ಈ ಬಾವಿಯಿಂದ ನೀರನ್ನು ಸೇದಿಕೊಂಡು ಕುಡಿಯಲು ಬಳಸುತ್ತಿದ್ದರು. ಈಗ ಕೆಲವೇ ಕೆಲವರಿಗೆ ಮಾತ್ರ ಈ ಬಾವಿಯ ನೀರು ಪೂರೈಕೆಯಾಗುತ್ತಿದೆ. ಕೆಲವು ಓಣಿಯ ಜನತೆಗೆ ಪೂರೈಕೆ ಸರಿಯಾಗಿ ಆಗುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ.
ಶುಕ್ರವಾರ ವಾರದ ಸಂತೆಯಲ್ಲಿ ಅತ್ಯಂತ ಜನದಟ್ಟನೆ ಆಗುತ್ತದೆ. ದ್ವಿಚಕ್ರವಾಹನಗಳನ್ನು ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸಲಾಗುತ್ತದೆ. ಇದರಿಂದ ವ್ಯಾಪಾರಿಗಳಿಗೂ, ಗ್ರಾಹಕರಿಗೂ ಸಂಕಷ್ಟ ತಪ್ಪಿಲ್ಲ. ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಆಡಳಿತದವರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಗೋಜಿಗೂ ಹೋಗಿಲ್ಲ.
ಗ್ರಾಮದ ವ್ಯಾಪ್ತಿ ದೊಡ್ಡದಾಗಿದೆ. ತಾಲ್ಲೂಕು ಕೇಂದ್ರವಾಗುವಷ್ಟು ವಿಶಾಲವಾಗಿದೆ. ಸಾರ್ವಜನಿಕ ಶಾಂತಿ– ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಅದಕ್ಕಾಗಿ ಒಂದು ಪ್ರತ್ಯೇಕ ಪೊಲೀಸ್ ಠಾಣೆಗೆ ಮಂಜೂರು ಮಾಡಬೇಕು ಎಂಬ ದಶಕದ ಬೇಡಿಕೆಗೂ ಸರ್ಕಾರ ಸ್ಪಂದಿಸಿಲ್ಲ. ಇದರಿಂದ ಅಕ್ರಮ ಹಾಗೂ ಅಪರಾಧ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ ಎಂಬುದು ಜನರ ಆರೋಪ.
ಕೌಜಲಗಿಯ ಕೆಲವು ಓಣಿಗಳಲ್ಲಿ ಗಟಾರು ರಸ್ತೆಗಳ ಸ್ವಚ್ಛತೆ ಮಾಡಿಲ್ಲ. ಇದರಿಂದ ಮಲಿನ ವಾತಾವರಣದಿಂದ ರೋಗ ಹರಡಬಹದು
–ಮಾರುತಿ ಭಜಂತ್ರಿ ಗ್ರಾಮಸ್ಥ
ಗ್ರಾಮದ ಎಲ್ಲ ರಸ್ತೆಗಳಲ್ಲಿ ಸಿಮೆಂಟ್ ರಸ್ತೆಗಳು ನಿರ್ಮಾಣವಾದರೆ ವಾಹನ ಸಂಚಾರಕ್ಕೆ ಅನುಕೂಲವಾಗುತ್ತದೆ. ಪ್ರಮುಖ ರಸ್ತೆಗಳ ವಿಸ್ತರಣೆಯೂ ಅಗತ್ಯ
– ಅಜಯ ಲೋಕನ್ನವರ ಗ್ರಾಮಸ್ಥ
ಮೂಲಸೌಕರ್ಯಕ್ಕೆ ಆದ್ಯತೆ: ಪಿಡಿಒ ‘ಗ್ರಾಮದ ಮೂಲ ಸೌಕರ್ಯಗಳಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತಿದ್ದೇವೆ. ಸ್ವಚ್ಛತೆ ಮತ್ತು ಕುಡಿಯುವ ನೀರಿಗಾಗಿ ಹೆಚ್ಚಿನ ಗಮನಹರಿಸುತ್ತೇವೆ’ ಎಂದು ಪಿಡಿಪ ಪರಶುರಾಮ ಇಟಗೌಡರ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಸರ್ಕಾರಿ ಆಸ್ಪತ್ರೆ ಮತ್ತು ಪಶು ಆಸ್ಪತ್ರೆ ವೈದ್ಯರು ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಾರ್ವಜನಿಕರಿಗೆ ಸೂಕ್ತವಾದ ಮಾಹಿತಿಗಳನ್ನು ಒದಗಿಸಿಕೊಡುತ್ತಿಲ್ಲ. ಆಸ್ಪತ್ರೆಗಳಲ್ಲಿ ಕೆಲ ಅಕ್ರಮಗಳು ನಡೆದ ಸಂಶಯವಿದೆ. ಅಧಿಕಾರಿಗಳ ಗಮನಹರಿಸಬೇಕು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸಂಜೀವ ಮಿರ್ಜಿ ಆಗ್ರಹಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.