ADVERTISEMENT

ಮೂರು ವರ್ಷವಾದರೂ ಸಿಗದ ಪರಿಹಾರ

ಆಶ್ರಯವಿಲ್ಲದೆ ಪರದಾಡುತ್ತಿರುವ ತಬಲಾ ವಾದಕ ನೂರುದ್ದೀನ

ರವಿ ಎಂ.ಹುಲಕುಂದ
Published 15 ಜನವರಿ 2022, 10:13 IST
Last Updated 15 ಜನವರಿ 2022, 10:13 IST
ಬೈಲಹೊಂಗಲ ಪಟ್ಟಣದ ಕಿಲ್ಲೇದಾರ ಗಲ್ಲಿಯಲ್ಲಿರುವ ತಮ್ಮ ಮನೆ ಕುಸಿದು ಬಿದ್ದಿರುವುದನ್ನು ಕಲಾವಿದ ನೂರುದ್ದೀನ ಗೋರೆಖಾನ ತೋರಿಸಿದರು
ಬೈಲಹೊಂಗಲ ಪಟ್ಟಣದ ಕಿಲ್ಲೇದಾರ ಗಲ್ಲಿಯಲ್ಲಿರುವ ತಮ್ಮ ಮನೆ ಕುಸಿದು ಬಿದ್ದಿರುವುದನ್ನು ಕಲಾವಿದ ನೂರುದ್ದೀನ ಗೋರೆಖಾನ ತೋರಿಸಿದರು   

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಜಾನಪದ ಕಲಾವಿದ, ಶ್ರೇಷ್ಠ ತಬಲಾ ವಾದಕ ನೂರುದ್ದೀನ ಗೋರೆಖಾನ ಅವರು ಅತಿವೃಷ್ಟಿಯಿಂದ ಮನೆ ಕಳೆದುಕೊಂಡು 3 ವರ್ಷವಾದರೂ ಪರಿಹಾರ ಧನ ಸಿಕ್ಕಿಲ್ಲ.

ಪಟ್ಟಣದ ಪುರಸಭೆ ವಾರ್ಡ್ನಂ.8ರ ಕಿಲ್ಲೇದಾರ ಗಲ್ಲಿ ನಿವಾಸಿಯಾಗಿರುವ ಅವರ ಮನೆ ಮಳೆಯಿಂದ ಸಂಪೂರ್ಣ ಕುಸಿದು ಬಿದ್ದಿದೆ.

ಹೊಟ್ಟೆ ಪಾಡಿಗಾಗಿ ಪೂರ್ವಜರು ಬಿಟ್ಟು ಹೋದ ಬಳುವಳಿಯಾದ ತಬಲಾ ವಾದವನ್ನು ಬದುಕಿಗೆ ಆಸರೆಯಾಗಿಸಿಕೊಂಡಿದ್ದಾರೆ. ಅದರಿಂದ ಬರುವ ಕಡಿಮೆ ಸಂಪಾದನೆಯಲ್ಲಿ ಒಂದ್ಹೊತ್ತಿನ ಊಟ ಮಾಡಿ ಕಾಲ ತಳ್ಳುತ್ತಿದ್ದಾರೆ. ಅವರಿಗೆ ಸ್ವಂತ ದುಡಿಮೆಯಿಂದ ಮನೆ ದುರಸ್ತಿ ಮಾಡಿಸಿಕೊಳ್ಳುವಷ್ಟು ಶಕ್ತಿ ಇಲ್ಲವಾಗಿದೆ. ಪರಿಣಾಮ, ಅತಂತ್ರ ಸ್ಥಿತಿಯಲ್ಲಿದ್ದಾರೆ.

ADVERTISEMENT

2019ರಲ್ಲಿ ಮಳೆಯಿಂದ ಸಂಪೂರ್ಣ ಕುಸಿದು ಬಿದ್ದಿರುವ ಬಗ್ಗೆ ವಾರ್ಡ್ಸದಸ್ಯರ ಮೂಲಕ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ಪರಿಹಾರ ಧನಕ್ಕಾಗಿ ಅರ್ಜಿಸಲ್ಲಿಸಿದ್ದಾರೆ. ಆದರೆ, ಸರ್ಕಾರದಿಂದ ಆರ್ಥಿಕ ನೆರವು ಸಿಕ್ಕಿಲ್ಲ. ‘ಹೀಗಾಗಿ ನನ್ನ ಬದುಕು ಮೂರಾ ಬಟ್ಟೆಯಾಗಿದೆ’ ಎಂದು ನೂರುದ್ದೀನ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ಮಣ್ಣಿನಿಂದ ಕಟ್ಟಿದ್ದ ಸಣ್ಣ ಮನೆಯೇ ನಮಗೆ ಬಂಗಲೆಯಾಗಿತ್ತು. ಅಲ್ಲಿ ತಾಯಿ, ಪತ್ನಿ, ಮೂವರು ಪುತ್ರರು ವಾಸವಾಗಿದ್ದೆವು. ಹೇಗೋ ಜೀವನದ ಬಂಡಿ ಸಾಗುತ್ತಿತ್ತು. ಆದರೆ, ಆ ವರುಣನ ಅವಕೃಪೆಯಿಂದ ಮನೆ ಕುಸಿಯಿತು. ಇದರಿಂದಾಗಿ ನಮ್ಮ ಬದುಕು ಬೀದಿಗೆ ಬಿದ್ದಿತು. ನೆರೆ– ಹೊರೆಯವರು, ಸ್ನೇಹಿತರ ಸಹಾಯ– ಸಹಕಾರದಿಂದ ಬೇರೆಡೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ’ ಎಂದು ಹೇಳಿದರು.

‘₹ 3 ಸಾವಿರ ಬಾಡಿಗೆ ಕಟ್ಟಲು ಕಷ್ಟವಾಗುತ್ತಿದೆ. ಹಿರಿಯ ಮಗ ಬೆಂಗಳೂರಲ್ಲಿ ಕೂಲಿ ಮಾಡಿ ಬಾಡಿಗೆ ಕಟ್ಟಲು ಮತ್ತು ಕುಟುಂಬ ನಿರ್ವಹಣೆಗೆ ಹಣ ಕಳುಹಿಸುತ್ತಿದ್ದಾನೆ. ಇದರಿಂದ ಬದುಕಿನ ಬಂಡಿ ಮುನ್ನಡೆದಿದೆ. ಇಲ್ಲದಿದ್ದರೆ ಬೀದಿಯಲ್ಲಿ ಬದುಕು ಸಾಗಿಸಬೇಕಾಗಿತ್ತು’ ಎಂದು ಕಣ್ಣೀರಾದರು.

‘ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಸ್ಥಿತಿ ಅವಲೋಕಿಸಿ ಪರಿಹಾರ ಕಲ್ಪಿಸಬೇಕು’ ಎಂದು ಕೋರಿದರು.

‘ನನಗೆ ಪರಿಹಾರ ಬಂದಿಲ್ಲವೇಕೆ ಎನ್ನುವುದೇ ತಿಳಿಯುತ್ತಿಲ್ಲ. ಅಲೆದು ಅಲೆದು ಸಾಕಾಗಿದೆ’ ಎನ್ನುತ್ತಾರೆ ಅವರು.

‘ಆ ಕಲಾವಿದರ ಮನೆ ಬಿದ್ದಾಗ ಎಲ್ಲರೂ ಮರುಗಿದೆವು. ಸ್ವತಃ ಕಾಳಜಿ ವಹಿಸಿ ಎಲ್ಲ ದಾಖಲೆ ಪತ್ರವನ್ನು ಸಂಬಂಧಪಟ್ಟ ಇಲಾಖೆಯವರಿಗೆ ಕೊಡಿಸಿದೆ. ಆದರೆ, ಪರಿಹಾರ ಧನ ದೊರೆತಿಲ್ಲ. ಅಧಿಕಾರಿಗಳು ಇನ್ನಾದರೂ ಅವರಿಗೆ ಸ್ಪಂದಿಸಬೇಕು’ ಎಂದು ಪುರಸಭೆ ಸದಸ್ಯ ಶಿವಾನಂದ ಕೋಲಕಾರ ಒತ್ತಾಯಿಸಿದರು.

ನೂರುದ್ದೀನ ಅವರ ಸಂಪರ್ಕಕ್ಕೆ ಮೊ.ಸಂಖ್ಯೆ:9945982536.

ಮಾಹಿತಿ ಸಂಗ್ರಹಿಸಿ ಕ್ರಮ

ಗ್ರಾಮ ಲೆಕ್ಕಾಧಿಕಾರಿಯನ್ನು ಶೀಘ್ರವೇ ಸ್ಥಳಕ್ಕೆ ಕಳುಹಿಸಿ ಮಾಹಿತಿ ಸಂಗ್ರಹಿಸಿ ಕಲಾವಿದನಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

–ಬಸವರಾಜ ನಾಗರಾಳ, ತಹಶೀಲ್ದಾರ್‌, ಬೈಲಹೊಂಗಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.