ADVERTISEMENT

ಅಂಗವಿಕಲರು, ಅನಾರೋಗ್ಯಪೀಡಿತರಿಗೆ ಸಮೀಕ್ಷೆ ಕೆಲಸದಿಂದ ವಿನಾಯಿತಿ ಕೊರಿದ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 6:22 IST
Last Updated 24 ಸೆಪ್ಟೆಂಬರ್ 2025, 6:22 IST
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಾಥಮಿಕ ಶಾಲೆಗಳ ಶಿಕ್ಷಕರು ಮಂಗಳವಾರ ಪ್ರತಿಭಟನೆ ನಡೆಸಿದರು   ಪ್ರಜಾವಾಣಿ ಚಿತ್ರ
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಾಥಮಿಕ ಶಾಲೆಗಳ ಶಿಕ್ಷಕರು ಮಂಗಳವಾರ ಪ್ರತಿಭಟನೆ ನಡೆಸಿದರು   ಪ್ರಜಾವಾಣಿ ಚಿತ್ರ   

ಬೆಳಗಾವಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಅಂಗವಿಕಲ, ತೀವ್ರ ತರಹದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮತ್ತು ಸೇವಾನಿವೃತ್ತಿ ಅಂಚಿನಲ್ಲಿ ಇರುವ ಶಿಕ್ಷಕರನ್ನು ನೇಮಿಸಿರುವುದನ್ನು ಖಂಡಿಸಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಶಿಕ್ಷಕರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಶಿಕ್ಷಕರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಯಕುಮಾರ ಹೆಬಳಿ, ‘ಸಮೀಕ್ಷೆ ನಡೆಸಲು ನಾವು ಸಿದ್ಧರಿದ್ದೇವೆ. ಆದರೆ, ಗರ್ಭಿಣಿಯರು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮತ್ತು ಅಂಗವಿಕಲ ಶಿಕ್ಷಕರನ್ನು ಸಮೀಕ್ಷೆದಾರರನ್ನಾಗಿ ನೇಮಿಸಿದ್ದಾರೆ. ಅಚ್ಚರಿ ಎಂದರೆ ಮೃತ ಶಿಕ್ಷಕರ ಹೆಸರು ಸಮೀಕ್ಷೆದಾರರ ಪಟ್ಟಿಯಲ್ಲಿದೆ. ನಾವು ಕರ್ತವ್ಯ ನಿರ್ವಹಿಸುವ ಶಾಲೆಗಳ ಸ್ಥಳ ಬಿಟ್ಟು, ಬೇರೆ ಬೇರೆ ಕಡೆ ಸಮೀಕ್ಷೆಗೆ ನಿಯೋಜಿಸಿದ್ದಾರೆ. ಒಬ್ಬ ಸಮೀಕ್ಷೆದಾರ 16 ದಿನಗಳಲ್ಲಿ 9 ಬೇರೆ ಬೇರೆ ಸ್ಥಳಗಳಲ್ಲಿ ಸಮೀಕ್ಷೆ ಮಾಡುವಂತೆ ತಿಳಿಸಿರುವುದು ಸರಿಯಲ್ಲ’ ಎಂದು ದೂರಿದರು.

ADVERTISEMENT

‘ಬೂತ್‌ಮಟ್ಟದಲ್ಲಿ ಚುನಾವಣೆ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರನ್ನೂ ಸಮೀಕ್ಷೆಗೆ ಬಳಸಿಕೊಳ್ಳಲಾಗಿದೆ. ಒಬ್ಬ ಶಿಕ್ಷಕ ಏಕಕಾಲಕ್ಕೆ ಎರಡೂ ಕೆಲಸ ಹೇಗೆ ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಸಮೀಕ್ಷೆದಾರರ ನೇಮಕದಲ್ಲಿ ಆಗಿರುವ ಲೋಪವನ್ನು ತಕ್ಷಣವೇ ಸರಿಪಡಿಸಬೇಕು. ಅಂಗವಿಕಲರು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮತ್ತು ವಯಸ್ಸಾದ ಶಿಕ್ಷಕರಿಗೆ ಸಮೀಕ್ಷೆ ಕೆಲಸದಿಂದ ವಿನಾಯಿತಿ ಕೊಡಬೇಕು. ಇಲ್ಲದಿದ್ದರೆ ನಾವು ಸಮೀಕ್ಷೆ ಬಹಿಷ್ಕರಿಸುತ್ತೇವೆ’ ಎಂದು ಎಚ್ಚರಿಕೆ ಕೊಟ್ಟರು.

‘ನಾನು ಯಮನಾಪುರದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಆದರೆ, ಅಲಾರವಾಡದಲ್ಲಿ ಸಮೀಕ್ಷೆಗೆ ನನ್ನನ್ನು ನಿಯೋಜಿಸಿದ್ದಾರೆ. ನಾನು ಅಂಗವಿಕಲನಿದ್ದು, ಬಹುಮಹಡಿ ಕಟ್ಟಡಗಳನ್ನು ಹತ್ತಿಹೋಗಲು ಕಷ್ಟವಾಗುತ್ತದೆ. ಬೆನ್ನುನೋವಿನ ಸಮಸ್ಯೆಯೂ ಇದೆ. ಹಾಗಾಗಿ ವಿನಾಯಿತಿ ಕೊಡಬೇಕು’ ಎಂದು ಬಸವಣ್ಣಿ ಕರಡಿಗುದ್ದಿ ಕೋರಿದರು.

‘ತೀವ್ರತರಹದ ಆರೋಗ್ಯ ಸಮಸ್ಯೆಯಿಂದ ನಾನು ಬಳಲುತ್ತಿದೆ. ನನಗೆ ಹೆಚ್ಚಿನ ಸಮಯ ನಿಲ್ಲಲು, ನಡೆಯಲು ಆಗುವುದಿಲ್ಲ. ಹಾಗಾಗಿ ಸಮೀಕ್ಷೆ ಕೆಲಸದಿಂದ ವಿನಾಯಿತಿ ಕೊಡಿ’ ಎಂದು ಶಿಕ್ಷಕಿ ಕೆ.ಬಿ.ಕುಷ್ಟೆ ಮನವಿ ಮಾಡಿದರು.

ರಮೇಶ ಗೋಣಿ, ಕೆ.ಎಸ್.ರಾಚನ್ನವರ, ಬಾಬು ಸೊಗಲನ್ನವರ, ಚಂದ್ರು ಕೋಲಕಾರ, ಶಿವಾನಂದ ರೋಡಬಸಣ್ಣವರ, ರೇಖಾ ಅಂಗಡಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.