ADVERTISEMENT

ಕಬ್ಬಿಗೆ ಪರ್ಯಾಯವಾಗಿ ಸಕ್ಕರೆ ಗಡ್ಡೆ; ನಡೆದಿವೆ ಪ್ರಯೋಗಗಳು

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 20:15 IST
Last Updated 30 ಜನವರಿ 2020, 20:15 IST
ಸಕ್ಕರೆ ಗಡ್ಡೆ
ಸಕ್ಕರೆ ಗಡ್ಡೆ   

ಬೆಳಗಾವಿ: ‘ಕಬ್ಬಿಗೆ ಪರ್ಯಾಯವಾಗಿ ಸಕ್ಕರೆ ಗಡ್ಡೆಯನ್ನು (ಷುಗರ್‌ ಬೀಟ್‌) ಬೆಳೆಸಬಹುದೇ ಎನ್ನುವ ಕುರಿತು ಬೆಳಗಾವಿಯ ಎಸ್‌.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಸೇರಿದಂತೆ ದೇಶದ ವಿವಿಧೆಡೆ ಪ್ರಯೋಗಗಳು ನಡೆಯುತ್ತಿವೆ’ ಎಂದು ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶದ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ ದಳವಾಯಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಯುರೋಪ್‌ ಮೂಲದ ಈ ಗಡ್ಡೆಯನ್ನು 1970ರ ದಶಕದಲ್ಲಿ ತಂದು ನವದೆಹಲಿಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಬೆಳೆಸುವ ಪ್ರಯೋಗಗಳು ನಡೆದಿವೆ. ಮಹಾರಾಷ್ಟ್ರದ ಪುಣೆಯ ವಸಂತದಾದಾ ಸಕ್ಕರೆ ಸಂಸ್ಥೆಯಲ್ಲೂ ಇತ್ತೀಚೆಗೆ ಸಂಶೋಧನೆ ನಡೆದಿದೆ. ಇದರ ಭಾಗವಾಗಿ ಈಗ ಎಸ್‌.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲೂ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.

‘ಇದು ಮೂಲಂಗಿ ರೀತಿಯಲ್ಲಿ ಬೆಳೆಯುತ್ತದೆ. ಎಲೆಗಳು ಮೇಲೆ ಇದ್ದರೆ, ಭೂಮಿಯೊಳಗೆ ಗಡ್ಡೆ ತಯಾರಾಗುತ್ತದೆ. ಈ ಗಡ್ಡೆಯಲ್ಲಿ ಸಕ್ಕರೆ ಅಂಶ (ಸುಕ್ರೋಸ್‌) ಕಬ್ಬಿಗಿಂತ ಹೆಚ್ಚಾಗಿರುತ್ತದೆ. ಕಬ್ಬಿನಲ್ಲಿ ಶೇ 12–14ರಷ್ಟು ಇಳುವರಿ ಇದ್ದರೆ, ಇದರಲ್ಲಿ ಶೇ 19ರಿಂದ 20ರಷ್ಟು ಇರುತ್ತದೆ. ನೀರಿನ ಬಳಕೆ ಕೂಡ ಶೇ 30ರಿಂದ 40ರಷ್ಟು ಕಡಿಮೆಯಾಗಿದೆ’ ಎಂದು ಹೇಳಿದರು.

ADVERTISEMENT

‘ಬೆಳೆ ಕೈಗೆ ಬರಲು ಕೇವಲ 4ರಿಂದ 6 ತಿಂಗಳು ಸಾಕು (ಕಬ್ಬಿಗೆ 12 ತಿಂಗಳು), ಇದು ಬರಡು ಭೂಮಿ, ಸವಳು– ಜವಳು ಭೂಮಿಯಲ್ಲೂ ಬೆಳೆಯಬಲ್ಲದು. ಇಥೆನಾಲ್‌ ಕೂಡ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ. ಉಳಿದ ತ್ಯಾಜ್ಯವನ್ನು ಜಾನುವಾರುಗಳಿಗೆ ಮೇವಿನ ರೀತಿಯಲ್ಲಿ ಬಳಸಬಹುದು ಹಾಗೂ ಸಾವಯವ ಗೊಬ್ಬರ ಮಾಡಬಹುದಾಗಿದೆ’ ಎಂದು ತಿಳಿಸಿದರು.

‘ಪ್ರಾಯೋಗಿಕವಾಗಿ ಕೆಲವು ಪ್ರದೇಶಗಳನ್ನು ಆಯ್ದುಕೊಂಡು, ಬೆಳಸಲಾಗುತ್ತಿದೆ. ಪಂಜಾಬ್‌ದಲ್ಲಿ 8,000 ಎಕರೆಯಲ್ಲಿ ಬೆಳೆಯಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಸಲಾಗುವುದು. ಸಕ್ಕರೆ ಗಡ್ಡೆಯ ವಿವಿಧ ತಳಿಗಳ ಮೇಲೆ ಕೃಷಿ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದು, ದೇಶದ ಹವಾಗುಣಕ್ಕೆ ಹೊಂದಬಹುದಾದ ತಳಿಯನ್ನು ಬಹುಬೇಗನೇ ಶಿಫಾರಸ್ಸು ಮಾಡಬಹುದು’ ಎಂದರು.

‘ಸಕ್ಕರೆ ಗಡ್ಡೆಯನ್ನು ನುರಿಸಲು ಕಾರ್ಖಾನೆಗಳಲ್ಲಿ ಸ್ವಲ್ಪ ಮಾರ್ಪಾಡು ಮಾಡಬೇಕಾಗುತ್ತದೆ. ಇಲ್ಲಿ ಕಬ್ಬಿನ ರೀತಿಯ ನುರಿಸುವುದಿಲ್ಲ. ಗಡ್ಡೆಯನ್ನು ಸಣ್ಣ ಹೋಳುಗಳನ್ನಾಗಿ ಕತ್ತರಿಸಿ, ಅದರಲ್ಲಿರುವ ಸಕ್ಕರೆ ಅಂಶವನ್ನು ಬಿಸಿ ನೀರಿನ ಮೂಲಕ ಹೀರಿ ತೆಗೆಯಲಾಗುತ್ತದೆ. ಮಹಾರಾಷ್ಟ್ರದ ಇಸ್ಲಾಂಪುರದಲ್ಲಿ ಇಂತಹದೊಂದು ಘಟಕವನ್ನು ಪ್ರಾಯೋಗಿಕವಾಗಿ ಸ್ಥಾಪಿಸಲಾಗಿದೆ. ಎಲ್ಲ ಹಂತಗಳಲ್ಲೂ ಸಂಶೋಧನೆ, ಪ್ರಯೋಗಗಳು ನಡೆದಿವೆ’ ಎಂದು ಹೇಳಿದರು.

‘ಸಕ್ಕರೆ ಗಡ್ಡೆ ಬೆಳೆಯುವುದು ಹಾಗೂ ಅದನ್ನು ನುರಿಸುವ (ಕಾರ್ಖಾನೆ) ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆದರೆ, ಹಂತ ಹಂತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ತೊಡಗಿಸಿಕೊಳ್ಳಲಾಗುವುದು. ಆಸಕ್ತ ರೈತರು, ಬೆಳಗಾವಿಯ ಎಸ್‌.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು’ ಎಂದರು.

ಎಸ್‌.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಆರ್‌.ಬಿ. ಖಾಂಡಗಾವಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.