ADVERTISEMENT

‘ಸಂವಹನ ಕೌಶಲಕ್ಕೆ ತಂತ್ರಜ್ಞಾನ ಸಾಕ್ಷರತೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 10:59 IST
Last Updated 2 ಜೂನ್ 2020, 10:59 IST

ಬೆಳಗಾವಿ: ‘ಕೋವಿಡ್-19 ನಂತರದ ಜಗತ್ತಿನಲ್ಲಿ ಸಂವಹನ ಕೌಶಲಕ್ಕೆ ತಂತ್ರಜ್ಞಾನ ಸಾಕ್ಷರತೆಯು ಅತ್ಯವಶ್ಯವಾಗಿದೆ’ ಎಂದುಹೈದರಾಬಾದ್‌ ಉಸ್ಮಾನಿಯಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಸುಮಿತಾ ರಾಯ್‌ ಹೇಳಿದರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಿಂದ ‘ಎಫೆಕ್ಟಿವ್ ಕಮ್ಯುನಿಕೇಷನ್ ಸ್ಕಿಲ್ ಇನ್ ದ ಡಿಜಿಟಲ್ ಎರಾ’ ಎಂಬ ವಿಷಯ ಕುರಿತು ಈಚೆಗೆ ಆಯೋಜಿಸಿದ್ದ ಆನ್‌ಲೈನ್ ಅಂತರರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಕೊರೊನಾ ಸೃಷ್ಟಿಸಿರುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಮೂಲಕ ನಾವು ಸುಧಾರಣೆ ಕಾಣಬೇಕು. ಇದಕ್ಕಾಗಿ ತಂತ್ರಜ್ಞಾನ ಬಳಸಿಕೊಳ್ಳಬೇಕಾಗಿದೆ’ ಎಂದರು.

ADVERTISEMENT

ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಉದ್ಘಾಟಿಸಿದರು. ವಿಭಾಗ ಮುಖ್ಯಸ್ಥ ಪ್ರೊ.ವಿ.ಎಫ್. ನಾಗಣ್ಣವರ ಮಾತನಾಡಿದರು.

ಮೊದಲ ಗೋಷ್ಠಿಯಲ್ಲಿ ಡಾ.ಅಜಯ ಚೊಬೆ ಅವರು ‘ಭಾಷಾ ಪರಿಣತಿ ಮತ್ತು ಪ್ರಬಂದ ಮಂಡನಾ ಕೌಶಲ’, 2ನೇ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾದ ಜೋಧಪುರದ ಜೈ ನಾರಾಯಣ ವ್ಯಾಸ ವಿಶ್ವವಿದ್ಯಾಲಯದ ಡಾ.ವಿಭಾ ಭೂತ ‘ವರ್ಚಸ್ಸು ನಿಯಮಗಳು: ಸಂಭಾಷಣೆಯ ಮಹತ್ವ’ ವಿಷಯ ಕುರಿತು ಮಾತನಾಡಿದರು.

3ನೇ ಗೋಷ್ಠಿಯಲ್ಲಿ ಅಮೆರಿಕದ ಪ್ರೊ.ನೀಲಾ ಭಟ್ಟಾಚಾರ್ಯ ಅವರು ‘ಸಂವಹನವು ಸಮ್ಮಿಲನ: ತಂತ್ರಜ್ಞಾನ ಯುಗದಲ್ಲಿ ಅನುಕರಣೆಯ ಅನಾವರಣ’ ವಿಷಯದ ಬಗ್ಗೆ ವಿಷಯ ಮಂಡಿಸಿದರು.

ವಿಚಾರಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ.ನಾಗರತ್ನಾ ಪರಾಂಡೆ ಸ್ವಾಗತಿಸಿದರು. ಪೂಜಾ ಹಲ್ಯಾಳ ನಿರೂಪಿಸಿದರು. ಡಾ.ಕವಿತಾ ಕುಸುಗಲ್ಲ ವಂದಿಸಿದರು.

ಗೋಷ್ಠಿಗಳ ಸಂಯೋಜಕರಾಗಿ ಡಾ.ತಾಂಡವಗೌಡ, ಡಾ.ಫಯಾಜ್ ಅಹಮ್ಮದ್ ಇಳಕಲ್ ಮತ್ತು ಡಾ.ಮಧುಶ್ರೀ ಕಳ್ಳಿಮನಿ ಕಾರ್ಯನಿರ್ವಹಿಸಿದರು.

ಕುಲಸಚಿವರಾದ ಪ್ರೊ.ಬಸವರಾಜ ಪದ್ಮಶಾಲಿ, ಪ್ರೊ.ಎಸ್.ಎಂ. ಹುರಕಡ್ಲಿ ಹಾಗೂ ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ, ಭೂಗೋಳಶಾಸ್ತ್ರ ವಿಭಾಗದ ಡಾ.ಬಸವರಾಜ ಬಗಾಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.