ADVERTISEMENT

ಹುಣಸೆ ಮರದ ನೆರಳಿಗೂ ಮುಪ್ಪಿಲ್ಲ...

ಚಿಕ್ಕೋಡಿ– ಪ್ರಯಾಣಿಕರ ಬಿಸಿಲಿನ ತಾಪ ಕಳೆಯುವ ರಸ್ತೆ ಬದಿಯ ಹುಣಸೆ ಮರಗಳು

​ಪ್ರಜಾವಾಣಿ ವಾರ್ತೆ
Published 11 ಮೇ 2025, 4:27 IST
Last Updated 11 ಮೇ 2025, 4:27 IST
ಚಿಕ್ಕೋಡಿ ಪಟ್ಟಣದ ಹೊರವಲಯದ ಚನ್ನವರ ಕ್ರಾಸ್ ಬಳಿಯ ರಸ್ತೆಯ ಇಕ್ಕೆಲಗಳಲ್ಲಿ ಹಸಿರು ಹೊದಿಕೆಯಂತೆ ಕಾಣುತ್ತಿರುವ ಹುಣಸೆ ಮರಗಳು
ಚಿಕ್ಕೋಡಿ ಪಟ್ಟಣದ ಹೊರವಲಯದ ಚನ್ನವರ ಕ್ರಾಸ್ ಬಳಿಯ ರಸ್ತೆಯ ಇಕ್ಕೆಲಗಳಲ್ಲಿ ಹಸಿರು ಹೊದಿಕೆಯಂತೆ ಕಾಣುತ್ತಿರುವ ಹುಣಸೆ ಮರಗಳು   

ಚಿಕೋಡಿ: ಪಟ್ಟಣದ ಹೊರವಲಯದ ಚನ್ನವರ ಕ್ರಾಸ್ ಬಳಿಯಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಸೊಂಪಾಗಿ ಬೆಳೆದ ನೂರಾರು ಹುಣಸೆ ಮರಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಚಿಕ್ಕೋಡಿ- ಸಂಕೇಶ್ವರ ಹಾಗೂ ಚಿಕ್ಕೋಡಿ- ಹುಕ್ಕೇರಿ ರಸ್ತೆಗಳು ಕೂಡುವ ಈ ಪ್ರದೇಶ ಬೇಸಿಗೆಯಲ್ಲೂ ತಂಪಾಗಿ ಹಾಯಾದ ವಾತಾವರಣ ಹೊಂದಿದೆ. ರಸ್ತೆಯ ಇಕ್ಕೆಲಗಳಲ್ಲಿ ಅಂದವಾಗಿ ಕಾಣಿಸುವ ಈ ರಸ್ತೆಯಲ್ಲಿ ಓಡಾಡುವುದೇ ಚೆಂದ.

ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯದ ವಿವಿಧ ನಗರ ಪಟ್ಟಣಗಳಿಗೆ ಈ ರಸ್ತೆಯ ಮೂಲಕ ಸಂಚರಿಸುವ ಬಹುತೇಕ ಪ್ರಯಾಣಿಕರು ಇಲ್ಲಿ ವಿರಮಿಸಿಯೇ ಮುಂದೆ ಸಾಗುವುದು ರೂಢಿ. ಅಂದಾಜು 300 ವರ್ಷಗಳಷ್ಟು ಹಳೆಯದಾಗಿರುವ ನೂರಾರು ಹುಣಸೆ ಮರಗಳು ಚಪ್ಪರದಂತೆ ರಸ್ತೆಯ ಮೇಲೆ ಚಾಚಿಕೊಂಡಿದ್ದರಿಂದ ಇಲ್ಲಿ ಸದಾ ನೆರಳು ಇರುತ್ತದೆ. ಬೇಸಿಗೆಯ ಬಿಸಿಲ ಝಳ ಹೆಚ್ಚಿದ್ದರೂ ಈ ಪ್ರದೇಶದಲ್ಲಿ ಪ್ರಯಾಣಿಕರಿಗೆ ತಂಪಾದ ಅನುಭವವಾಗುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರು ಇಲ್ಲಿ ಸ್ವಲ್ಪ ಹೊತ್ತು ಕುಳಿತು, ವಿಶ್ರಾಂತಿ ಪಡೆದು ಮುಂದೆ ಸಾಗುತ್ತಾರೆ. ಹೀಗಾಗಿ ಇಲ್ಲಿ ಎಳನೀರು, ಕಲ್ಲಂಗಡಿ, ತಂಪು ಪಾನೀಯ ಮಾರಾಟ ಮಾಡುವ ಅಂಗಡಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಇಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಮಾಡಿಕೊಡಬೇಕು ಎಂಬುದು ಪ್ರಯಾಣಿಕರ ಬೇಡಿಕೆ.

ADVERTISEMENT

ಹುಣಸೆ ಮರಗಳು ದಟ್ಟವಾಗಿ ಬೆಳೆದ ಕಾರಣ ಹೆಚ್ಚಿನ ನೆರಳು ರಸ್ತೆಯ ಮೇಲೆ ಬೀಳುತ್ತದೆ. ಹಿಂದೆ ಬಹುತೇಕರು ಚಕ್ಕಡಿ ಗಾಡಿ, ಕುದುರೆ ಮೇಲೆ, ನಡೆದುಕೊಂಡು ಹೋಗುವವರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಬಹುತೇಕ ಕಡೆಗೆ ರಸ್ತೆಯ ಇಕ್ಕೆಲಗಳಲ್ಲಿ ಇಂತಹ ಮರಗಳನ್ನು ದಟ್ಟವಾಗಿ ಬೆಳೆಸಲಾಗುತ್ತಿತ್ತು. ಹಾಗೆ ಬೆಳೆಸಿದ ಮರಗಳೇ ಇಂದು ಬಿಸಿಲಿನ ತಾಪಕ್ಕೆ ಕೊಡೆ ಹಿಡಿದಂತಾಗಿದೆ.

ನಿಪ್ಪಾಣಿ– ಮುಧೋಳ ರಾಜ್ಯ ಹೆದ್ದಾರಿ ನಿರ್ಮಾಣಕ್ಕೂ ಮೊದಲು ಚಿಕ್ಕೋಡಿ– ನಿಪ್ಪಾಣಿ ನಡುವೆ ಸಹಸ್ರಾರು ಮರಗಳು ಪ್ರಯಾಣಿಕರಿಗೆ ನೆರಳು ನೀಡುತ್ತಿದ್ದವು. ಆದರೆ 2012–13ರಲ್ಲಿ ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮರಗಳ ಹನನ ಮಾಡಿದ್ದರಿಂದ ಇದೀಗ ನಿಪ್ಪಾಣಿ– ಮುಧೋಳ ಹೆದ್ದಾರಿಯ ಮೇಲೆ ಬೇಸಿಗೆ ಕಾಲದಲ್ಲಿ ಪ್ರಯಾಣ ಮಾಡುವುದು ಕಾದ ಕೆಂಡದ ಮೇಲೆ ನಡೆದಂತಹ ಅನುಭವವಾಗುತ್ತದೆ.

ಈಗಾಗಲೇ ರಾಷ್ಟ್ರೀಯ ಹೆದ್ದಾರಿ 548ಬಿ ಚಿಕ್ಕೋಡಿ ಬೈಪಾಸ್‌ನಿಂದ ಗೋಟೂರದವರೆಗೆ ₹941.61 ಕೋಟಿ ವೆಚ್ಚದಲ್ಲಿ 27.12 ಕಿ.ಮೀ ಉದ್ದದ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯು ಪ್ರಾರಂಭವಾಗಲಿದ್ದು, ನಿಪ್ಪಾಣಿ– ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಮರಗಳಿಗೆ ಕೊಡಲಿ ಪೆಟ್ಟು ಬಿದ್ದಂತೆ ಇಲ್ಲಿಯೇ ಆಗುವುದು ಬೇಡ ಎಂಬುವುದು ಪರಿಸರ ಪ್ರಿಯರ ಆಶಯ.

ಚಿಕ್ಕೋಡಿ ಪಟ್ಟಣದ ಚನ್ನವರ ಕ್ರಾಸ್‌ನಲ್ಲಿರುವ ಹುಣಸೆ ಮರಗಳ ನೆರಳಿನಲ್ಲಿ ಪ್ರಯಾಣಿಕರು ಆಶ್ರಯ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.