ADVERTISEMENT

ಕಲಾವಿದರ ಬಗ್ಗೆ ಕೀಳು ಮಟ್ಟದ ಹೇಳಿಕೆ ಸಲ್ಲ: ಡಿ.ಕೆ.ಶಿ ಹೇಳಿಕೆಗೆ ಹೊರಟ್ಟಿ ಅಸಮಾಧ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 19:11 IST
Last Updated 7 ಜುಲೈ 2019, 19:11 IST
ಬೆಳಗಾವಿಯಲ್ಲಿ ಭಾನುವಾರ ಏರ್ಪಡಿಸಿದ್ದ ಗಡಿನಾಡು ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನವನ್ನು ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಹಾಗೂ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಕೆ.ಎಲ್. ಕುಂದರಗಿ, ಶಶಿಧರ ಘೀವಾರಿ ಇದ್ದಾರೆ
ಬೆಳಗಾವಿಯಲ್ಲಿ ಭಾನುವಾರ ಏರ್ಪಡಿಸಿದ್ದ ಗಡಿನಾಡು ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನವನ್ನು ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಹಾಗೂ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಕೆ.ಎಲ್. ಕುಂದರಗಿ, ಶಶಿಧರ ಘೀವಾರಿ ಇದ್ದಾರೆ   

ಬೆಳಗಾವಿ: ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ. ಶಿವಕುಮಾರ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಕಲಾವಿದರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಗಡಿನಾಡು ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ಕಲಾವಿದರು ಹಾಗೂ ಸಂಘಟನೆಗಳ ಸದಸ್ಯರು ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಂತವರನ್ನು ಮಟ್ಟ ಹಾಕುತ್ತೇನೆ ಎಂಬ ಸಚಿವರ ಹೇಳಿಕೆಯನ್ನು ಖಂಡಿಸಿ ನಾನು ಪತ್ರ ಬರೆದು ಹೇಳಿಕೆ ಹಿಂಪಡೆಯುವಂತೆ ಒತ್ತಾಯಿಸಿದ್ದೆ. ತಡೆಹಿಡಿಯಲಾಗಿದ್ದ ಕಲಾವಿದರ ಅನುದಾನವನ್ನು ಪುನಾರಂಭಿಸುವಂತೆಯೂ ಸೂಚಿಸಿದ್ದೆ’ ಎಂದು ತಿಳಿಸಿದರು.

ADVERTISEMENT

ಸಂಘ–ಸಂಸ್ಥೆಗಳಿಗೆ ನೆರವು ಅಗತ್ಯ:

‘ಇಂದಿಗೂ ಗಡಿ ಪ್ರದೇಶಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಮೂಲ ಸೌಕರ್ಯಗಳ ಕೊರತೆ ಗಡಿಭಾಗಗಳ ಪ್ರಮುಖ ಸಮಸ್ಯೆಯಾಗಿದೆ. ಸಮ್ಮೇಳನಗಳ
ಮೂಲಕ ಗಡಿನಾಡಿನ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು. ರಾಜ್ಯ ಸರ್ಕಾರ ಗಡಿಭಾಗದ ಸಮಸ್ಯೆಗಳನ್ನು ನಿವಾರಿಸುವುದರ ಜೊತೆಗೆ ಗಡಿಭಾಗದಲ್ಲಿನ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವ ಹಾಗೂ ಭಾಷೆಯ ಬೆಳವಣಿಗೆಗೆ ಶ್ರಮಿಸುತ್ತಿರುವ ಸಂಘ–ಸಂಸ್ಥೆಗಳಿಗೆ ಕಡ್ಡಾಯವಾಗಿ ಹಣಕಾಸಿನ ನೆರವು ನೀಡಬೇಕು’ ಎಂದು ಒತ್ತಾಯಿಸಿದರು.

‘ಮಕ್ಕಳ ಭವಿಷ್ಯಕ್ಕಾಗಿ ತಂದೆ–ತಾಯಿ ಏನೆಲ್ಲ ತ್ಯಾಗ ಮಾಡುತ್ತಾರೆ. ಆದರೆ, ದೊಡ್ಡವರಾದ ನಂತರ ಮಕ್ಕಳು ಪಾಲಕರನ್ನು ಮರೆಯುತ್ತಿದ್ದಾರೆ. ಪಾಲಕರನ್ನು ವೃದ್ಧಾಶ್ರಮಗಳಿಗೆ ಕಳುಹಿಸುತ್ತಿದ್ದಾರೆ. ಇದು ನಿಲ್ಲಬೇಕು, ದೊಡ್ಡವರಾದ ನಂತರ ಮಕ್ಕಳು ತಂದೆ–ತಾಯಿಗಳ ಪಾಲಕರಾಗಬೇಕು. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕೃತಿ ಮತ್ತು ಸೇವಾ ಮನೋಭಾವ ಕಲಿಸಬೇಕು. ಎಂದು ಹೇಳಿದರು.

ಸೌಹಾರ್ದಯುತವಾಗಿ ಅನುಷ್ಠಾನಗೊಳಿಸಿ:

ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದಹಿರಿಯ ಸಾಹಿತಿ ಹಾಗೂ ನಾಟಕಕಾರ ಕೆ.ಎಲ್. ಕುಂದರಗಿ, ‘ಗಡಿ ಭಾಗದಲ್ಲಿ ನಾಡಿನ ಭಾಷೆ ಮತ್ತೊಬ್ಬರಿಗೆ ಹಿಂಸೆಯಾಗಬಾರದು. ಅನ್ಯ ಭಾಷಿಕರ ಹೃದಯ ಗೆಲ್ಲುವ ಮೂಲಕ ಕನ್ನಡ ಭಾಷೆಯನ್ನು ಸೌಹಾರ್ದಯುತವಾಗಿ ಅನುಷ್ಠಾನಗೊಳಿಸಬೇಕು’ ಎಂದು ಸಲಹೆ ನೀಡಿದರು.

‘ಮಾತೃ ಭಾಷೆ ತಾಯಿ ಇದ್ದಂತೆ. ಅನ್ಯ ಭಾಷೆ ಚಿಕ್ಕಮ್ಮನಂತೆ. ಎರಡು ಭಾಷೆಗಳ ನಡುವೆ ಸೌಹಾರ್ದತೆ ಇರಬೇಕು. ಮಾತೃ ಭಾಷೆಯಿಂದ ಸಿಗುವ ಜ್ಞಾನವು ಬೇರೆ ಭಾಷೆಯಿಂದ ಸಿಗುವುದಿಲ್ಲ. ಮಾತೃ ಭಾಷೆಯು ನಮ್ಮ ಹೃದಯವನ್ನು ನಾಟುತ್ತದೆ. ಕನ್ನಡ ಭಾಷೆ ಕೇವಲ ಭಾಷಣಕ್ಕೆ ಸೀಮಿತವಾಗದೇ ಆಚರಣೆಗೆ ಬರಬೇಕು’ ಎಂದರು.

ಪ್ರಶಸ್ತಿ ಪ್ರದಾನ:
ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಪ್ರೊ.ಎಸ್.ಎಂ. ಹುರಕಡ್ಲಿ,ಚಲನಚಿತ್ರ ನಟಿ ಅಂಜಲಿ ಕಾಂಬಳೆ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಪ್ರತಿಷ್ಠಾನದ ಸದ್ಯರಾದ ರುದ್ರಣ್ಣ ಚಂದರಗಿ, ವಿ.ಬಿ. ದೊಡಮನಿ, ಆಶಾ ಯಮಕನಮರಡಿ, ನಿರ್ಮಲಾ ಬಟ್ಟಲ ಇದ್ದರು.ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ ಸ್ವಾಗತಿಸಿದರು. ವಿಜಯಲಕ್ಷ್ಮಿ ಪುಟ್ಟಿ ನಿರೂಪಿಸಿದರು. ಮೈತ್ರೇಯಿಣಿ ಗದಿಗೆಪ್ಪಗೌಡರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.