ADVERTISEMENT

ಕಬ್ಬಿನ ದರ: ಕಾರ್ಖಾನೆಗಳ ಜೊತೆ ಒಪ್ಪಂದ ಮಾಡಿಕೊಳ್ಳಿ

ಸಕ್ಕರೆ ಸಚಿವ ಸಿ.ಟಿ. ರವಿ ಕೋರಿಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 12:59 IST
Last Updated 20 ಡಿಸೆಂಬರ್ 2019, 12:59 IST

ಬೆಳಗಾವಿ: ‘ಎಫ್‌ಆರ್‌ಪಿಗಿಂತ (ನ್ಯಾಯ ಹಾಗೂ ಲಾಭದಾಯಕ ದರ) ಹೆಚ್ಚಿನ ದರ ಘೋಷಣೆ ಮಾಡುವ ಸಕ್ಕರೆ ಕಾರ್ಖಾನೆಗಳ ಜತೆ ರೈತರು ಲಿಖಿತ ಒಪ್ಪಂದ ಮಾಡಿಕೊಳ್ಳಬೇಕು‘ ಎಂದು ಸಕ್ಕರೆ ಸಚಿವ ಸಿ.ಟಿ.ರವಿ ಮನವಿ ಮಾಡಿಕೊಂಡರು.

ನಗರದ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ರೈತರಿಗೆ ಎಫ್‌ಆರ್‌ಪಿ ದರ ಕೊಡಿಸಲು ಸರ್ಕಾರ ಬದ್ಧವಾಗಿದೆ. ಸಕ್ಕರೆ ಕಾರ್ಖಾನೆಗಳ ಯಾವುದೇ ಮುಲಾಜಿಗೆ ಒಳಗಾಗದೇ ರೈತರಿಗೆ ಎಫ್‌ಆರ್‌ಪಿ ದರ ಕೊಡಿಸುತ್ತೇವೆ’ ಎಂದು ಹೇಳಿದರು.

‘ಹೆಚ್ಚಿನ ಕಬ್ಬು ಪಡೆಯುವ ಉದ್ದೇಶದಿಂದ ಕೆಲವು ಕಾರ್ಖಾನೆಗಳು ಎಫ್‌ಆರ್‌ಪಿಗಿಂತ ಹೆಚ್ಚಿನ ದರ ಘೋಷಣೆ ಮಾಡುತ್ತವೆ. ಆ ನಂತರ ನೀಡುವುದಿಲ್ಲ. ಇಂತಹ ಸಂದರ್ಭದಲ್ಲಿ ರೈತರು ಲಿಖಿತ ಒಪ್ಪಂದ ಮಾಡಿಕೊಂಡಿದ್ದರೆ ಕಾರ್ಖಾನೆಗಳ ಮಾಲೀಕರ ಮೂಗುದಾರ ಹಿಡಿಯಲು ಸಾಧ್ಯವಾಗುತ್ತದೆ. ಸರ್ಕಾರಕ್ಕೂ ಕಾನೂನಿನ ಬಲ ಸಿಕ್ಕಂತಾಗುತ್ತದೆ’ ಎಂದು ನುಡಿದರು.

ADVERTISEMENT

8 ಕಾರ್ಖಾನೆಗಳ ಬಾಕಿ:

‘ಕಳೆದ ವರ್ಷ ಬೆಳಗಾವಿ ಜಿಲ್ಲೆಯ ಮಲಪ್ರಭಾ ಸಕ್ಕರೆ ಕಾರ್ಖಾನೆ ಸೇರಿದಂತೆ ರಾಜ್ಯದಲ್ಲಿ 8 ಸಕ್ಕರೆ ಕಾರ್ಖಾನೆಗಳು ₹ 37.69 ಕೋಟಿ ರೈತರ ಬಾಕಿ ಉಳಿಸಿಕೊಂಡಿವೆ. ಬಾಕಿ ಹಣ ಪಾವತಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ’ ಎಂದರು.

‘ರಾಜ್ಯದಲ್ಲಿ 69 ಕಾರ್ಖಾನೆಗಳ ಪೈಕಿ 61 ಕಾರ್ಖಾನೆಗಳು ಕಬ್ಬು ಅರೆಯಲು ಆರಂಭಿಸಿಭಿವೆ. ಎಫ್.ಆರ್.ಪಿ. ಪ್ರಕಾರ ₹ 11,948 ಕೋಟಿ ಬಿಲ್ ಬಾಕಿ ಇತ್ತು. ಇದುವರೆಗೆ ಒಟ್ಟಾರೆ ₹ 12,055 ಕೋಟಿ ರೂಪಾಯಿ ಪಾವತಿಸಲಾಗಿದೆ. ಕೆಲವು ಕಾರ್ಖಾನೆಗಳು ಎಫ್‌ಆರ್‌ಪಿ ದರಕ್ಕಿಂತ ಹೆಚ್ಚು ಹಣ ನೀಡಿದ್ದರಿಂದ ಪಾವತಿಯ ಮೊತ್ತವು ಹೆಚ್ಚಾಗಿದೆ’ ಎಂದು ಅವರು ತಿಳಿಸಿದರು.

ಫಸಲ್‌ ಬಿಮಾ ಪಟ್ಟಿಗೆ:

‘ಕಬ್ಬು ಹಾಗೂ ಕಾಫಿ ಬೆಳೆಯನ್ನೂ ಫಸಲ್‌ ಬಿಮಾ ಯೋಜನೆಯ ಪಟ್ಟಿಗೆ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಪ್ರವಾಹ, ಬರದಂತಹ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಈ ಬೆಳೆಗಳಿಗೂ ಪರಿಹಾರ ಪಡೆಯಲು ಬೆಳೆಗಾರರಿಗೆ ಸಾಧ್ಯವಾಗುತ್ತದೆ’ ಎಂದರು.

‘ಪ್ರವಾಹದಿಂದ ಉಂಟಾಗಿದ್ದ ಬೆಳೆಹಾನಿಗೆ ಇದುವರೆಗೆ ಪ್ರತಿ ಹೆಕ್ಟೇರಿಗೆ ₹ 18 ಸಾವಿರ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿ, ಈ ಹಣದ ಜೊತೆಗೆ ಹೆಚ್ಚುವರಿಯಾಗಿ ₹ 10 ಸಾವಿರ ಸೇರಿಸಿ ಒಟ್ಟು ₹ 28 ಸಾವಿರ ಪರಿಹಾರ ನೀಡಲಾಗುತ್ತಿದೆ. ಬ್ಯಾಂಕ್‌ ದಾಖಲೆಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ಕೆಲವರು ರೈತರಿಗೆ ಪರಿಹಾರ ದೊರೆತಿಲ್ಲ. ಇನ್ನುಳಿದ ರೈತರಿಗೆ ಪರಿಹಾರದ ಹಣ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಹೊಸ ಉಪಕರಣ:

‘ಕಬ್ಬಿನಲ್ಲಿರುವ ಸಕ್ಕರೆಯ ಪ್ರಮಾಣ ಕಂಡು ಹಿಡಿಯುವ ಯಂತ್ರ ಆಸ್ಟ್ರೇಲಿಯಾದಲ್ಲಿದ್ದು, ಇದನ್ನು ಆದಷ್ಟು ಬೇಗ ಇಲ್ಲಿಗೆ ತರಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ₹ 2 ಕೋಟಿಗೆ ನೆರವು ನೀಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.