ADVERTISEMENT

ವಿದ್ಯುತ್ ತಗುಲಿ ಶಾಲಾ ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 5:05 IST
Last Updated 5 ಜುಲೈ 2022, 5:05 IST
ಅನುಷ್ಕಾ ಭೇಂಡೆ
ಅನುಷ್ಕಾ ಭೇಂಡೆ   

ನಿಪ್ಪಾಣಿ: ತಾಲೂಕಿನ ಡೋಣೆವಾಡಿ ಗ್ರಾಮದ ಪ್ರಾಥಮಿಕ ಮರಾಠಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅನುಷ್ಕಾ ಸದಾಶಿವ ಭೇಂಡೆ(9) ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೆ ಮೃತಪಟ್ಟಿದ್ದಾಳೆ.

ವಿಷಯ ತಿಳಿದು ಸದಲಗಾ ಠಾಣೆಯ ಪೊಲೀಸರು ಹಾಗೂ ಭೋಜ ಹೆಸ್ಕಾಂ ಅಧಿಕಾರಿಗಳು ಬಂದು ಪಂಚನಾಮೆ ನಡೆಸಿದರು. ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ ಶಿಕ್ಷಣ ಇಲಾಖೆಯಿಂದ ಪೋಷಕರಿಗೆ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ಈ ಘಟನೆಯಿಂದ ಆಕ್ರೋಶಗೊಂಡ ಪೋಷಕರು ಹಾಗೂ ಸ್ಥಳೀಯರು ಶಾಲೆಯ ಮುಖ್ಯಶಿಕ್ಷಕರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾಲಕಿತ ತಂದೆ ಸದಾಶಿವ ಭೆಂಡೆ ಆಗ್ರಹಿಸಿದ್ದಾರೆ.

ADVERTISEMENT

ಘಟನೆಯ ವಿವರ:ಎಂದಿನಂತೆ ಊಟದ ವಿರಾಮದ ನಂತರ ಬಾಲಕಿ ಅನುಷ್ಕಾ ಬಾತ್ ರೂಮಿಗೆ ಹೋಗುವಾಗ ಅಲ್ಲಿದ್ದ ದೂರವಾಣಿ ಕಂಬವನ್ನು ಮುಟ್ಟಿದ್ದಾಳೆ. ಈ ಕಂಬಕ್ಕೆ ಮನೆಗೆ ಸಂಪರ್ಕಿಸುವ ವಿದ್ಯುತ್ ತಂತಿಯನ್ನು ಕಟ್ಟಲಾಗಿತ್ತು. ವಿದ್ಯುತ್ ತಂತಿ ತುಂಡಾಗಿದ್ದರಿಂದ ಕಂಬಕ್ಕೆ ವಿದ್ಯುತ್ ಹರಿದು ಬಾಲಕಿಗೆ ಆಘಾತಕ್ಕೊಳಗಾಗಿದ್ದಾಳೆ. ಬಾಲಕಿ ನರಳಾಡುತ್ತಿರುವುದನ್ನು ಕಂಡ ಇನ್ನುಳಿದ ಬಾಲಕಿಯರು ಕೂಡಲೇ ಶಾಲೆಯ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ.

ಶಿಕ್ಷಕರು ಮತ್ತು ಕೆಲ ನಾಗರಿಕರು ಸ್ಥಳಕ್ಕೆ ಬಂದು ಬಾಲಕಿಯನ್ನು ರಕ್ಷಿಸಲು ಪ್ರಯತ್ನಿಸಿದರು. ಕೊನೆಗೆ ಇಡೀ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಬಾಲಕಿಯನ್ನು ಕಂಬದಿಂದ ಬೇರ್ಪಡಿಸಲಾಯಿತಾದರೂ ಅಷ್ಟರಲ್ಲಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದಳು.

‘ಮುಖ್ಯಶಿಕ್ಷಕರೇ ಈ ಘಟನೆಗೆ ಕಾರಣ, ಅವರನ್ನು ಕೂಡಲೇ ವಜಾಗೊಳಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು. ರೊಚ್ಚಿಗೆದ್ದ ಜನರನ್ನು ಶಾಂತಗೊಳಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ, ಮುಖ್ಯ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿ ಪರಿಸ್ಥಿತಿ ಹತೋಟಿಗೆ ತಂದರು. ಬಾಲಕಿಯ ಪೋಷಕರು, ಸಹೋದರರು ಮತ್ತು ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.