ADVERTISEMENT

ತಬಲಾ ಸಾಧಕ ಬಂಡೂ ಮಾಸ್ತರ್

ಪ್ರಸನ್ನ ಕುಲಕರ್ಣಿ
Published 15 ಜನವರಿ 2022, 13:17 IST
Last Updated 15 ಜನವರಿ 2022, 13:17 IST
ಖಾನಾಪುರದಲ್ಲಿ ಈಚೆಗೆ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ತಬಲಾ ಕ್ಷೇತ್ರದ ಸಾಧಕ ಬಂಡೂ ಮಾಸ್ತರ ಅವರನ್ನು ನಾರಾಯಣ ಮಯೇಕರ, ಬಾಳಾಸಾಹೇಬ ಶೇಲಾರ, ಗೋಪಾಳ ಪಾಟೀಲ ಗೌರವಿಸಿದರು
ಖಾನಾಪುರದಲ್ಲಿ ಈಚೆಗೆ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ತಬಲಾ ಕ್ಷೇತ್ರದ ಸಾಧಕ ಬಂಡೂ ಮಾಸ್ತರ ಅವರನ್ನು ನಾರಾಯಣ ಮಯೇಕರ, ಬಾಳಾಸಾಹೇಬ ಶೇಲಾರ, ಗೋಪಾಳ ಪಾಟೀಲ ಗೌರವಿಸಿದರು   

ಖಾನಾಪುರ: ಶಾಸ್ತ್ರೀಯ ಸಂಗೀತ, ಭಕ್ತಿಗೀತೆ, ಭಾವಗೀತೆ, ಭರತನಾಟ್ಯ ಹೀಗೆ ಸಂಗೀತದ ವಿಶೇಷ ಪ್ರಾಕಾರಗಳಲ್ಲಿ ತಬಲಾ ವಾದನದ ಮೂಲಕ ವಿಶೇಷ ಸಾಧನೆ ಮಾಡಿರುವ ಗಜಾನನ ಅಣ್ಣಾಜಿ ಕುಲಕರ್ಣಿ (ಬಂಡೂ ಮಾಸ್ತರ್) ತಮ್ಮ ವಿದ್ಯೆಯನ್ನು ಹಲವರಿಗೆ ಧಾರೆ ಎರೆದು ಹಲವು ಶಿಷ್ಯಗಣವನ್ನು ಸಂಪಾದಿಸಿದ್ದಾರೆ.

ಸಂಗೀತ ಪ್ರೇಮಿಗಳ ಪಾಲಿಗೆ ಬಂಡೂ ಮಾಸ್ತರ್ ಎಂದೇ ಚಿರಪರಿಚಿತರಾಗಿರುವ ಅವರು ಉತ್ತರ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಹಲವು ಕಾರ್ಯಕ್ರಮ ನೀಡಿ ಸಂಗೀತ ಕ್ಷೇತ್ರದ ವಿಶೇಷ ಸಾಧಕ ಎಸಿಕೊಂಡಿದ್ದಾರೆ.

1944ರ ನ.29ರಂದು ಬೆಳಗಾವಿ ತಾಲ್ಲೂಕು ಮಾಸ್ತಮರ್ಡಿಯಲ್ಲಿ ಜನಿಸಿದ ಅವರು ಎಸ್ಸೆಸ್ಸೆಲ್ಸಿ, ಟಿ.ಸಿ.ಎಚ್. ಶಿಕ್ಷಣ ಪಡೆದು ಶಿಕ್ಷಕ ವೃತ್ತಿ ಗಳಿಸಿದ್ದರು.

ADVERTISEMENT

ತಬಲಾ ವಾದಕರಾಗಿದ್ದರಿಂದ ತಂದೆಯಿಂದ ತಬಲಾ ವಾದನ ಕಲಿತು ಬಳಿಕ ಶಿಕ್ಷಕ ವೃತ್ತಿಯ ಜೊತೆಯಲ್ಲೇ ಸಂಗೀತ ವಿಶಾರದ, ಕರ್ನಾಟಕ ತಬಲಾ ಸೀನಿಯರ್ ಗ್ರೇಡ್ ಪದವಿಗಳನ್ನು ಪೂರೈಸಿದರು.

ನಾಡಿನ ಹೆಸರಾಂತ ತಬಲಾ ವಾದಕರಾದ ಪಂ.ನಾರಾಯಣ ಚಿಕ್ಕೋಡಿ, ಪಂ.ಬಸವರಾಜ ಬೆಂಡಿಗೇರಿ ಅವರ ಬಳಿ ದಶಕಗಳ ಕಾಲ ತರಬೇತಿ ಪಡೆದ ಬಳಿಕ ಹಲವಾರು ಸಂಗೀತ ಕಲಾವಿದರ ಕಾರ್ಯಕ್ರಮಗಳಲ್ಲಿ ತಬಲಾ ಸಾಥ್‌ ನೀಡುವ ಮೂಲಕ ತಬಲಾ ವಾದನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಶಾಸ್ತ್ರೀಯ ಸಂಗೀತದತ್ತ ಚಿಕ್ಕಂದಿನಿಂದಲೂ ಒಲವು ಇದ್ದ ಕಾರಣ ಶಾಲಾ ದಿನಗಳಿಂದಲೇ ಸಂಗೀತ ಮತ್ತು ತಬಲಾ ವಾದನದ ಗೀಳನ್ನು ರೂಢಿಸಿಕೊಂಡಿದ್ದರು. ಕುಮಾರ ಗಂಧರ್ವ, ಉತ್ತರಕರ ಬುವಾ, ಪುರಾಣಿಕಮಠ, ಶ್ಯಾಮಭಾವು ವಿಜಾಪುರ, ಬಸವರಾಜ ರಾಜಗುರು ಮತ್ತಿತರ ಸಂಗೀತ ಕ್ಷೇತ್ರದ ಸಾಧಕರಿಗೆ ತಬಲಾ ಸಾಥ್‌ ನೀಡಿ ಸೈ ಎನಿಸಿಕೊಂಡಿದ್ದಾರೆ.

ದೇಶದ ವಿವಿಧೆಡೆ ಸಂಗೀತ ಸಮಾರಂಭಗಳಲ್ಲಿ ಭಾಗವಹಿಸಿ ಯಶಸ್ವಿ ತಬಲಾ ವಾದನ ಪ್ರದರ್ಶನ ನೀಡಿದ್ದಾರೆ. ವಿದೇಶಗಳಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿ ಸಂಗೀತ ಪ್ರೇಮಿಗಳನ್ನು ರಂಜಿಸಿದ್ದಾರೆ. ಇಳಿ ವಯಸ್ಸಿನಲ್ಲೂ ತಬಲಾ ವಿದ್ಯೆ ಕಲಿಯುವವರಿಗೆ ಗುರುಗಳಾಗಿ ವಿದ್ಯಾದಾನ ಮಾಡುತ್ತಿದ್ದಾರೆ.

ಅವರ ಸಂಗೀತ ಸಾಧನೆ ಗುರುತಿಸಿ ಹಲವು ಸಂಘ-ಸಂಸ್ಥೆಗಳವರು ಸನ್ಮಾನಿಸಿ ಗೌರವಿಸಿದ್ದಾರೆ. ಸದಸ್ಯ ಅವರು ಬೆಳಗಾವಿಯ ಚಿದಂಬರ ನಗರದಲ್ಲಿ ವಾಸವಿದ್ದು, ತಬಲಾ ವಾದನವನ್ನು ದಿನಚರಿಯ ಭಾಗವನ್ನಾಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.